About the Author

ಮಹಿಳೆಯರ ಶೋಷಣೆ ಮತ್ತು ಸ್ತ್ರೀಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಮ್ಮ ಖಚಿತ ಅಭಿಪ್ರಾಯ ಮಂಡಿಸುವ ಲೇಖಕಿ ವಿಜಯಶ್ರೀ ಸಬರದ. ಅವರು ಜನಿಸಿದ್ದು 1957ರ ಫೆಬ್ರುವಿರ 1ರಂದು. ತಂದೆ ಗುಣವಂತರಾವ ಪಾಟೀಲ. ತಾಯಿ ಸಂಗಮ್ಮ. ಪ್ರಾರಂಭಿಕ ಶಿಕ್ಷಣ ಹಾಗೂ ಕಾಲೇಜು ಪದವಿ ಶಿಕ್ಷಣವನ್ನು ಬೀದರ್‌ನಲ್ಲಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು.
’ಅನುಪಮಾ ನಿರಂಜನರ ಕಾದಂಬರಿಗಳು; ಒಂದು ಅಧ್ಯಯನ” ಎಂಬ ಪ್ರಬಂಧ ಮಂಡಿಸಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ. ಪದವಿ ಪಡೆದರು. ಬೀದರ್‌ನ ಅಕ್ಕ ಮಹಾದೇವಿ ಮಹಿಳಾ ವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರವಾಚಕರಾಗಿ ಕಾರ್ಯ ನಿರ್ವಹಿಸಿದರು. ಸದ್ಯ ಅವರು ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಗುಲಬರ್ಗಾ ವಿ.ವಿ.ದ ಕಲಾನಿಕಾಯದ ಸದಸ್ಯರಾಗಿ, ಕನ್ನಡ ಅಧ್ಯಯನ ಸಂಸ್ಥೆಯ ಕೌನ್ಸಿಲ್‌ ಸದಸ್ಯರಾಗಿ, ಗುಲಬರ್ಗಾ ಹಾಗೂ ಇತರ ವಿ.ವಿ.ಗಳ ಪರೀಕ್ಷಾ ಮಂಡಲಿಯ ಛೇರ್ಮನ್‌ ಆಗಿ, ಬಿಜಾಪುರದ ಮಹಿಳಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್‌ ಆಗಿ, ವಿದ್ಯಾವಿಷಯಕ ಪರಿಷತ್‌ ಸದಸ್ಯರಾಗಿ, ಸಿಂಡಿಕೇಟ್‌ ಸದಸ್ಯರಾಗಿದ್ದರು. ವಿಜಯಶ್ರೀ ಅವರ ಮಾರ್ಗದರ್ಶನದಲ್ಲಿ 8 ವಿದ್ಯಾರ್ಥಿಗಳು ಎಂ.ಫಿಲ್‌. ಹಾಗೂ ಇಬ್ಬರಿಗೆ ಪಿಎಚ್‌.ಡಿ. ಪದವಿ ಪಡೆದಿದ್ದಾರೆ.
ವಿಜಯಶ್ರೀ ಅವರು ‘ಜ್ವಲಂತ’, ‘ಲಕ್ಷ್ಮಣರೇಖೆ ದಾಟಿದವರು’, ‘ಮುಗಿಲ ಮಲ್ಲಿಗೆ’ ಮುಂತಾದ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಉರಿಲಿಂಗ’, ‘ಹೂವಿನ ತೇರನೇರಿ ಹೂವಾದವರು’, ‘ಎರಡು ನಾಟಕಗಳು’ ಇವರ ಪ್ರಮುಖ ನಾಟಕ ಕೃತಿಗಳು. ಸಾಹಿತ್ಯ ಮತ್ತು ಮಹಿಳೆ, ತ್ರಿವೇಣಿಯವರ ಕಾದಂಬರಿಗಳು, ಅಕ್ಕಮಹಾದೇವಿ, ಶಿವಶರಣರ ದೃಷ್ಟಿಯಲ್ಲಿ ಬಸವಣ್ಣ , ವಚನ ವಾಹಿನಿ, ಮೋಳಿಗೆ ಮಾರಯ್ಯ, ಶಿವಶರಣೆಯರು ಪ್ರಸ್ತುತ ಸಂದರ್ಭ, ಜಾನಪದ ಮತ್ತು ಮಹಿಳೆ ಎಂಬ ವಿಮರ್ಶಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ.
ಗುರುಶಿಷ್ಯರ ತತ್ವಪದಗಳು, ಅಕ್ಕ, ವಿಚಾರ ಸಾಹಿತ್ಯ, ವಿಮರ್ಶಾಲೇಖನಗಳು, ಮಹಿಳೆ ಶೋಷಣೆ ಸವಾಲುಗಳು, ಅಕ್ಕನ ಅನನ್ಯತೆ, ಹುಸನಾಸಾಬನ ತತ್ತ್ವಪದಗಳು, ವೈಚಾರಿಕ ಲೇಖನಗಳ ಸಂಗ್ರಹ, ಆಧುನಿಕ ಕವಿತೆಗಳು ಮುಂತಾದ ಒಂಬತ್ತು ಕೃತಿಗಳನ್ನು ಸಂಪಾದಿಸಿದ್ದಾರೆ. 
‘ಸಾಹಿತ್ಯ ಸಂವಹನ’ ಕೃತಿಗೆ ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿ, ‘ಜಾನಪದ ಮತ್ತು ಮಹಿಳೆ’ ಕೃತಿಗೆ ಬೆಂಗಳೂರಿನ ರುಕ್ಮಿಣಿಬಾಯಿ ಪ್ರಶಸ್ತಿ, ‘ಎರಡು ನಾಟಕಗಳು’ ಕೃತಿಗೆ ಗುಲಬರ್ಗಾ ವಿ.ವಿ.ದ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಿಂಧೂರ ದತ್ತಿ ಪ್ರಶಸ್ತಿ ಮತ್ತು ಎಂ.ಜಿ. ರಂಗನಾಥನ್‌ ಸ್ಮರಣಾರ್ಥ ನಾಟಕ ಪ್ರಶಸ್ತಿ, ‘ಮುಗಿಲ ಮಲ್ಲಿಗೆ’ ಕವನ ಸಂಕಲನಕ್ಕೆ ನೂರೊಂದೇಶ್ವರ ಪ್ರಶಸ್ತಿ ದೊರೆತಿವೆ.
 

ವಿಜಯಶ್ರೀ ಸಬರದ

(01 Feb 1957)