ಫಾತಿಮಾ ಮತ್ತು ತನ್ವಿ (ಪುಟ್ಟ ಮಕ್ಕಳಿಗೊಂದು ಸಚಿತ್ರ ಕತೆ) ಶಾಖಮೂರಿ ಶ್ರೀನಿವಾಸ್ ಅವರ ತೆಲುಗು ಮೂಲದ ಕೃತಿ ಇದು. ತುಂಬಲಿ ಶಿವಾಜಿ ಅವರ ಚಿತ್ರಗಳು ಗಮನ ಸೆಳೆಯುತ್ತವೆ. ಲೇಕಕ ಧನಪಾಲ ನಾಗರಾಜಪ್ಪ ಅವರು ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಮಕ್ಕಳ ಸಾಹಿತಿ ಡಾ. ಆನಂದ ಪಾಟೀಲ್ ಅವರು ಕೃತಿಗೆ ಮುನ್ನುಡಿ ಬರೆದು ‘ಇಲ್ಲಿ ಕತೆ ಅರಳಿರುವುದು ಕೇವಲ ತನ್ನಷ್ಟಕ್ಕೆ ತಾನೇ ಅನ್ನಿಸುವುದೂ ಇದೆ. ಈ ಪುಟಾಣಿ ಜಗತ್ತನ್ನ, ಈ ಅಮಾಯಕ ಚೆಂದದ ಜೀವಿಗಳ ಲೋಕವನ್ನ ಬಣ್ಣಗಳಲ್ಲಿ, ಕಲ್ಪನೆಯ ಚಿತ್ರಗಳಲ್ಲಿ ಕಂಡುಕೊಳ್ಳುವುದೇ ಇನ್ನೊಂದು ಬಗೆ. ಧನಪಾಲ ತೆಲುಗಿನಿಂದ ಮಕ್ಕಳ ಲೋಕವನ್ನ ಕನ್ನಡಕ್ಕೆ ತರುತ್ತಿರುವುದು ಬಲು ಸಂತಸದ ಸಂಗತಿ. ನಮ್ಮ ಭಾಷೆಗಳಲ್ಲಿ ಪರಸ್ಪರ ಸಂಪರ್ಕ ಏರ್ಪಡುವ ಅಗತ್ಯ ಬಲು ಜರೂರಿಯದು. ಆ ನಿಟ್ಟಿನಲ್ಲಿ ಈ ಪ್ರಯತ್ನ ಮಹತ್ವದ್ದು. ಪುಟಾಣಿಗಳ, ಬಲು ಚಿಕ್ಕದಾದ ಕತೆ ಎಂದು ಸುಮ್ಮನೆ ನಕ್ಕು ಕಡೆಗಾಗುವುದಲ್ಲ. ಇದೇ ಒಂದು ಅಗತ್ಯದ, ಬಲು ಮಹತ್ವದ ಲೋಕವೆನ್ನುವ ಮಾತುಗಳೂ ನಮ್ಮ ನಡುವೆ ನಡೆಯಬೇಕಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಫಾತಿಮಾ ಮತ್ತು ತನ್ವಿ ’ ಕೃತಿಗೆ ಬರೆದ ಮುನ್ನುಡಿ
ಪುಟಾಣಿ ಜಗತ್ತು ಪುಟ್ಟ ಮಕ್ಕಳ ಮನಸ್ಸು ನಮ್ಮ ಸುತ್ತಲಿನ ಅದೇನೇನೋ ಬದುಕಿನ ಸಂಗತಿಗಳಿಂದ ಬಾಧಿತವಾಗಿರುವುದಿಲ್ಲ. ಹಾಗಾಗಿ ಅಲ್ಲಿನ ಕಣ್ಣುಗಳಲ್ಲಿ ಚೆಂದದ ಕನಸುಗಳು ಕಾಣತ್ತವೆ. ಮೈ ಮನಸ್ಸುಗಳಲ್ಲಿ ಬಲು ಹೃದ್ಯವಾದ ಹೊಳಹುಗಳು ಹೊಮ್ಮುತ್ತವೆ. ಈ ಸೌಂದರ್ಯವೇ ದೊಡ್ಡವರಾದ ನಮ್ಮನ್ನು ಬೆರಗಿನಿಂದ ಹೊರಳಿ ನೋಡುವಂತೆ ಮಾಡುತ್ತದೆ. ಪುಟ್ಟ ಪಟಾಲಮ್ ಇದೆಲ್ಲ ತಮ್ಮದೇ ಲೋಕವೆನ್ನುವಂತೆ ಒಳಗು ಮಾಡಿಕೊಳ್ಳುತ್ತದೆ. ಅಂಥದೊಂದು ಚೆಂದದ ಕಲ್ಪನೆಯ ಹಂದರ ಇಲ್ಲಿದೆ. ಫಾತಿಮಾ ಎನ್ನುವ ಪುಟ್ಟ ಹುಡುಗಿ ಮೃಗಾಲಯದಲ್ಲಿ ತನ್ನದೇ ಆದ ಸ್ನೇಹದ ಬಳಗ ಕಟ್ಟಿಕೊಂಡಿದ್ದಾಳೆ. ಅಲ್ಲಿ ಅವಳಿಗೆ ಮುದ ನೀಡುವ ಗೆಳೆಯರ ಜೊತೆಗೇ ಸಮಯ. ಅದೇ ಒಂದು ಆಯ್ಕೆ ಇಲ್ಲಿ. ಕೆರೆಯಲ್ಲಿನ ಜಿಂಗ್-ಜಾಂಗ್ ಕಪ್ಪೆ ಜೋಡಿ, ಬೂರುಗು ಮರದಲ್ಲಿ ವಾಸಮಾಡಿಕೊಂಡರೋ ಕ್ರೋನಿ ಅನ್ನೋ ಕಾಗೆ, ನೀಳ ಕತ್ತಿನ ಕೊಕ್ಕರೆ ಚಿನ್ನು, ಶ್ರೀಗಂಧದ ಮರ ಕುಟುಕಿಕೊಂಡು ಮನೆಮಾಡಿಕೊಂಡಿರೋ ಪೆಕಿ ಮರಕುಟುಕ, ಇವೆಲ್ಲದರ ನಡುವೆ ನೂರು ವರ್ಷಗಳಷ್ಟು ಬಾಳಿಕೊಂಡು ಬಂದ ಹಿರಿಯ ಜೀವಿ ತನ್ವಿ ಅನ್ನೋ ಆಮೆ. ಅಲ್ಲಿ ಹುಲಿ, ಸಿಂಹ, ಚಿರತೆ ಇನ್ನೂ ಏನೇನೋ ದೊಡ್ಡ ದೊಡ್ಡ ಭಯ ಹುಟ್ಟಿಸೋ ಪ್ರಾಣಿಗಳು, ಬಲು ಬಲು ಗಾತ್ರದ ಪ್ರಾಣಿಗಳು ಎಲ್ಲಾ ಇವೆ. ಆದರೆ ಫಾತಿಮಾ ಅನ್ನೋ ಸೂಕ್ಷ್ಮದ ಹುಡುಗಿಗೆ ಸ್ನೇಹ ಕಂಡುದೇ ಬೇರೆ ಜೀವಿಗಳಲ್ಲಿ. ಹೀಗಿರೋ ತನ್ವಿ ಹಿರಿಯ ಜೀವದ ಹಿಂಗಾಲುಗಳು ಗಾಜಿನ ಚೂರು ತಾಗಿ ಗಾಯವಾದುದು, ಅದು ನೋವನ್ನ ಅನುಭವಿಸತೊಡಗಿದ್ದು, ಪ್ರತಿ ದಿನದ ತಮ್ಮ ಸ್ನೇಹದ, ಹರಟೆಯ ನಡಿಗೆಗೆ ಜೊತೆಯಾಗದೆ ಉಳಿದುಬಿಟ್ಟುದು ಫಾತಿಮಾಳನ್ನ ಕಂಗೆಡಿಸಿದುದೇ ಇಲ್ಲಿನ ಕತೆಯ ಕೇಂದ್ರ ಆಶಯ. ಅವಳ ಉಳಿದೆಲ್ಲಾ ಸ್ನೇಹಿತರೂ ಸಮ ದುಃಖಿಗಳೇ. ತನ್ವಿಯನ್ನ ವೈದ್ಯರು ಬಂದು ನೋಡಿಯಾಗಿದೆ, ಅದಕ್ಕೇ ಶುಶ್ರೂಷೆ ಕೂಡ ನಡೆಯತೊಡಗಿದೆ, ಗಾಯಕ್ಕೆ ಪಟ್ಟಿ ಕಟ್ಟಲಾಗಿದೆ. ಅಷ್ಟಕ್ಕೆ ಸಮಾಧಾನವಿಲ್ಲ ಈ ಸ್ನೇಹದ ಪಟಾಲಮ್ಮಿಗೆ. ದಿನದ ತಮ್ಮ ಸಮಯ ಹಂಚಿಕೊಳ್ಳಲು ತನ್ವಿ ಇಲ್ಲವಲ್ಲಾ ಅನ್ನೋದು ಒಂದು ಚಿಂತೆಯಾದರೆ, ಅದು ಒಬ್ಬಂಟಿಯಾಗಿ ಉಳಿದುಬಿಡುವುದಲ್ಲಾ ಅಂತಲೂ ಅವನ್ನ ಕಾಡಿದೆ. ಅದಕ್ಕೇ ಫಾತಿಮಾ ಏನೇನೋ ಯೋಚನೆಯಲ್ಲಿ ಮುಳುಗಿದುದು, ಶಾಲೆಯನ್ನೂ ಬಿಟ್ಟು ಏನಾದರೂ ಉಪಾಯ ಹುಡುಕಲು ನೋಡಿದುದು. ಎಲ್ಲ ಸ್ನೇಹಿತರೂ ಅವಳ ಐಡಿಯಾಕ್ಕೆ ಸೈ ಎಂದರು, ಅವರಿಗೂ ಅದೆಲ್ಲ ಬೇಕಾಗಿದ್ದುದೇ. ಸರಿ ಎಲ್ಲ ಕಷ್ಟಪಟ್ಟು ತಮ್ಮ ತಮ್ಮ ಪಾಲಿನ, ತಮಗಾಗುವ ಕೆಲಸವನ್ನ ಬಲು ಹಚ್ಚಿಕೊಂಡು ಮಾಡಿಬಿಟ್ಟರು. ಸರಿ ಅಂದುಕೊಂಡಂತೆಯೇ ಎಲ್ಲ ನಡೆಯಿತು. ತನ್ವಿಯ ಗಾಯದ ಹಿಂಗಾಲುಗಳು ಯಾವ ತೊಂದರೆ ಅನುಭವಿಸದಂತೆ ಕೇವಲ ಮುಂಗಾಲಿನ ಪ್ರಯತ್ನದಿಂದ ಅದು ಸಲೀಸಾಗಿ ಚಲಿಸಲು ಸಾಧ್ಯವಾದುದು, ಮತ್ತೆ ಎಂದಿನ ಹಾಗೆ ತಮ್ಮ ಸ್ನೇಹದ ಬಳಗದ ಸಮಯ ಹಂಚಿಕೊಳ್ಳಲು ರೆಡಿಯಾದುದು ಒಂದು ಹೃದಯದ ಕವಾಟಿನೊಳಗಿನ ಚೆಂದದ ವಸ್ತುವನ್ನು ತೆಗೆದು ತೋರಿಸಿದಂತಾಗಿದೆ. ಪುಟ್ಟ ಮಕ್ಕಳ ಮನೋಲೋಕ ಇಂಥದೇ. ಪುಟ್ಟ ಮಕ್ಕಳಿಗೆ ಇಂಥವು ಚಿತ್ರಗಳ ಸಹಚರ್ಯದಲ್ಲಿ ಮೂರ್ತಗೊಳ್ಳುವುದು ಇನ್ನೊಂದೇ ಆಯಾಮ ಸೃಷ್ಟಿಸುತ್ತದೆ. ಇಲ್ಲಿ ಕತೆ ಅರಳಿರುವುದು ಕೇವಲ ತನ್ನಷ್ಟಕ್ಕೆ ತಾನೇ ಅನ್ನಿಸುವುದೂ ಇದೆ. ಈ ಪುಟಾಣಿ ಜಗತ್ತನ್ನ, ಈ ಅಮಾಯಕ ಚೆಂದದ ಜೀವಿಗಳ ಲೋಕವನ್ನ ಬಣ್ಣಗಳಲ್ಲಿ, ಕಲ್ಪನೆಯ ಚಿತ್ರಗಳಲ್ಲಿ ಕಂಡುಕೊಳ್ಳುವುದೇ ಇನ್ನೊಂದು ಬಗೆ. ಧನಪಾಲ ತೆಲುಗಿನಿಂದ ಮಕ್ಕಳ ಲೋಕವನ್ನ ಕನ್ನಡಕ್ಕೆ ತರುತ್ತಿರುವುದು ಬಲು ಸಂತಸದ ಸಂಗತಿ. ನಮ್ಮ ಭಾಷೆಗಳಲ್ಲಿ ಪರಸ್ಪರ ಸಂಪರ್ಕ ಏರ್ಪಡುವ ಅಗತ್ಯ ಬಲು ಜರೂರಿಯದು. ಆ ನಿಟ್ಟಿನಲ್ಲಿ ಈ ಪ್ರಯತ್ನ ಮಹತ್ವದ್ದು. ಪುಟಾಣಿಗಳ, ಬಲು ಚಿಕ್ಕದಾದ ಕತೆ ಎಂದು ಸುಮ್ಮನೆ ನಕ್ಕು ಕಡೆಗಾಗುವುದಲ್ಲ. ಇದೇ ಒಂದು ಅಗತ್ಯದ, ಬಲು ಮಹತ್ವದ ಲೋಕವೆನ್ನುವ ಮಾತುಗಳೂ ನಮ್ಮ ನಡುವೆ ನಡೆಯಬೇಕಿದೆ.
-ಡಾ. ಆನಂದ ಪಾಟೀಲ
©2024 Book Brahma Private Limited.