'ಚಹರೆಗಳೆಂದರೆ ಗಾಯಗಳೂ ಹೌದು’ ಲೇಖಕ ಎ. ಎಸ್. ಪ್ರಭಾಕರ ಅವರ ಸಮುದಾಯ ಅಧ್ಯಯನ ಕುರಿತ ಕಥನಗಳ ಸಂಕಲನವಾಗಿದೆ. ಈ ಕೃತಿಗೆ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಬಿ. ರಮೇಶ್ ಬೆನ್ನುಡಿಯ ಮಾತುಗಳನ್ನು ಬರೆದಿದ್ದು, ಈ ಕೃತಿಯಲ್ಲಿನ ಸಮುದಾಯ ಅಧ್ಯಯನಗಳ ಕುರಿತ ಕಥನಗಳು ವರ್ತಮಾನದಲ್ಲಿ ನಮ್ಮೊಡನೆ ಬದುಕುತ್ತಿರುವ ಬುಡಕಟ್ಟು, ಆದಿವಾಸಿ ಸಮುದಾಯಗಳ ವೈರುಧ್ಯಗಳಿಂದ ಕೂಡಿದ ಸಮಾಜೋ -ಆರ್ಥಿಕ ಬದುಕಿನ ವಾಸ್ತವಗಳೇ ಆಗಿದ್ದರೂ ನಾಗರೀಕ ಜಗತ್ತಿನ ಚಿಂತನಾ ಕ್ರಮವಲ್ಲದ ವಾಸ್ತವಿಕ ಸತ್ಯಗಳಾಗಿವೆ ಎಂದಿದ್ದಾರೆ. ಈ ಐತಿಹಾಸಿಕ ಮತ್ತು ವರ್ತಮಾನದ ಸತ್ಯಾಂಶಗಳನ್ನು ಕಥನರೂಪದಲ್ಲಿ ಕಟ್ಟಿಕೊಟ್ಟಿರುವ ಕ್ರಮವು ಪ್ರೌಢತೆಯಿಂದಲೂ ಉನ್ನತ ಸಾಮಾಜಿಕ ಜವಾಬ್ದಾರಿಯಿಂದಲೂ ಕೂಡಿರುವುದನ್ನು ಗಮನಿಸಬಹುದು. ಕೃತಿಯಲ್ಲಿನ ಎಲ್ಲಾ ಲೇಖನಗಳು ಓದಬೇಕಾದ ಜವಾಬ್ದಾರಿಯನ್ನು ಮೂಡಿಸುತ್ತದೆ. ಈ ಕೃತಿಯ ಪ್ರತೀ ಲೇಖನದ ಸಾಲುಗಳಲ್ಲಿ ಈ ನೆಲದ ದಮನಿತರ ಧ್ವನಿಗಳ ’ ಆತ್ಮ’ ವಿರುವುದನ್ನು ಓದುಗರು ಗ್ರಹಿಸಬಹುದಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
‘ಚಹರೆಗಳೆಂದರೆ, ಗಾಯಗಳೂ ಹೌದು’ ಕೃತಿಯ ವಿಮರ್ಶೆ
ಪರ್ಯಾಯ ಹಂಬಲಗಳ ಪರಿಶೀಲನೆ
'ಚಹರೆಗಳೆಂದರೆ, ಗಾಯಗಳೂ ಹೌದು’ ಗೆಳೆಯರಾದ ಡಾ. ಎ.ಎಸ್. ಪ್ರಭಾಕರ ಅವರ ಸಮುದಾಯ ಕಥನಗಳ ಕುರಿತು ಮಾತನಾಡುವ ಕೃತಿ. ಇಂತಹದೊಂದು ಅಪರೂಪದ ಕೃತಿಯನ್ನು ಓದುವಾಗ ಮತ್ತೆ ಮತ್ತೆ ಓದುಗನನ್ನು 'ಸಾಂಸ್ಕೃತಿಕ ಪ್ರಜ್ಞೆ' ಎನ್ನುವುದು ಆವರಿಸಿಕೊಳ್ಳುತ್ತದೆ. ಹಾಗಾಗಿಯೇ ಈ ಮೇಲಿನ ಮಾತುಗಳನ್ನು ಮನನ ಮಾಡುವುದು ಅನಿವಾರ್ಯ, ಸಾಂಸ್ಕೃತಿಕ ಅಧ್ಯಯನ ಸಂಶೋಧನೆ ಎನ್ನುವ ಮಾದರಿಯೊಂದು ಸಹಜವಾಗಿಯೇ ಈ ಕೃತಿಯೊಳಗೆ ಹರಳುಗಟ್ಟಿದೆ, ಪದ, ವಾಕ್ಯ, ಅಕ್ಷರಗಳಿಗೆ ಅರ್ಥ ತುಂಬುವುದು, ಲೇಖನಕ್ಕೊಂದು ಆಶಯವೆನ್ನುವುದು, ಬರಹಗಾರನ ನಿಜದ ಕಾಳಜಿಗಳೆನ್ನುವುದನ್ನೆಲ್ಲಾ ಈ ಕೃತಿ ನಿಧಾನವಾಗಿ ಅರಿವು ಮಾಡಿಸುತ್ತದೆ.
