ಮಧುರ ಗಣಪನ ಮುಕ್ತಕಗಳು ಮಧುರಕಾನನ ಗಣಪತಿ ಭಟ್ಟ ಅವರ ಕೃತಿಯಾಗಿದೆ. ಇಲ್ಲಿ ಅರಿಷಡ್ವರ್ಗಗಳ ಬಗ್ಗೆ ಬಹಳ ಸುಂದರ ವ್ಯಾಖ್ಯಾನವನ್ನೇ ಮಾಡಬಹುದಾಗಿದೆ. ಆರಾರು ವೈರಿಗಳು ಎಲ್ಲಿಹರು ಎಂದರೆ, ಯಾರು ಯಾರು? ವೈರಿಗಳು ಎಲ್ಲಿರುವರು ಎಂದೂ, ಅರಿಷಡ್ವರ್ಗಗಳು ಎಂದೂ ತಿಳಿಯಬೇಕು. ಆರು ಎಂಬಲ್ಲಿ ಯಾರು ಎಂದೂ, ಸಂಖ್ಯೆ ಆರು ಎಂದೂ ತೆಗೆದುಕೊಳ್ಳಬಹುದು. ಆದ್ದರಿಂದ ಆರು ವೈರಿಗಳು ಎಲ್ಲಿರುವರು ಎಂದು ಸುಮ್ಮನೆ ಹುಡುಕುವುದರಲ್ಲಿ ಅರ್ಥವಿಲ್ಲ. ಕಾಮಾದಿ ಷಡ್ವರ್ಗಗಳು ಮನುಜರಲ್ಲೇ ಇವೆ, ಇದನ್ನು ತಿಳಿಯಬೇಕು ಎಂದಿದ್ದಾರೆ. ಕನ್ನಡ ತಾಯಿಯ ಸೇವೆ ಮಾಡಬೇಕು ಅಂದರೆ ಬರೆವಣಿಗೆ ಜೊತೆಗೆ ಓದು ಹಾಗೂ ಕನ್ನಡಕ್ಕಾಗಿ ಸಂಘಟನೆಗಳಲ್ಲಿ ಒಳ್ಳೆಯ ಮನವಿಟ್ಟು ಸೇವೆಗೈದಾಗ ಮಾತ್ರ ಅದು ಕನ್ನಡದ ಸೇವೆ, ಬರಿದೆ ಮಾತಿನಲ್ಲಿ ಅಲ್ಲ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಮನತಟ್ಟುವಂತಹ ಗಟ್ಟಿ ಸಾಹಿತ್ಯವನ್ನು ಉಣಿಸುವ ಸಲುವಾಗಿ ಮುಕ್ತಕಗಳು ಎಂಬ ಮುತ್ತುಗಳನ್ನು ಆಯ್ದು ನಮ್ಮ ಮುಂದೆ ಇಟ್ಟಿದ್ದಾರೆ. ಬೆರಳೆಣಿಕೆಯಷ್ಟನ್ನು ಮಾತ್ರ ಇಲ್ಲಿ ಉಲ್ಲೇಖಿಸಿದ್ದೇನೆ. ಉಳಿದೆಲ್ಲವುಗಳನ್ನು ಓದಿ, ಅದರಾಳಕ್ಕೆ ಇಳಿದು ಶೋಧಿಸಿ, ಆಯ್ದು ತರುವ ಕಾರ್ಯವನ್ನು ಓದುಗರಿಗೆ ಬಿಟ್ಟು ಕೊಡುವುದು ಸೂಕ್ತ ಎಂದು ನನ್ನ ಅನಿಸಿಕೆ. ಈ ಕೃತಿಗೆ ಪಿ ಎನ್ ಮೂಡಿತ್ತಾಯರ ಮುನ್ನುಡಿಯಿದ್ದು ವಾಹಿನಿ ಪ್ರಕಾಶನದಿಂದ ಪ್ರಕಟಗೊಂಡಿದೆ. ಬೆನ್ನುಡಿ ಬರೆಯುವ ಸೌಭಾಗ್ಯ ನನ್ನದು. ಸುಂದರ ಸಾಹಿತ್ಯ ಕೃತಿ ಇದಾಗಿದ್ದು ಮುಂದೆಯೂ ಹೆಚ್ಚು ಹೆಚ್ಚು ಕೃತಿಗಳು ಬರಲಿ, ಯಶಸ್ಸು ಕೀರ್ತಿ ಅರಸಿ ಬರಲಿ ಎಂದು ಹರಿನರಸಿಂಹ ಉಪಾಧ್ಯಾಯ ಪುಸ್ತಕದ ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ.
©2025 Book Brahma Private Limited.