ಕೇರಳದಲ್ಲಿ ಹುಟ್ಟಿ, ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿ ಹಳ್ಳಿಯಲ್ಲಿದ್ದು, ತಿರುಕ ಎಂ ಕಾವ್ಯನಾಮದೊಂದಿಗೆ ಬೆಳೆದವರು. ತಂದೆ ಅನಂತ ಪದ್ಮನಾಭ ನಂಬೂದರಿ, ತಾಯಿ ಪದ್ಮಂಬಾಳ್. ಈ ಮಗುವಿಗೆ ದೇಹ ವಿಕಾರ ಹಾಗೂ ಮೆದುಳಿನ ಬೆಳವಣಿಗೆ ಸರಿಯಾಗಿರಲಿಲ್ಲ. ಮೂಕಾಂಬಿಕ ದರ್ಶನಕ್ಕೆ ಬಂದಿದ್ದ ದಂಪತಿ ಬಾರಕೂರಿನಲ್ಲಿ ತಂಗಿದ್ದರು. ಆ ಹಾದಿಯಲ್ಲಿ ಉಡುಪಿಗೆ ಹೊರಟಿದ್ದ ಮಂತ್ರಾಲಯದ ಪೀಠಸ್ಥ ಸ್ವಾಮಿಗಳು ಈ ಮಗುವನ್ನು ಕಂಡು ಕೀರ್ತಿವಂತನಾಗುವುದಾಗಿ ಹರಸುತ್ತಾರೆ.
ತಂದೆ ಈ ಮಗುವನ್ನು ಸಾಕಲಾಗದೆ ಅತಿಥೇಯರಾಗಿದ್ದ ನರಸಿಂಹಯ್ಯ – ಪುತಲೀ ಬಾಯಿ ಅವರಿಗೆ ದತ್ಯತು ಕೊಟ್ಟು ಯಾತ್ರೆ ಹೊರಡುತ್ತಾರೆ. ಈ ಮಗು ಮುಂದೆ ರಾಘವೇಂದ್ರ ಎಂದು ನಾಮಕರಣವಾಗುತ್ತದೆ. ಕುಂದಾಪುರದ ಶಾಲೆಗೆ. ಕನ್ನಡ ಸಂಸ್ಕೃತ ಕಲಿಯುತ್ತಾನೆ. ಈ ಮಗುವಿಗೆ ದೇಔರು ಕಾಣುವ ಹಂಬಲ. ಬಾಬಾ, ಬೈರಾಗಿ, ಸಂನ್ಯಾಸಿ, ಮಠಾಧೀಶರಲ್ಲಿ ‘ದೇವರನ್ನು ತೋರಿಸಿ’ ಎಂದು ಬೇಡಿಕೊಳ್ಳುತ್ತಾನೆ. ಹೊಟ್ಟೆ ಪಾಡಿಗಾಗಿ ಸೇರಿದ್ದು ತುಮಕೂರಿನಲ್ಲಿ. ಮುಂಡಾಜೆ ರಂಗನಾಥ ಭಟ್ಟರ ‘ಅಂಬಾ ಪ್ರಸಾದಿತ ನಾಟಕ ಮಂಡಲಿ’. ಟಿಕೆಟ್ ಮಾರಾಟ, ಲೆಕ್ಕಪತ್ರ, ಸಂಬಳ ಬಟವಾಡೆ, ಚಿಕ್ಕಪುಟ್ಟ ಪಾತ್ರಗಳ ಅಭಿನಯ ಮಾಡುತ್ತಿದ್ದರು. ಪಳನೀ ಸ್ವಾಮಿಗಳಿಂದ ‘ಹಠಯೋಗ ಸಾಧನೆಯ ಶಿಕ್ಷಣ’ ಕಲಿತರು. ಪಂಡರಾಪುರದಲ್ಲಿ ‘ಸ್ವಾಮಿ ಶಿವಾನಂದರ ಪ್ರವಚನ’ದಿಂದ ಪ್ರಭಾವಿತರಾದರು. “ದೇವರಿಗಾಗಿ ಏಕೆ ಅಳುವೆ, ನಿನ್ನ ಸುತ್ತ ಕಷ್ಟದಲ್ಲಿರುವವರೇ ದೇವರ ಸ್ವರೂಪ ಎಂದು ತಿಳಿ ಎಂಬ ಸ್ವಾಮೀಜಿಗಳ ಉಪದೇಶ ಅವರಿಗೆ ದಿವ್ಯ ಮಂತ್ರವಾಯಿತು. ಬರೋಡಾದ ಜುಮ್ಮಾದಾದ ವ್ಯಾಯಾಮ ಶಾಲೆಯಲ್ಲಿ ಪ್ರೊ. ಮಾಣಿಕ್ಯರಾಯರ ನೇತೃತ್ವದಲ್ಲಿ ಕಲಿತ ವ್ಯಾಯಾಮ – ಲಾಠಿ, ಭರ್ಜಿ, ತಲವಾರ್, ಕುಸ್ತಿ, ಕುದುರೆ ಸವಾರಿಯಲ್ಲಿ ಪರಣಿತಿ ಪಡೆದರು. ಲಾಹೋರಿಗೆ ತೆರಳಿ ಕೈವಲ್ಯಾಶ್ರಮದ ಬಾಬಾ ಲಕ್ಷ್ಮಣ ದಾಸರಲ್ಲಿ ಆಯುರ್ವೇದ ಶಿಕ್ಷಣ. ಆಯುರ್ವೇದ ಗ್ರಂಥ ಶಾಸ್ತ್ರಗಳ ಪರಿಚಯ ಮಾಡಿಕೊಂಡರು.
