’ಸತ್ಯಕಾಮ’ ಎಂಬುದು ಅನಂತ ಕೃಷ್ಣಾಚಾರ್ಯ ಶಹಾಪುರ ಅವರ ಕಾವ್ಯನಾಮ. ತಮ್ಮ ಕಾದಂಬರಿ ಹಾಗೂ ತಂತ್ರವಿದ್ಯೆ, ಕೃಷಿಯ ಮೂಲಕ ನಾಡಿನ ಮನೆ ಮಾತಾದವರು ’ಸತ್ಯಕಾಮ’. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗಲಗಲಿಯಲ್ಲಿ 1920ರ ಮಾರ್ಚ್ 2ರಂದು ಜನಿಸಿದರು. (ಕೆಲವು ಕಡೆ ಏಪ್ರಿಲ್ 16 ಎಂದು ದಾಖಲಾಗಿದೆ.) ಆರಂಭಿಕ ಶಿಕ್ಷಣವನ್ನು ಗಲಗಲಿಯಲ್ಲಿ ಪಡೆದ ಅವರು ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಶಾಲೆಯ ಗೊಡವೆಗೇ ಹೋಗದೆ ಒಂದು ವರ್ಷ ಗಲಗಲಿಯಲ್ಲಿಯೇ ಕಳೆದರು. 1935ರಲ್ಲಿ ಬಾಗಲಕೋಟೆಯ ಸಕ್ರಿ ಹೈಸ್ಕೂಲಿಗೆ ಸೇರಿದರಾದರೂ ಓದು ಮುಂದುವರಿಸಲಿಲ್ಲ.
ಭಾರತದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯುತ್ತಿದ್ದ 1930-31ರಲ್ಲಿ ಬಾಲಕ ಅನಂತ ಐದನೆಯ ತರಗತಿ ವಿದ್ಯಾರ್ಥಿ. ಬಾಲಕ ಅನಂತ ತನ್ನ ಶಾಲೆಯ 20-25 ವಿದ್ಯಾರ್ಥಿಗಳೊಂದಿಗೆ ಮೆರವಣಿಗೆ ನಡೆಸಿದ. ಬಂಧಿಸಿದ ಪೊಲೀಸರು ಕ್ಷಮೆ ಕೇಳುವಂತೆ ಸೂಚಿಸಿದರು. ಅದಕ್ಕೆ ಒಪ್ಪದ ಅನಂತ ಛಡಿಯೇಟಿನ ಶಿಕ್ಷೆ ಅನುಭವಿಸಿದ.
ಸತ್ಯಕಾಮ ಅವರು ‘ಜೀವನ ನಾಟ್ಯ ವಿಲಾಸಿ ಸಂಘ’ (1940) ಸ್ಥಾಪಿಸಿದರು. ಸಂಘದಿಂದ ಬೇಂದ್ರೆ, ಶ್ರೀರಂಗ, ಎನ್ಕೆ ಮೊದಲಾದವರ ನಾಟಕ ಆಡಿಸಿದರು. ಧಾರವಾಡದ ಸ್ವಾತಂತ್ರ್ಯ ಹೋರಾಟಗಾರ ಬುರ್ಲಿ ಬಿಂದು ಮಾಧವರ ಅವರ ಜೊತೆಗೆ ಆರು ತಿಂಗಳು ಜೊತೆಗಿದ್ದ ಅನಂತ ಅವರು ನಂತರ ಬೀಳಗಿ, ಗಲಗಲಿ, ಬೇವೂರು, ಕಡ್ಲಿಮಟ್ಟಿ,ಬಬಲೇಶ್ವರ, ವಿಜಾಪುರ ಇಲ್ಲೆಲ್ಲಾ ಬ್ರಿಟಿಷರ ವಿರುದ್ಧ ಭೂಗತ ಚಟುವಟಿಕೆ ನಡೆಸಿದರು. ಅವರ ಜೊತೆಗೆ ನಾಟ್ಯ ವಿಲಾಸಿ ಸಂಘದ ಗೆಳೆಯರು ಕೂಡಾ ಸ್ವಾತಂತ್ರ್ಯ ಹೋರಾಟದಲ್ಲಿ ಜೊತೆಗಿದ್ದರು. ಆಗ ಬ್ರಿಟಿಷ್ ಸರ್ಕಾರ ಸತ್ಯಕಾಮರನ್ನು ಹಿಡಿದುಕೊಟ್ಟವರಿಗೆ ಹತ್ತುಸಾವಿರ ರೂಪಾಯಿ ಬಹುಮಾನ ಘೋಷಿಸಿತ್ತು.
