ಡಾ. ಲೀನಾ ನಾಯ್ಕ ಅವರ ಕೃತಿ-ಹಾಲಕ್ಕಿಯರ ಬದುಕು ಹಾಗೂ ಸಾಹಿತ್ಯದ ಸ್ಥಿತ್ಯಂತರಗಳು. ಹಾಲಕ್ಕಿ ಜನಾಂಗವು ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಬುಡಕಟ್ಟು ಜನಾಂಗ. ಅದು ತನ್ನ ಜೀವನ ಶೈಲಿ, ಉಡುಗೆ ತೊಡುಗೆ ಹಾಗೂ ಆಚರಣೆಗಳಿಂದ ಹೇಗೆ ದೂರ ಸರಿಯುತ್ತಿದೆ ಮತ್ತು ಅವರ ಮೌಖಿಕ ಸಾಹಿತ್ಯದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಪರಿಚಯಿಸುವ ಕೃತಿ ಇದು. ಈ ಬದಲಾವಣೆಗಳು ಬುಡಕಟ್ಟಿನ ಬುಡವನ್ನೇ ಏರುಪೇರು ಮಾಡುವ ಸಾಮರ್ಥ್ಯ ಹೊಂದಿರುವುದು ಕಳವಳಕಾರಿ ವಿಷಯ. ಇಂತಹ ಎಲ್ಲ ಸ್ಥಿತ್ಯಂತರಗಳನ್ನು ವಿವರವಾಗಿ ಚರ್ಚಿಸಲಾಗಿದೆ.
ಹಾಲಕ್ಕಿ ಜನಾಂಗವೂ ಬದಲಾವಣೆಗೆ ಹೊರತಲ್ಲ. ಆದರೆ ಈ ಬದಲಾವಣೆ ಸ್ವಾಭಾವಿಕವಾಗಿ ಜರುಗದೇ ಹೊರ ಜಗತ್ತಿನ ವ್ಯಾಪಕ ಸಂಪರ್ಕ ಹಾಗೂ ತಮ್ಮ ಸಂಸ್ಕೃತಿಯ ನಿರ್ಲಕ್ಷ್ಯದಿಂದ ನಡೆಯುತ್ತಿರುವುದು ವಿಷಾದಕರ. ಈ ಬದಲಾವಣೆಗಳ ವೇಗ. ಕೇವಲ ಒಂದು ತಲೆಮಾರಿನ ಅಂತರದಲ್ಲೇ ಹಾಲಕ್ಕಿ ಒಕ್ಕಲಿಗರು ತಮ್ಮ ಜೀವನದ ಎಲ್ಲಾ ಆಯಾಮಗಳಲ್ಲಿ ಮಾಡಿಕೊಂಡಿರುವ ಬದಲಾವಣೆ ಆ ಸಮಾಜದ ಹಿರಿಯ ತಲೆಗಳನ್ನೇ ಚಿಂತೆಗೀಡು ಮಾಡಿರುವುದು ಕಂಡುಬರುತ್ತದೆ. ಇವರದ್ದು ಸಂಕೀರ್ಣ ಪದ್ಧತಿಗಳನ್ನು ಮತ್ತು ವೈವಿಧ್ಯಮಯ ಆಚರಣೆಗಳನ್ನು ಹೊಂದಿರುವ ಅಪೂರ್ವ ಬುಡಕಟ್ಟು ಜನಾಂಗ. ಆಧುನಿಕತೆಯ ವ್ಯಾಮೋಹದಿಂದ ಸಂಕೀರ್ಣವಾಗಿರುವುದೆಲ್ಲವೂ ತೀರಾ ಸರಳವಾಗಿ ಬದಲಾಗಿದೆ. ಉಡುಗೆ ತೊಡುಗೆ, ಹಬ್ಬಗಳ ಆಚರಣೆ, ವೈಯುಕ್ತಿಕ ಸಂಬಂಧ, ಮದುವೆ, ಸೀಮಂತ ಹೀಗೆ ಎಲ್ಲೆಡೆ ಸರಳತೆ ಎದ್ದು ಕಾಣುತ್ತಿದೆ. ಸಂಕೀರ್ಣವಾಗಿದ್ದರೂ ಅರ್ಥಪೂರ್ಣವಾಗಿದ್ದ ಆಚರಣೆಗಳು ನೇಪಥ್ಯಕ್ಕೆ ಸರಿಯುತ್ತಿವೆ.
ಹಾಲಕ್ಕಿ ಜನಾಂಗದ ಜೀವನ ಶೈಲಿಯ ಪ್ರಮುಖ ಅಂಗ ಅವರ ಹಾಡುಗಳು. ಪ್ರತಿಯೊಂದು ಆಚರಣೆಗೂ ಹಾಗೂ ಪ್ರತಿಯೊಂದು ಸಂದರ್ಭಕ್ಕೂ ಇರುವ ಹಾಡುಗಳು ಅರ್ಥಗರ್ಭೀತವಾಗಿರುವುದಲ್ಲದೆ, ಸಾಮಾಜಿಕ ಸಂದೇಶವನ್ನೂ, ಸಂಬಂಧಗಳ ಗಾಢತೆಯನ್ನೂ ಬಿಂಬಿಸುತ್ತವೆ. ಎಲ್ಲಾ ಹಾಲಕ್ಕಿ ಹೆಂಗಸರು ಹಾಡುವುದನ್ನು ಬಲ್ಲವರಾಗಿದ್ದರೂ ಕೆಲವರು ಅದರಲ್ಲಿ ನೈಪುಣ್ಯತೆಯನ್ನು ಹೊಂದಿರುತ್ತಾರೆ. ಇಂಥವರಿಗೆ ಶುಭ ಸಮಾರಂಭಗಳಲ್ಲಿ ಕರೆಸಿ ಹಾಡಿಸುವುದು ಪದ್ಧತಿ. ಇಂತಹ ಮಹಿಳೆಯರ ಕೊನೆಯ ತಲೆಮಾರು ಈಗ ಜೀವಂತವಿದೆ. ಇಂದಿನ ಯುವ ಹಾಲಕ್ಕಿ ಮಹಿಳೆಯರು ಹಾಡುಗಳನ್ನು ಕಡೆಗಣಿಸಿದ್ದಾರೆ ಮತ್ತು ಅವುಗಳ ಪ್ರಾಮುಖ್ಯತೆಯನ್ನು ಮರೆತಿದ್ದಾರೆ.
ವಿದ್ಯಾಭ್ಯಾಸ, ಕುಲಕಸುಬು ಹೊರತುಪಡಿಸಿ ಇತರ ವೃತ್ತಿ, ಪರ ಊರಿನ ಸಂಪರ್ಕ, ಬೇರೆ ಜನಾಂಗಗಳ ಸಂಪರ್ಕ, ಸವಲತ್ತುಗಳು ಹಾಗೂ ಮಾಹಿತಿ ಇವೆಲ್ಲವೂ ಈ ಬದಲಾವಣೆಗಳಲ್ಲಿ ತಮ್ಮ ಪಾತ್ರವನ್ನು ನಿಭಾಯಿಸಿವೆ ಎನ್ನಬಹುದು. ಹಾಲಕ್ಕಿ ಸಮಾಜದ ಒಳಹೊಕ್ಕರೆ ತಿಳಿದುಬರುವ ವಿಷಯಗಳ ಕಣಜ ಅಗಾಧ. ಈ ವಿಶಿಷ್ಟ ಬುಡಕಟ್ಟಿನ ಬುಡವನ್ನೇ ಏರುಪೇರು ಮಾಡುವ ಸಾಮರ್ಥ್ಯವಿರುವ ತಲ್ಲಣಗಳು ಅಲ್ಲಿ ಕಂಡುಬರುತ್ತವೆ. ಒಂದು ಸೀಮೆಯಲ್ಲಿ ಜಾರಿಯಲ್ಲಿರುವ ಆಚರಣೆಗಳು ಇನ್ನೊಂದು ಸೀಮೆಯಲ್ಲಿ ಅದಾಗಲೇ ಸರಳಗೊಂಡಿರುವುದು ಕಂಡುಬರುತ್ತದೆ ಇತ್ಯಾದಿ ಸಂಗತಿಗಳ ಸವಿಸ್ತಾರ ಚಿತ್ರಣವನ್ನು ಈ ಕೃತಿ ಒಳಗೊಂಡಿದೆ.
