ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’. ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ಅವರು ನಿರಾಡಂಬರ ವ್ಯಕ್ತಿ. ಸದ್ದಿಲ್ಲದ ಶಿಸ್ತಿನ ಕೆಲಸಗಾರರು. ಸಭ್ಯ ಸುಸಂಸ್ಕತ ನಿಷ್ಠಾವಂತರು. ಕಾಯಕಯೋಗಿ, ಬಹುಮುಖಿ ಪ್ರತಿಭಾವಂತರು. ಇವರ ಪೊದೆಯಿಂದಿಳಿದ ಎದೆಯ ಹಕ್ಕಿ (ಸಾಹಿತ್ಯ ವಿಮರ್ಶೆ) ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ದೊರೆತಿದೆ.