ಪೊಲೀಸರ ಕಣ್ಣುತಪ್ಪಿಸಿ ಭೂಗತರಾದ ಅವರು ಆದಮಾರು ಮಠದ ಸ್ವಾಮಿಯವರಲ್ಲಿ ಆಶ್ರಯ ಪಡೆದು ಸಂಸ್ಕೃತಾಧ್ಯಯನ ಮಾಡಿದರು. ಅದಾದ ನಂತರ ಆತ್ಮಶಕ್ತಿ ಬೆಳೆಸಿಕೊಳ್ಳುವ ಉದ್ದೇಶದಿಂದ ಅಲೆದಾಡಿದ ಅವರು ನಾಡು-ಕಾಡು ಸುತ್ತಿದರು. ಹಿಮಾಲಯಕ್ಕೂ ಹೋದರು. ಕೇರಳದಿಂದ ಟಿಬೇಟ್ (1944-1956) ಅಲೆದಾಡಿದರು. ಅಲ್ಲಿ ಅವರಿಗೆ ಅಧ್ಯಾತ್ಮದ ಜೊತೆಗೆ ತಾಂತ್ರಿಕರ ಪರಿಚಯ ಆಯಿತು. ಸತ್ಯಕಾಮರು ತಾಂತ್ರಿಕ ವಿದ್ಯೆಯನ್ನು ಸಿದ್ಧಿಸಿಕೊಂಡರು. ಆ ವಿವರಗಳು ’ಪಂಚ’ಮ’ಗಳ ನಡುವೆ” ಮತ್ತು ‘ತಂತ್ರಯೋನಿ’ ಮುಂತಾದ ಕೃತಿಗಳಲ್ಲಿ ದಾಖಲಿಸಿದ್ದಾರೆ.
ಸತ್ಯಕಾಮ ಅವರು ‘ಶ್ರೀ’, ’ಕಲ್ಯಾಣ’ ಎಂಬ ಪತ್ರಿಕೆಗಳನ್ನೂ ನಡೆಸಿದ್ದರು. ಹಾಗೆಯೇ ಕಲ್ಕಿ, ಸಾಧನಾ, ಸಂಕ್ರಾಂತಿ, ಪಂಚಾಮೃತ, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಅವರು ಕೆಲ ಕಾಲ ಕೆಲಸ ಮಾಡಿದರು. 50ಕ್ಕೂ ಹೆಚ್ಚು ಗ್ರಂಥ ಪ್ರಕಟಿಸಿದ್ದಾರೆ. ಒಂದೆರಡನ್ನು ಹೊರತುಪಡಿಸಿ ಬಹುತೇಕ ಪುರಾಣ ವಸ್ತುಗಳನ್ನು ಕುರಿತವುಗಳು.
ವೀಣೆ, ಮಾತೃಮಂದಿರ, ಮಾತೃಲಹರಿ, ಗಂಗಾಲಹರಿ (ಕವನ ಸಂಕಲನ), ಬಾಳಸೊಡರು, ಕರ್ಮವೇದನೆ, ಅನಂತ ಜೀವನ, ಉತ್ತರಾಯಣ, ಬತ್ತಿದ ಕಡಲು, ಆಹುತಿ, ಅಭಿನವ, ಅಶ್ವಘೋಷ, ಋಷಿಪಂಚಮಿ, ರಾಜಬಲಿ, ತಣ್ಣಗಿನ ಬೆಂಕಿ, ಶೃಂಗಾರತೀರ್ಥ, ಸೀತಾಪರಿತ್ಯಾಗ, ಬೆಂಕಿಯ ಮಗಳು, ನಾಗರನಂಜು, ಲಾವಣ್ಯ, ನಿ-ಪ್ರಯೋಗ, ತಂದೆ-ಮಗಳು, ದೇವನ ಇನ್ನೊಂದು ಬಾಗಿಲು, ಪುರುಷಸೂಕ್ತ, ನಾಯಿಮೂಗು, ರಾಜಕ್ರೀಡೆ, ಚಂಡ ಪ್ರಚಂಡ, ಒಡೆದ ಕನ್ನಡಿ, ಮನ್ವಂತರ, ಹಳೆಯ ರಾಜಕೀಯ, ಕೃಷ್ಣಾರ್ಪಣ, ಮನ್ವಂತರ, ವಿಚಿತ್ರವೀರ್ಯ, ತಂತ್ರಯೋನಿ, ಪಂಚ‘ಮ’ಗಳ ನಡುವೆ, ‘ಮಾತೃ ಲಹರಿ ಮತ್ತು ಇತರ ಕವಿತೆಗಳ ನಡುವೆ’, ಅರ್ಧನಾರಿ, ಲಾವಣ್ಯ ಇವರ ಕೃತಿಗಳು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಬರವಣಿಗೆಯಲ್ಲದೆ ಜಮಖಂಡಿಯ ಹತ್ತಿರದ ಕಲ್ಲಹಳ್ಳಿಯಲ್ಲಿ (1956) ರಾಜ್ಯಸರಕಾರದಿಂದ ಭೂಮಿ ಪಡೆದ ಸತ್ಯಕಾಮರು ಮಾದರಿ ಬೇಸಾಯ ಮಾಡಿದರು. ಕಲ್ಲಹಳ್ಳಿಯ ಗುಡ್ಡವನ್ನು ನಂದನ ವನವನ್ನಾಗಿ ಪರಿವರ್ತಿಸಿದ ಕೃಷಿಕ.
ಮಹಾನ್ ಸಾಧಕರಾಗಿದ್ದ ಅಪ್ರತಿಮ ಬರಹಗಾರ ಸತ್ಯಕಾಮ ಅವರು 1998ರ ಅಕ್ಟೋಬರ್ 20ರಂದು ನಿಧನರಾದರು.