ಕರ್ನಾಟಕ ವಿಶ್ವವಿದ್ಯಾಲಯ ಹೊರತಂದಿರುವ ‘ಸಂಶೋಧನಾ ಕೃತಿಗಳ ವಿಶ್ವಕೋಶ’ದಲ್ಲಿ (2010) ಈ ಸಂಶೋಧನಾ ಕೃತಿಯ ಕುರಿತು ಪ್ರಕಟಿಸಲಾಗಿರುವ ವಿಮರ್ಶೆ
ಜನಪದ ಕ್ಷೇತ್ರದ ಮಹತ್ವ ಮತ್ತು ಉಪಯೋಗ ಇವೆರಡನ್ನೂ ನಿರ್ಲಕ್ಷಿಸಲಾಗುತ್ತಿರುವ ಇಂದಿನ ದಿನಗಳಲ್ಲಿ ಆ ನಿಟ್ಟಿನಲ್ಲಿ ಸಾಗುತ್ತಿರುವ ಅಧ್ಯಯನಗಳ ಸಂಖ್ಯೆ ಬಹಳ ವಿರಳ. ಜನಪದ ಕಲೆ ಮತ್ತು ಸಾಹಿತ್ಯವನ್ನು ಉಳಿಸಲು ಸರಕಾರಗಳು, ವಿಶ್ವವಿದ್ಯಾಲಯಗಳು ತಮ್ಮ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿವೆ. ಜನಪದ ಕ್ಷೇತ್ರವೊಂದು ಅಗಾಧ ಸಾಗರ. ಈ ಕ್ಷೇತ್ರದ ಅಧ್ಯಯನದಲ್ಲಿ ಹಲವಾರು ಆಯಾಮಗಳಿವೆ. ಜನಪದ ಜನಾಂಗಗಳ ಬಗೆಗಿನ ಅಧ್ಯಯನ ಅವುಗಳಲ್ಲೊಂದು. ಅದರಲ್ಲೂ ಒಂದು ನಿರ್ದಿಷ್ಟ ಜನಾಂಗವನ್ನು ಆಯ್ಕೆ ಮಾಡಿ, ಆ ಜನಾಂಗದ ಬದುಕು ಮತ್ತು ಸಾಹಿತ್ಯದಲ್ಲಿ ಆಗಿರುವ ಹಾಗೂ ಆಗುತ್ತಿರುವ ಸ್ಥಿತ್ಯಂತರಗಳನ್ನು ಅಧ್ಯಯನ ಮಾಡುವುದು ಸಂಶೋಧಕಿ ಲೀನಾ ನಾಯ್ಕರ ಪ್ರಮುಖ ಉದ್ದೇಶವಾಗಿತ್ತು.
ಸಂಶೋಧಕಿಯ ಪ್ರಕಾರ ನಾವು ಯಾವುದೇ ಜನಾಂಗವನ್ನು ಅಧ್ಯಯನ ಮಾಡಬೇಕಾದರೆ ಆಯಾ ಸಮುದಾಯದ ಒಳಗರ್ಭ ಪ್ರವೇಶಿಸಿದಾಗ ಮಾತ್ರ ಅದರ ಸಮೃದ್ಧತೆಯ ಅರಿವು ನಮಗಾಗುವುದು. ಬಾಲ್ಯದಿಂದಲೇ ಹಾಲಕ್ಕಿ ಜನಾಂಗದ ವಿಶಿಷ್ಟ ಸಂಸ್ಕೃತಿಯನ್ನು ಗಮನಿಸುತ್ತಾ ಬಂದಿದ್ದರಿಂದ ಸಂಶೋಧಕಿಯು, ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಈ ಜನಾಂಗವನ್ನು ಒಂದು ವಿಭಿನ್ನ ದೃಷ್ಟಿಕೋನದಿಂದ ಅಧ್ಯಯನ ಮಾಡಬೇಕೆಂದು ತೀರ್ಮಾನಿಸಿದರು. ಆಗ ಅಂತಿಮಗೊಂಡ ರೂಪರೇಷೆ ಹಾಲಕ್ಕಿಯರ ಸಾಂಸ್ಕೃತಿಕ ಜೀವನ ಮತ್ತು ಅವರ ಸಾಹಿತ್ಯದಲ್ಲಿ ಉಂಟಾಗಿರುವ ಬದಲಾವಣೆಯ ಕುರಿತು ಅಧ್ಯಯನದ ನೀಲಿನಕ್ಷೆ.
ಆಧುನಿಕತೆ ದಾಪುಗಾಲನ್ನಿಡುತ್ತಾ ಮುಂದುವರೆಯುತ್ತಿರುವಾಗ ಜನಪದ ಜನಾಂಗಗಳಲ್ಲಿ ಬದಲಾವಣೆ ಆಗದೇ ಇರುವುದು ದೂರದ ಮಾತು. ಹೊಸ ಪೀಳಿಗೆಯ ಯುವಕರು ಆಧುನಿಕತೆಗೆ ಮಾರುಹೋಗಿ ತಮ್ಮ ಆಚಾರ ವಿಚಾರ ಮತ್ತು ಜೀವನಶೈಲಿಗಳನ್ನು ತಕ್ಕಮಟ್ಟಿಗೆ ಬದಲಾಯಿಸಿಕೊಳ್ಳುವುದು ಸ್ವಾಭಾವಿಕ. ಆದರೆ ಎಷ್ಟರ ಮಟ್ಟಿಗೆ ಈ ಬದಲಾವಣೆ ಒಂದು ಜನಾಂಗದ ಸಾಂಸ್ಕೃತಿಕ ಬೇರನ್ನೇ ಅಲುಗಾಡಿಸಿದೆ ಎಂಬುವುದು ಮಹತ್ವದ ವಿಷಯ. ಉತ್ತರ ಕನ್ನಡದಲ್ಲಿ ವಾಸವಿರುವ ಹಲವಾರು ಜನಾಂಗಗಳಲ್ಲಿ ಹಾಲಕ್ಕಿಯರದ್ದೇ ಸಮೃದ್ಧ ಸಾಂಸ್ಕೃತಿಕ ಬದುಕು. ಇದು ಆಧುನಿಕತೆಯ ಗಾಳಿಗೆ ಸಿಲುಕಿ ಅದ್ಯಾವ ಪರಿ ಬದಲಾಗಿದೆ ಎಂಬುವುದನ್ನು ಸಂಶೋಧಕಿ ತಮ್ಮ ಸಂಶೋಧನೆಯಲ್ಲಿ ಕಂಡುಕೊಳ್ಳುತ್ತಾರೆ.
