ಜ್ಹೆನ್ ಹಾಯ್ಕುಗಳು - ಓಶೋ ವ್ಯಾಖ್ಯಾನದೊಂದಿಗೆ, ಈ ಕೃತಿಯನ್ನು ಟಿ.ಎನ್. ವಾಸುದೇವಮೂರ್ತಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಕೃತಿಯ ಮೂಲಧಾತುಗಳು ಪುನೀತವಾಗುವುದೇ ಶ್ರೇಷ್ಟ ಕವಿಗಳ ಕಾವ್ಯದಲ್ಲಿ. ಗ್ರಹಿಸಿದ ಭಾವಗಳನ್ನು ಎದೆಯ ಕುಲುಮೆಯಲ್ಲಿ ಹಾಯಿಸಿದಾಗ ಈಚೆಗೆ ಹೊಳೆಯುವ ಕಾವ್ಯ ಲೋಹ ಅದು ಪರುಷಮಣಿಯೇ ಆಗಬಲ್ಲದು. ಜ್ಹೆನ್ ಹಾಯ್ಕುಗಳು ಇಂಥ ಭಾವ ಕಣಿವೆಯಲ್ಲಿ ಹಾದು ಬಂದ ಝರಿಗಳು, ಬದುಕಿನ ಕೊರಕಲುಗಳನ್ನು ತಾಕಿಕೊಂಡು ಬಂದ ನದಿಯ ಹರಿವು. ಓಶೋ ಅವರ ಓದಿಗೆ ದಕ್ಕಿದ ಜ್ಹೆನ್ ಹಾಯ್ಕುಗಳು ಮತ್ತಷ್ಟು ಪ್ರಖರಗೊಳ್ಳುವುದು ಅವರ ವಿಶ್ಲೇಷಣೆಯ ಬೆಳಕಿನಿಂದ. ಹಾಗೆ ನೋಡಿದರೆ ಓಶೋ ಅವರು ಈ ಹಾಯ್ಕುಗಳ ಅರ್ಥವನು ಇದಮಿತ್ಥಂ ಎಂದು ಅಂತಿಮ ಷರಾ ಬರೆಯುವುದಿಲ್ಲ. ಬದಲಿಗೆ ಎಂದಿನಂತೆ ತಮ್ಮ ತುಂಟ ಮತ್ತು ಮೊನಚಾದ ಪ್ರಶ್ನೆಗಳನ್ನು ಹುಟ್ಟುಹಾಕುವಂತೆ ಬಗೆಯುತ್ತಾರೆ.
ಇಲ್ಲಿನ ಹಾಯ್ಕುಗಳಲ್ಲಿ ಹರಿದಾಡಿರುವುದು ಜೀವಂತ ಕಾವ್ಯ ಮತ್ತು ಹೇಳಿದ್ದಕ್ಕಿಂತ ಹೇಳದೇ ಉಳಿವ ಮೌನದ ಶ್ರೇಷ್ಟತನ ಓಶೋ ಬಲ್ಲರು. ಮೌನದಾಚೆಯ ವಿಶ್ವಾತ್ಮಕ ತಥ್ಯವನ್ನು ಕಟ್ಟಿಕೊಡುವ ಹಾಯ್ಕು ಕವಿಗಳು ಆಯ್ಕೆ ಮಾಡಿಕೊಂಡಿರುವ ವಸ್ತುಗಳೇ ಇಲ್ಲಿ ಕುತೂಹಲಕರ. ಸಾಮಾನ್ಯರ ಕಣ್ಣಿಗೆ ಯಾವುದು ನಗಣ್ಯವೋ ಅದು ಈ ಕವಿಗಳಲ್ಲಿ ಜೀವಗಾಮಿನಿಯ ರೂಹಾಗಿ ಕಂಗೊಳಿಸಿದೆ. ಶಬ್ದಗಳ ಬಳಕೆಯ ವ್ಯಸನ ಮತ್ತು ಪದಗಳ ದುಂದುವೆಚ್ಚವನ್ನು ಈ ಹಾಯ್ಕುಗಳು ತಣ್ಣಗೆ ನಿರಾಕರಿಸುತ್ತವೆ ಎನ್ನುತ್ತಾರೆ ಲೇಖಕ ವಾಸುದೇವ ನಾಡಿಗ್.
ಟಿ.ಎನ್. ವಾಸುದೇವಮೂರ್ತಿ ಅವರ ಓದು ಅಧ್ಯಯನ ಮತ್ತು ಚಿಂತನೆಯ ಪರಿಕ್ರಮದ ಅನನ್ಯತೆಗಳ ಪಟ್ಟಿಗೆ ಈ ಕೃತಿ ಮತ್ತೆ ಸಾಕ್ಷಿಯಾಗುತ್ತದೆ ಎನ್ನಬಹುದು. ಕನ್ನಡ ಕಾವ್ಯದ ಈ ಹೊತ್ತಿನ ಅನೇಕ ಅಸಮಾಧಾನ ಮತ್ತು ತಕರಾರುಗಳ ಮಧ್ಯೆ ಈ ಕೃತಿ ಒಂದು ಪಠ್ಯ ಮಾಗ್ರವಾಗಿ ಗೋಚರಿಸುತ್ತದೆ.
©2024 Book Brahma Private Limited.