‘ರಜನೀಶ್ ನಿಜರೂಪ’ - ಹ್ಯೂ ಮಿಲೇನ್ ಅವರ ಆಂಗ್ಲ ಕೃತಿಯನ್ನು ಸಾಹಿತಿ ಬಿ.ಆರ್. ಲಕ್ಷ್ಮಣರಾವ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಸಾವಿರಾರು ಜೆನ್ ಕತೆಗಳನ್ನು ಹೇಳುತ್ತಿದ್ದ, ಆಧ್ಯಾತ್ಮದ ಮೂಲಕ ಜನರನ್ನು ಸೆಳೆಯುತ್ತಿದ್ದ ಓಶೋ ರಜನೀಶ್, ಕುಖ್ಯಾತಿ ಮಧ್ಯೆಯೂ ಖ್ಯಾತಿಯ ತುತ್ತ ತುದಿಗೇರಿದವರು.
ಕಳೆದ ಶತಮಾನದ ಅತ್ಯಂತ ವರ್ಣರಂಜಿತ ವ್ಯಕ್ತಿತ್ವದ ರಜನೀಶ್ ಪುಣೆಯ ತಮ್ಮ ಧಾಮದಲ್ಲಿ 1990ರ ಜನವರಿ 20ರಂದು ನಿಧನರಾದರು. ವಿಭಿನ್ನ ವಿಚಾರಧಾರೆ ಹಾಗೂ ವಿಶಿಷ್ಟ ಜೀವನಸೃಷ್ಟಿಯ ರಜನೀಶ್ ಓಶೋ ಅವರನ್ನು ಒಬ್ಬ ಧೀಮಂತ ದಾರ್ಶನಿಕರೆಂದು ಕೊಂಡಾಡುವವರೂ ಇದ್ದಾರೆ, ಹಾಗೆಯೇ, ಭಗದ ಗುರು, ಢೋಂಗಿ ಸನ್ಯಾಸಿ ಎಂದು ಹೀಯಾಳಿಸುವವರೂ ಇದ್ದಾರೆ. ರಜನೀಶ್ ಒಬ್ಬ ಸಂತ ಹೌದೋ ಅಲ್ಲವೋ, ಆದರೆ ಆತ ಮಹಾ ಸ್ಥೈರ್ಯವಂತ ಎಂಬುದನ್ನು ಹ್ಯೂ ಮಿಲೇನ್ ತಮ್ಮ ಕೃತಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಲಂಡನ್ ನ ಹ್ಯೂ ಮಿಲೇನ್ ಅವರು ರಜನೀಶ್ ಅವರ ಆಪ್ತಶಿಷ್ಯರಾಗಿ, ಛಾಯಾಚಿತ್ರಗ್ರಾಹಕರಾಗಿ, ಮತ್ತು ಅಂಗರಕ್ಷಕರಾಗಿ ರಜನೀಶ್ ಅವರನ್ನು ತುಂಬ ಹತ್ತಿರದಿಂದ ಬಲ್ಲವರು, ಸುಮಾರು ಹತ್ತು ವರ್ಷಗಳ ಕಾಲ ರಜನೀಶ್ ಚಳವಳಿಯ ವಲಯದಲ್ಲಿದ್ದು, ತಮ್ಮನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದ ಹ್ಯೂ ಮಿಲೇನ್, ತಮ್ಮ ಅನುಭವ, ಹಾಗೂ ಅನಿಸಿಕೆಗಳನ್ನು ಈ ಪುಸ್ತಕದಲ್ಲಿ ಅಧಿಕೃತವಾಗಿ, ಆಧಾರ ಸಹಿತವಾಗಿ, ವಸ್ತುನಿಷ್ಠವಾಗಿ ದಾಖಲಿಸಿದ್ದಾರೆ.
©2024 Book Brahma Private Limited.