ಕುಟುಂಬ ಖಾಸಗಿ ಆಸ್ತಿ ಮತ್ತು ಪ್ರಭುತ್ವ ಡಾ.ಎಚ್.ಜಿ. ಜಯಲಕ್ಷ್ಮಿ ಅವರ ಅನುವಾದಿತ ಕೃತಿಯಾಗಿದೆ. ಈ ಮಾಲಿಕೆಯಲ್ಲಿ ಪ್ರಕಟವಾಗುವ ಪ್ರತಿಯೊಂದು ಕೃತಿಗೂ ಒಂದು ಪ್ರವೇಶಿಕೆ ಇರುತ್ತದೆ. ಕೃತಿಯನ್ನು ಅರ್ಥಮಾಡಿಕೊಳ್ಳಲು ಬೇಕಾಗುವ ಹಿನ್ನೆಲೆ, ಕೃತಿಯ ಇಂದಿನ ಪ್ರಸ್ತುತತೆ, ಕೃತಿಯ ಸಾರಾಂಶ, ಕೃತಿಯ ಬಗ್ಗೆ ನಂತರದ ಕಾಲದಲ್ಲಿ ಹುಟ್ಟಿದ ಚರ್ಚೆ ವಿವಾದಗಳು - ಇವನ್ನು ಪ್ರವೇಶಿಕೆಯು ಒಳಗೊಂಡಿರುತ್ತದೆ. ಮಾರ್ಕ್ಸ್, ಏಂಗೆಲ್ಸ್ ಮತ್ತು ಲೆನಿನ್ ಮೊದಲಾದ ಅಸಾಧಾರಣ ವ್ಯಕ್ತಿಗಳ ಬದುಕಿನಲ್ಲಿ ಮೂರು ಅಂಶಗಳು ಬಹಳ ಮುಖ್ಯವಾಗುತ್ತವೆ. ಒಂದು, ಚಿಂತನೆಯ ಕ್ಷೇತ್ರಕ್ಕೆ ಅವರ ಕೊಡುಗೆಗಳು. ಎರಡನೆಯದು, ಅವರು ಎಂತಹ ಸವಾಲುಗಳನ್ನು ಎದುರಿಸಿ ಹೋರಾಟಗಳನ್ನು ಸಂಘಟನೆಗಳನ್ನು ಕಟ್ಟಿದರು ಎಂಬುದು. ಮೂರನೆಯದು, ಖಂಡಿತವಾಗಿ ದೈವಾಂಶ ಸಂಭೂತರಲ್ಲದ ಅವರು ನಮ್ಮಂತೆಯೇ ನೋವು-ನಲಿವು, ಸೋಲು-ಗೆಲುವು, ರೋಗ-ರುಜಿನ, ಆಪ್ತಷರ ಮರಣ-ಜನನ ಎಲ್ಲವನ್ನೂ ಅನುಭವಿಸಿದರು; ಆದರೆ ಸಂಕಲ್ಪ, ಪರಿಶ್ರಮ, ವಿಶಾಲ ಹೃದಯ, ಸಂವೇದನಾಶೀಲತೆಗಳನ್ನು ಬೆಳೆಸಿಕೊಂಡು, ನಮಗೆ ಮಾದರಿಯಾದರು ಎಂಬುದು. ಒಂದು ಜೀವನ ಚರಿತ್ರೆ ಇದೆಲ್ಲವನ್ನೂ ನಮಗೆ ಕಟ್ಟಿಕೊಡಬೇಕು. ಡಾ. ಜಿ. ರಾಮಕೃಷ್ಣ ಅವರ ಫೆಡರಿಕ್ ಏಂಗೆಲ್ಸ್ ಪುಸ್ತಕವು ಇದೆಲ್ಲವನ್ನೂ ಪೂರೈಸುತ್ತದೆ. ಮಾತ್ರವಲ್ಲ, ಅತ್ಯಂತ ಸರಳ ಹಾಗೂ ಹೃದಯಂಗಮ ಶೈಲಿಯಲ್ಲಿ ಕೈಗೆತ್ತಿಕೊಂಡ ಕಾರ್ಯವನ್ನು ನಿರ್ವಹಿಸಿದೆ ಎಂಬ ಕಾರಣದಿಂದ ಬಹಳ ಮಹತ್ವದ್ದಾಗಿದೆ. ಏಂಗೆಲ್ಸ್ ಅವರ ಅತ್ಯಂತ ಮುಂದುವರೆದ ಚಿಂತನೆಗಳನ್ನು ಪರಿಕಲ್ಪನೆಗಳನ್ನು ಒಳಗೊಂಡ ಅಭಿಜಾತ ಕೃತಿಗಳನ್ನು ಹೊಸಬರಿಗೂ ಗ್ರಹಿಸಲಾಗುವಂತೆ ಚಿಕ್ಕದಾಗಿ ಪರಿಚಯಿಸಿರುವುದು ಇದರ ಇನ್ನೊಂದು ಹೆಗ್ಗಳಿಕೆ. ತತ್ವಶಾಸ್ತ್ರದಲ್ಲಿ ಭಾವನಾವಾದದ ಪ್ರಾಬಲ್ಯವನ್ನು ಹಿಮ್ಮೆಟ್ಟಿಸಲು ಮಾರ್ಕ್ಸ್ ಮತ್ತು ಏಂಗೆಲ್ಸ್ ಇಬ್ಬರೂ ಒಟ್ಟಿಗೇ 1845-46 ರಲ್ಲಿ ತಮ್ಮ 'ಜರ್ಮನ್ ಐಡಿಯಾಲಜಿ'(ಜರ್ಮನ್ ಸಿದ್ಧಾಂತದ ವಿಮರ್ಶೆ)ಯಲ್ಲಿ ಚಾರಿತ್ರಿಕ ಭೌತವಾದವನ್ನು ಪ್ರತಿಪಾದಿಸಿದರು. ಮೊಟ್ಟ ಮೊದಲ ಬಾರಿಗೆ, ಈ ಪುಸ್ತಕದಲ್ಲಿ ಕಾರ್ಮಿಕ ವರ್ಗದ ಲೋಕದೃಷ್ಟಿಯಾದ ಗತಿತಾರ್ಕಿಕ ಹಾಗೂ ಚಾರಿತ್ರಿಕ ಭೌತವಾದದ ಮೂಲಾಧಾರವನ್ನು ಸಮಗ್ರವಾಗಿ ಮತ್ತು ವ್ಯವಸ್ಥಿತವಾಗಿ ಮಂಡಿಸಿರುವುದರಿಂದ ಈ ಪುಸ್ತಕವು ಮಾಲಿಕೆಯ ಅನಿವಾರ್ಯ ಭಾಗವಾಗಿದೆ. ಎಂದು ಎಂಗೆಲ್ಸ್ -200 ಮಾಲಿಕೆ ತಂಡವು ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.