`ಅವಳಿ’ ಕೃತಿಯು ಕೆ. ಶಿವಲಿಂಗಪ್ಪ ಹಂದಿಹಾಳು ಅವರ ಅನುವಾದಿತ ಮಕ್ಕಳ ಕಥಾಸಂಕಲನವಾಗಿದೆ. ಕೃತಿಯ ಮೂಲ ಲೇಖಕರು ಮಿಲುತಿನ್ ದ್ಯೂರಿಕೋವಿಕ್. ಕೃತಿಯ ಪ್ರಸ್ತಾವನೆಯಲ್ಲಿ ಲೇಖಕರು ‘ಅವಳಿ' ಕಥನವು ಅವಳಿ ಸಹೋದರರಿಬ್ಬರ ಅಧಿಕೃತ ಜೀವನ ಚರಿತ್ರೆಯನ್ನು ತೆರೆದಿಡುತ್ತಲೇ ಓದುಗನ ಭಾವತಂತುವನ್ನು ಮೀಟುತ್ತದೆ. ಬರವಣಿಗೆಯ ಲವಲವಿಕೆಯ ತೇವ ನಮ್ಮನ್ನು ಆವರಿಸಿಕೊಳ್ಳುತ್ತದೆ. ಇಲ್ಲಿನ ಕಥೆಗಳು ಕುಟುಂಬ, ಶಾಲೆ, ಮನೆಯ ಸುತ್ತಮುತ್ತಲ ಪರಿಸರದಲ್ಲಿ ಜರುಗುತ್ತವೆ. ಲಘು ಹಾಸ್ಯದ ಸಂಭಾಷಣೆ, ಸನ್ನಿವೇಶಗಳು ಕಚಗುಳಿ ಇಡುತ್ತವೆ. ಅನಿರೀಕ್ಷಿತ ನಾಟಕೀಯ ತಿರುವುಗಳು, ಚಮತ್ಕಾರಿಕ ಅಂತ್ಯಗಳು ಮತ್ತು ಪಂಚಿಂಗ್ ಸಾಲುಗಳು ಕಥೆಗಳ ಓಘಕ್ಕೆ ಪೂರಕವಾಗಿವೆ. ಈ ಮಸ್ತಕವು ಈಗಾಗಲೇ ಜಗತ್ತಿನ 52 ಭಾಷೆಗಳಿಗೆ ಅನುವಾದಗೊಂಡಿದೆ. ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳು, ಪುರಸ್ಕಾರಗಳು ’ಅವಳಿ’ ಪುಸ್ತಕವನ್ನು ಅರಸಿ ಬಂದಿವೆ. ನವಿರು ಹಾಸ್ಯ, ತಾಜಾ ನಿರೂಪಣಾ ಕ್ರಮ ಇಲ್ಲಿನ ಕಥೆಗಳನ್ನು ಬಿಡದೇ ಓದುವಂತೆ ಮಾಡುತ್ತಲೇ ಎಲ್ಲರೆಲ್ಲರ ಬಾಲ್ಯ ಕಾಲಕ್ಕೆ ಕಿರುಬೆರಳು ಹಿಡಿದು ಕರೆದುಕೊಂಡು ಹೋಗುತ್ತವೆ. ಸರ್ಬಿಯಾದ ಸಾಹಿತ್ಯದ ಏಳು ಪ್ರಮುಖ ಘಟ್ಟಗಳಲ್ಲಿ ರಿಯಲಿಸಂ ಕೂಡ ಒಂದು, ಅಲ್ಲಿನ ಬರವಣಿಗೆಗಳಲ್ಲಿ ಇದು ತುಂಬಾ ಚಾಲ್ತಿಯಲ್ಲಿದೆ. ಆದರೆ ಮಿಟನ್ ಬಳಸಿರುವ ಸರ್ಕಾಸ್ಟಿಕ್ ರಿಯಲಿಸಂ ವಿಶಿಷ್ಟವಾದುದು. ಅವಳಿ ಕಥನವು ಓದುಗನೊಂದಿಗೆ ಸರಳ ಸಂವಹನಗೊಳ್ಳುವ ಲಯಗಾರಿಕೆಯನ್ನು ಒಳಗೊಂಡಿದೆ. ಇದನ್ನೇ ಸರ್ಬಿಯಾದ ಚಿಂತಕರಾದ ಪೆಟೋವಿಕ್ ಹಾಗೂ ಮಾರ್ಜೊಫಿಕ್ ಪ್ರತಿಪಾದಿಸುತ್ತಾರೆ. 'ಕಥೆಯ ನಿಖರತೆ, ಸರಳತೆ, ಸಂಕ್ಷಿಪ್ತತೆ, ಭಾಷೆಯ ಶೈಲಿ, ಅಭಿವ್ಯಕ್ತಿಯ ವಿಶಿಷ್ಟತೆಯು ಓದುಗ ಮತ್ತು ಲೇಖಕರಿಬ್ಬರನ್ನು ಸಂವಹನಗೊಳಿಸಲು ಸಹಕರಿಸುತ್ತದೆ. ಈ ಮಾತುಗಳೇ ಇಲ್ಲಿನ ಕತೆಗಳಲ್ಲಿ ಪ್ರತಿಧ್ವನಿಸಿದೆ ಎನ್ನುವಂತೆ ಕಥಾ ವಿನ್ಯಾಸ ರಚನೆಗೊಂಡಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.