ಹಾಲಕ್ಕಿಯರ ಬಗ್ಗೆ ಇದುವರೆಗೆ ನಡೆದ ಅಧ್ಯಯನದ ಬಗ್ಗೆ ಸಮೀಕ್ಷೆಯ ಬಳಿಕ ಸಂಶೋಧಕಿ ತನ್ನ ಅಧ್ಯಯನದ ವಿವರಗಳನ್ನು ಪ್ರಸ್ತಾಪಿಸುತ್ತಾರೆ. ಈ ಮಹಾಪ್ರಬಂಧದ ಮೂಲಕ ತಿಳಿಯುವ ಅಂಶಗಳು ಹಲವಾರು ಇವೆ. ಈವರೆಗೆ ಹಾಲಕ್ಕಿ ಸಮಾಜದ ಬಗ್ಗೆ, ಅವರ ಜೀವನ ಶೈಲಿ, ನಡೆ-ನುಡಿ, ಆಚಾರ-ವಿಚಾರ ಇತ್ಯಾದಿಗಳ ಬಗ್ಗೆ ಸವಿವರವಾಗಿ ಎಲ್ಲವನ್ನೂ ದಾಖಲಿಸಲಾಗಿತ್ತು. ಅದರೆ ಅಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಯಾರೂ ಗಮನ ನೀಡಿರಲಿಲ್ಲ. ಹಾಲಕ್ಕಿಯರ ಬದುಕಿನಲ್ಲಿ ಮತ್ತು ಅವರ ಸಾಹಿತ್ಯದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಈ ಪ್ರಬಂಧ ಕಣ್ಣ ಮುಂದೆ ನಗ್ನವಾಗಿರಿಸಿದೆ. ಹಾಲಕ್ಕಿ ಸಮಾಜದ ಈ ಸ್ಥಿತ್ಯಂತರಗಳು ಯಾರಿಗೂ ತನ್ನ ಇರುವಿಕೆಯ ಯಾವುದೇ ಸೂಚನೆಯನ್ನು ನೀಡದೆ ಪರದೆಯ ಹಿಂದೆ ಅಡಗಿಕೊಂಡಿದ್ದ ಅಪ್ರಿಯ ಸತ್ಯವಾಗಿದ್ದವು. ಅವನ್ನು ಸಂಶೋಧಕಿ ಕೂಲಂಕುಷವಾಗಿ ಅಧ್ಯಯನ ಮಾಡಿ ನಮ್ಮ ಮುಂದಿರಿಸಿದ್ದಾರೆ. ಕಳವಳಗೊಳ್ಳಬೇಕಾದ ವಿಷಯಗಳಿವು. ಒಂದು ಬುಡಕಟ್ಟು ಜನಾಂಗ ಆಧುನಿಕತೆಯ ಗುಂಗಿನಲ್ಲಿ ತನ್ನ ಮೂಲ ಅಸ್ತಿತ್ವದಲ್ಲಿ ಯಾವ ರೀತಿಯ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಿದೆ ಎಂಬುವುದು ಈ ಮಹಾಪ್ರಬಂಧದ ಮೂಲಕ ಚೆನ್ನಾಗಿ ಮನದಟ್ಟಾಗುತ್ತದೆ.
ಒಂದು ಬುಡಕಟ್ಟು ಸಮಾಜದಲ್ಲಿ, ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿ ಸ್ವಾಭಾವಿಕವಾಗಿ ಇರುವಂತೆ ಗೋಚರಿಸಿದರೂ ಒಳಹೊಕ್ಕು ಕಂಡಾಗಲೇ ವಸ್ತುಸ್ಥಿತಿ ಅರಿವಾಗುವುದು. ಹಾಲಕ್ಕಿ ಸಮಾಜದಲ್ಲಾಗುತ್ತಿರುವ ಈ ಬದಲಾವಣೆಗಳು ಸಂಶೋಧನಾ ಕ್ಷೇತ್ರಕ್ಕೆ ಹೊಸದೊಂದು ಸವಾಲನ್ನು ತಂದು ಇಟ್ಟಿವೆ ಎನ್ನಬಹುದು. ಇಲ್ಲಿಂದ ಮುಂದೆ ಹಾಲಕ್ಕಿ ಜನಾಂಗ ಎತ್ತ ಸಾಗಲಿದೆ? ಆಧುನೀಕರಣದ ಈ ವ್ಯಾಮೋಹ ಮೂಲ ಹಾಲಕ್ಕಿಯನ್ನು ಎಲ್ಲಿಗೆ ಕರೆದೊಯ್ಯಲಿದೆ ಎಂಬುವುದು ಮುಂದಿನ ಪ್ರಶ್ನೆಗಳು.