ರೋಗಿಗಳ ಚಿಕಿತ್ಸೆ, ಔಷಧಿ ತಯಾರಿಕೆಯಲ್ಲಿಯೂ ಶಿಕ್ಷಣ ಪಡೆದು ಪುನಃ ಕರ್ನಾಟಕದ ಉಡುಪಿಗೆ ಬಂದು ಅಷ್ಟಮಠಾಧೀಶರ ಮುಂದೆ ಯೋಗ ವಿದ್ಯೆ ಪ್ರದರ್ಶಿಸಿದರು. ಕರ್ನಾಟಕ ದಾದ್ಯಂತ ಸುತ್ತುತ್ತಾ ನೀಡಿದ ಯೋಗ ಶಿಕ್ಷಣ ನೀಡಿದರು. ನಂತರ (1943)ಮಲ್ಲಾಡಿಹಳ್ಳಿಯಲ್ಲಿ ನೆಲೆ ನಿಂತರು. , ನರ್ಸರಿಯಿಂದ ಪದವಿ ಪೂರ್ವಕಾಲೇಜು, ಆಯುರ್ವೇದ ಆಸ್ಪತ್ರೆ, ವಿದ್ಯಾರ್ಥಿ ನಿಲಯ, ಭೋಜನ ಶಾಲೆ, ವೃದ್ಧಾಶ್ರಮ, ಯೋಗ ಕೇಂದ್ರ ಆರಂಭಿಸಿದರು. ತಿರುಕನಾಗಿ ಜೋಳಿಗೆ ಹಿಡಿದು, ತಿರುಕ’ ಎಂದೇ ಖ್ಯಾತಿ ಪಡೆದರು.
ಕೃತಿಗಳು: ಸೂರ್ಯ ನಮಸ್ಕಾರ, ಪ್ರಾಣಾಯಾಮ, ಅಂಗ ಮರ್ಧನ, ಯೋಗಾಸನ, ಕೊನೆಯ ಗುಟುಕು, ಮೂಳೆಯ ಹಂದರ, ಚಿತೆಯೋ ಸಮಾಧಿಯೋ ಹೀಗೆ 9 ಕಾದಂಬರಿಗಳು; ರಣಚಂಡಿ, ಮಹಾಕವಿ ಭಾರವಿ, ಉಷಾ ಸ್ವಯಂವರ ಹೀಗೆ 12 ನಾಟಕಗಳು; ಧ್ಯಾನಭಾರತಿ, ಜ್ವಾಲಾಮುಖಿ-6 ಏಕಪಾತ್ರಾಭಿನಯಗಳು, ಕವನ-ಕಥೆಗಳನ್ನು ರಚಿಸಿದ್ದಾರೆ. 1978ರಲ್ಲಿ ತ.ಸು. ಶಾಮರಾಯರ ಸಂಪಾದಕತ್ವದಲ್ಲಿ ಇವರಿಗೆ ಅರ್ಪಿಸಿದ ಅಭಿನಂದನ ಗ್ರಂಥ ‘ನಂದನವನ’. ಇವರು 04-08-1996 ರಂದು ನಿಧನರಾದರು.