ಕೃತಿ, ವಿಶಿಷ್ಟ ಕೊಡುಗೆ ಎನ್ನುವುದೊಂದು ಸಾಮಾನ್ಯ ಮಾತಿನಂತಾಗದೆ ಬರಹ ಮತ್ತು ಬರಹಗಾರರ ಬದ್ಧತೆ ಮತ್ತು ಕಾಳಜಿಗಳ ರೂಪಕವಾಗುತ್ತದೆ. ಪ್ರತಿ ವಿಷಯದ ಆಯ್ಕೆ ಯೋಚಿಸಿ, ಯೋಜಿಸಿದಂತಾಗಿಲ್ಲ. ಪ್ರತಿಯೊ೦ದು ಬರೆಯಲೇ ಬೇಕು, ದಾಖಲಾಗಬೇಕು, ವಾಸ್ತವದೊಂದಿಗೆ ಸಂವಾದಿಸಬೇಕು ಎಂಬ ತುಡಿತದೊಂದಿಗೆ ಬರೆಸಿಕೊ೦ಡ ಲೇಖನಗಳಾಗಿದೆ. ಸಮುದಾಯಗಳ ಚಹರೆಗಳು ಮತ್ತು ಗಾಯಗಳು ಎನ್ನುವಲ್ಲಿಯೇ ಖಚಿತವಾಗುವ ಗಾಂಭೀರ್ಯಕ್ಕೆ ಭಾವುಕತೆಯ ಲೇಪವಿಲ್ಲ. ನಾಗರಿಕತೆ, ಆಧುನಿಕತೆಯ ಹುಳುಕುಗಳ ದರ್ಪಣವೂ ಆದಂತಾಗುತ್ತದೆ. ಒಬ್ಬ ಪ್ರಾಮಾಣಿಕ ಸಂಶೋಧಕ ಜೀವಪರ ಸಂದೇದನೆಯ ಲೇಖಕ ಅಂತಃಕರಣವನ್ನು ಹೊಂದಿದಾಗ ಈ ಬಗೆಯ ಕೃತಿಯೊಂದು ಹೆರಿಗೆಯ ಸಂಕಟವೊಂದನ್ನು ಅವುಡುಗಚ್ಚಿ ಸಹಿಸುತ್ತಲೇ ಹೊಸ ಜನಕ್ಕೆ ಕಾರಣವಾಗುವ ಬಗೆಯಾಗುತ್ತದೆ.
ಕೃತಿಯ ಪ್ರತಿ ಬರಹಗಳಲ್ಲಿರುವ ಆಪ್ತತೆಯ ಸಂವೇದನೆಗೆ ಕಾರಣವಾಗುವುದು. ಲೇಖಕನೇ ಪಾತ್ರವಾಗುವ, ಘಟನೆಯಾಗುವ, ಸಾಕ್ಷಿಯಾಗುವ ಗುಣಗಳಿಂದ ತಾದ್ಯಾತೆ ಎನ್ನುವ ಸರಳ ಅರ್ಥವನ್ನು ಮೀರಿದ ಪ್ರತಿಫಲವಿದು. ಓದುಗರು ಅಕ್ಷರದೊಂದಿಗೆ ಸೇರುತ್ತಲೇ ಮನನ, ಪರಿಶೀಲನೆಯ ಸಾಧ್ಯತೆಗೂ ಚಾಚಿಕೊಳ್ಳುವಂತಾಗುವುದು ಕೃತಿಯೊಳಗಿನ ಶಕ್ತಿ ಮತ್ತು ಅದೊಂದು ಸಾಂಸ್ಕೃತಿಕ ಹರವೂ ಹೌದು.
ಹನ್ನೊಂದು ಲೇಖನಗಳು-ವಿಚಾರಗಳ ಕಾರಣಕ್ಕೆ ಎಲ್ಲವೂ ಸ್ವತಂತ್ರ, ಆದರೆ ಒಂದರೊಡನೊಂದು ಪೂರಕವಾದ ಸಂಬಂಧಗಳನ್ನು ಏರ್ಪಡಿಸಿಕೊಳ್ಳುವುದರಲ್ಲಿ ನಿಜದನಿಯ ಸಹಜತೆ ಇದೆ. 'ಬುಡಕಟ್ಟುಗಳ ಬದುಕಿನ ಮೀಮಾಂಸೆ ಯೊಂದಿಗೆ ತೆರೆದುಕೊಂಡು 'ಕರ್ನಾಟಕದ ಆದಿವಾಸಿ ರೈತ ಹೋರಾಟಗಳ ಸ್ವರೂಪ 'ಅಲೆಮಾರಿಗಳ ಶಾಪಗ್ರಸ್ತ ಪಯಣ' 'ಒಳಗಿನವರಾಗುವುದು; ಹಾಗೆಂದರೇನು?' ಎಂದೆಲ್ಲಾ ಮುಂದುವರಿಯುತ್ತದೆ.
( ಕೃಪೆ : ವಾರ್ತಾಭಾರತಿ, ಬರಹ :ಡಾ. ಜಿ. ಪ್ರಶಾಂತನಾಯಕ)
--
©2024 Book Brahma Private Limited.