ಸಾಹಿತಿ, ವಿಮರ್ಶಕ ಪ್ರೊ. ಎಂ. ಎಚ್. ಕೃಷ್ಣಯ್ಯ ಅವರು (ಜನನ: 21-07-1937) ಮೈಸೂರಿನಲ್ಲಿ ಜನಿಸಿದರು. ತಂದೆ ಹುಚ್ಚಯ್ಯ, ತಾಯಿ ಕೆಂಪಮ್ಮ. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ. ಎ ಮತ್ತು ಎಂ. ಎ. ಪದವೀಧರರು. ಬೆಂಗಳೂರು, ಕೋಲಾರ, ಮಂಗಳೂರು, ಮಾಗಡಿ ಮುಂತಾದೆಡೆ ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ.
1979-83ರಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ನಿರ್ದೇಶನಾಲಯದ ಯುವ ಕರ್ನಾಟಕ ಹಾಗೂ ಸ್ಫೋರ್ಟ್ಸ್ ಅರೆನಾ ಪತ್ರಿಕೆಗಳಿಗೆ ಇವರನ್ನು ಸರ್ಕಾರವು ಸಂಪಾದಕರೆಂದು ನಿಯೋಜಿಸಿತ್ತು. ಲಲಿತ ಕಲಾ ಅಕಾಡೆಮಿಯ `ಕರ್ನಾಟಕ ಕಲಾವಾರ್ತೆ '(1987-92) ಗೌರವ ಸಂಪಾದಕರು ಮತ್ತು ಕಲಾ ಪಂಥ ಮಾಲೆಯ ‘ಎಕ್ಸ್ ಪ್ರೆಷನಿಸಂ’ ಹಾಗೂ ‘ಇಂಪ್ರೆಷನಿಸಂ’ ಪುಸ್ತಕಗಳಿಗೆ ಪ್ರಧಾನ ಸಂಪಾದಕರಾಗಿದ್ದರು. ಕನ್ನಡ ವಿಶ್ವವಿದ್ಯಾಲಯ ಕಾರ್ಯಕಾರಿ ಸಮಿತಿ (ಸಿಂಡಿಕೇಟ್), ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಸದಸ್ಯರಾಗಿದ್ದರು.
ಕೃತಿಗಳು: ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ, ಆರ್. ಎಂ. ಹಡಪದ್ (ಕಲಾವಿಮರ್ಶೆ), ರೂಪಶಿಲ್ಪಿ ಬಸವಯ್ಯ (ಶಿಲ್ಪಕಲೆ), ನಾಟಕ ಮತ್ತು ಸೌಂದರ್ಯ ಪ್ರಜ್ಞೆ, ಅವಲೋಕನ (ಸಾಹಿತ್ಯ ವಿಮರ್ಶೆ), ಎನ್.ಎಚ್. ಕುಲಕರ್ಣಿ (ನವ್ಯ ಶಿಲ್ಪಕಲೆ), ಶೃಂಗಾರ ಲಹರಿ, ಕಲಾ ದರ್ಶನ, ರಂಗಭೂಮಿ, ಕುವೆಂಪು ಸಾಹಿತ್ಯ : ಚಿತ್ರ ಸಂಪುಟ (ಸಂಪಾದನೆ ಕೃತಿಗಳು) ಆರ್.ಎಸ್.ಎನ್. ವ್ಯಕ್ತಿ ಮತ್ತು ಕಲೆ, ಬೆಂಗಳೂರು ದರ್ಶನ (ಇತರರೊಡನೆ), ಕಲೆ ಮತ್ತು ರಸಸ್ವಾದನೆ, ಕಾವ್ಯಭಾಷೆ (ಸಾಹಿತ್ಯ ವಿಮರ್ಶೆ), ತ್ಯಾಗಯೋಗಿ (ಎಸ್. ಕರಿಯಪ್ಪನವರ ಜೀವನ ಚರಿತ್ರೆ), ಎಚ್.ಕೆ. ವೀರಣ್ಣಗೌಡರು, ನಿಟ್ಟೂರು: ನೂರರ ನೆನಪು, ಅಜಂತ ಮತ್ತು ಎಲ್ಲೋರ, ಐತಿಹಾಸಿಕ ಕಾದಂಬರಿ: ಒಂದು ಸಮೀಕ್ಷೆ (ಲೇಖನ ಮಾಲೆ), ರಂಗಭೂಮಿ ಮತ್ತು ಸೌಂದರ್ಯ ಪ್ರಜ್ಞೆ, ಕಲಾ ಸಂಸ್ಕೃತಿ, ಸಾಹಿತ್ಯ ಕಲೆ, ಸಾಲು ದೀಪಗಳು (ಇತರರೊಡನೆ ಸಂಪಾದನೆ), ಸ್ವಾತಂತ್ಯ್ರೋತ್ತರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ (ಇತರರೊಡನೆ ಸಂಪಾದನೆ), ಸಾಹಿತ್ಯ ಮತ್ತು ಕಲೆಗಳಲ್ಲಿ ಪರಿವರ್ತನೆ ಮತ್ತು ಪ್ರಗತಿ, ಬೆಂಗಳೂರು ಕೆಂಪೇಗೌಡರ ವಂಶಸ್ಥರು, ಮೂರ್ತಾಮೂರ್ತ (ಎ.ಎನ್. ಮೂರ್ತಿ ಸಂಭಾವನಾ ಗ್ರಂಥ), ಕಾಲ ಶತಮಾನ ಕಂಡ ಕನ್ನಡ ಪತ್ರಿಕೆಗಳು, ಹಳೆಯ ಗದ್ಯ ಸಾಹಿತ್ಯ, ರನ್ನನ ಗದ್ಯ ಸಾಹಿತ್ಯ, ರನ್ನನ ಗದ್ಯ ಪುರಾಣ ಸಂಗ್ರಹ, ಶ್ರೀಗಿರಿ, ಸುವಿದ್ಯಾ, ಬಿರಿಮೊಗ್ಗು (ಪ್ರಬಂಧ), ಹೊಳಪು ಝಳಪು (ಕವನ), ಕರ್ನಾಟಕ ಕಲಾದರ್ಶನ (ಇತರರೊಡನೆ ಎರಡು ಸಂಪುಟ), ಪೂರ್ಣಚಂದ್ರ (ಮುಖ್ಯಮಂತ್ರಿ ಚಂದ್ರು ಸಂಭಾವನಾ ಗ್ರಂಥ),
ಪ್ರಶಸ್ತಿ-ಗೌರವಗಳು: ಇವರ ಶೃಂಗಾರ ಲಹರಿಗೆ ಲಲಿತ ಕಲಾ ಅಕಾಡೆಮಿ ಪುರಸ್ಕಾರ, ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಮಾಸ್ತಿ ಪ್ರಶಸ್ತಿ ಅವರಿಗೆ ಸಂದ ಮತ್ತೊಂದು ಹಿರಿಮೆ. ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಹಂಪಿ ಕನ್ನಡ ವಿ.ವಿ. ನಾಡೋಜ ಗೌರವ, ಗೌರವ ಡಾಕ್ಟರೇಟ್ ಲಭಿಸಿದೆ.