ನಾಗತಿಹಳ್ಳಿ ಚಂದ್ರಶೇಖರ್ ಮೂಲತಃ ಮಂಡ್ಯ ಜಿಲ್ಲೆಯ ನಾಗತಿಹಳ್ಳಿಯವರು. ತಂದೆ ತಿಮ್ಮಶೆಟ್ಟಿ ಗೌಡರು, ತಾಯಿ ಪಾರ್ವತಮ್ಮ. ಪ್ರಾರಂಭಿಕ ಶಿಕ್ಷಣವನ್ನು ತಮ್ಮಊರಾದ ನಾಗತಿಹಳ್ಳಿಯಲ್ಲಿ ಪಡೆದ ಅವರು ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಪೂರ್ಣಗೊಳಿಸಿದರು. ಸ್ನಾತಕೋತ್ತರ ಪದವಿಯನ್ನು ಹಲವಾರು ಸ್ವರ್ಣಪದಕಗಳೊಂದಿಗೆ ಗಳಿಸಿದ ಚಂದ್ರಶೇಖರ್ ತಮ್ಮ ಗ್ರಾಮ ನಾಗತಿಹಳ್ಳಿಯಲ್ಲಿ ‘ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ’ಯನ್ನು ಆರಂಭಿಸಿದರು. ಜೊತೆಗೆ ಪ್ರತಿ ಯುಗಾದಿಯ ಸಂದರ್ಭದಲ್ಲಿ `ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ’ಕ್ಕೆ ಸಹಾ ಚಾಲನೆ ನೀಡಿದರು. ಈ ವೇದಿಕೆಯ ಮೂಲಕ ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್ ಕೇಂದ್ರಗಳನ್ನು ತೆರೆಯುವ ಮೂಲಕ ಗ್ರಾಮೀಣ ಜನರ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೆಲಸವನ್ನು ಆರಂಭಿಸಿದರು. ಈ ವೇದಿಕೆಯು ಗ್ರಾಮೀಣರ ಆರ್ಥಿಕ ಸಮಸ್ಯೆಗಳಿಗೂ ಸ್ಪಂದಿಸುತ್ತಿರುವ ಸಂಗತಿ ನಾಗಮಂಗಲ ತಾಲ್ಲೂಕಿನ ಬಿದರಕೆರೆ, ಯರಗನಹಳ್ಳಿ, ಸಬ್ಬನಕುಪ್ಪೆ ಗ್ರಾಮಸ್ಥರಿಗೂ ಸ್ಫೂರ್ತಿ ನೀಡಿದೆ. ಈ ವೇದಿಕೆಯ ಆಶಯಗಳನ್ನೇ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರೂ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಚಿತ್ರ ನಿರ್ದೇಶಕರಾಗಿ, ಸಾಹಿತಿಗಳಾಗಿ ಗುರುತಿಸಿಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರ್ ಬಹುಮುಖ ಪ್ರತಿಭೆ. ಸಾಂಸ್ಕೃತಿಕ ಲೋಕ. ಶಿಕ್ಷಣ, ಬರವಣಿಗೆ, ಪತ್ರಿಕಾ ಅಂಕಣಗಳು, ಸಿನಿಮಾ, ಕಿರುತೆರೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸತೊಡಗಿದ ನಾಗತಿಹಳ್ಳಿ ಚಂದ್ರಶೇಖರರು ಕಥಾಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದವರು. ಇನ್ನೂ ಎಂಟನೆಯ ತರಗತಿಯಲ್ಲಿ ಓದುತ್ತಿರುವಾಗಲೇ ಅವರು ‘ಆವರ್ತ’ ಎಂಬ ಕಥೆ ಬರೆದಿದ್ದ ಅವರು ಇದುವರೆಗೆ ಕಥೆ, ಕಾದಂಬರಿ, ಪ್ರವಾಸ ಕಥನಗಳನ್ನು ಒಳಗೊಂಡ ಅವರ 21 ಪುಸ್ತಕಗಳು ಪ್ರಕಟಣೆಗೊಂಡಿವೆ. ‘ಹಾಡುಗಳು’, ‘ನನ್ನ ಪ್ರೀತಿಯ ಹುಡುಗನಿಗೆ’, ‘ಮಲೆನಾಡಿನ ಹುಡುಗಿ, ಬಯಲು ಸೀಮೆಯ ಹುಡುಗ’, ‘ಸನ್ನಿಧಿ’, ‘ಪ್ರೇಮ ಕಥಾ ಸಂಪುಟ’, ‘ಅಕಾಲ’, ‘ಛಿದ್ರ’ ನಾಗತಿಹಳ್ಳಿಯವರ ಪ್ರಸಿದ್ಧ ಕಥಾ ಸಂಕಲನಗಳು. ‘ಬಾ ನಲ್ಲೆ ಮಧುಚಂದ್ರಕೆ’, ‘ಚುಕ್ಕಿ ಚಂದ್ರಮರ ನಾಡಿನಲ್ಲಿ’, ‘ವಲಸೆ ಹಕ್ಕಿಯ ಹಾಡು’ ಅವರ ಕಾದಂಬರಿಗಳು. ‘ಆಯನ’, ‘ಅಮೆರಿಕ! ಅಮೇರಿಕಾ!!’, ‘ದಕ್ಷಿಣ ಧ್ರುವದಿಂ’, ‘ಹೊಳೆದಂಡೆ’ ಮುಂತಾದವು ಅವರ ಪ್ರವಾಸ ಕಥನಗಳು’. ‘ನನ್ನ ಪ್ರೀತಿಯ ಹುಡುಗಿಗೆ’ ಹಲವು ಸಂಪುಟಗಳಲ್ಲಿ ಮೂಡಿಬಂದಿರುವ ಅವರ ಆತ್ಮಕಥೆಯಾಗಿದೆ. ‘ಶತಮಾನದಂಚಿನಲ್ಲಿ’ ಅವರ ವಿವಿಧ ಲೇಖನಗಳ ಸಂಗ್ರಹ ಸಂಪುಟವಾಗಿದೆ.