ಸಂಶೋಧಕಿಯ ಭಾಷಾ ಪ್ರಯೋಗ ಉತ್ತಮವಾಗಿದ್ದು, ಎಲ್ಲವನ್ನೂ ಸರಳವಾಗಿ ಮನದಟ್ಟುವಂತೆ ವಿವರಿಸಿದ್ದಾರೆ. ಕೆಲವೊಂದು ಪದಗಳನ್ನು ಅತಿಯಾಗಿ ಬಳಸುತ್ತಾರಾದರೂ ಒಟ್ಟಾರೆ ಮಹಾಪ್ರಬಂಧ ಓದಿಸಿಕೊಂಡು ಹೋಗುತ್ತದೆ. ಯಾವುದೇ ವಿಷಯವನ್ನು ಅತಿಯಾಗಿ ವಿವರಿಸಿ ಗೊಂದಲ ಮಾಡುವ ಯಾವುದೇ ಸನ್ನಿವೇಶ ಪ್ರಬಂಧದಲ್ಲಿ ಎದುರಾಗಲಿಲ್ಲ. ವಿಷಯವನ್ನು ಗಮನದಲ್ಲಿಟ್ಟುಕೊಂಡು ಅದರ ಚೌಕಟ್ಟಿನಲ್ಲಿದ್ದುಕೊಂಡೆ ಅದಕ್ಕೆ ಸಂಬಂಧಪಟ್ಟ ಎಲ್ಲಾ ಅಂಶಗಳನ್ನು ಚೆನ್ನಾಗಿ ವಿವರಿಸಿದ್ದಾರೆ.
ಸನ್ನಿವೇಶಕ್ಕೆ ತಕ್ಕಂತೆ ಅವಶ್ಯಕತೆ ಇದ್ದಲ್ಲಿ ಹಾಲಕ್ಕಿಯರ ಜನಪದ ಹಾಡುಗಳನ್ನು, ಒಗಟುಗಳನ್ನು ಹಾಗೂ ಅವರು ಬಳಸುವ ಶಬ್ದಗಳನ್ನು ಪ್ರಬಂಧದಲ್ಲಿ ಅಲ್ಲಲ್ಲಿ ಬಳಸಲಾಗಿದೆ. ಹಾಡುಗಳ ಮೂಲಕವೇ ಹಾಲಕ್ಕಿಯರ ಹಲವು ವಿಧಿ ವಿಧಾನಗಳನ್ನು ವಿವರಿಸಿರುವುದು ಈ ಪ್ರಂಬಂಧದ ಹೆಗ್ಗಳಿಕೆ. ಹಾಲಕ್ಕಿಯರಲ್ಲಿ ಒಂದು ನಿರ್ದಿಷ್ಟ ಬದಲಾವಣೆಯಾಗಿದ್ದಲ್ಲಿ, ಅದು ಏಕೆ ಆಯಿತು? ಕಾರಣಗಳೇನು? ಎಂದು ಕಾರಣಗಳ ಪಟ್ಟಿ ಮಾಡಿ, ಪ್ರತಿಯೊಂದು ಕಾರಣವನ್ನೂ ಪ್ರತ್ಯೇಕವಾಗಿ ವಿಶ್ಲೇಷಿಸಲಾಗಿದೆ. ಹೀಗಾಗಿ ತಾವು ಕಂಡುಕೊಂಡಂತಹ ಎಲ್ಲಾ ಸ್ಥಿತ್ಯಂತರಗಳಿಗೆ ಸೂಕ್ತ ಕಾರಣಗಳನ್ನು ವಿವರ ಸಹಿತ ಕೊಡುವುದರಲ್ಲಿ ಸಂಶೋಧಕಿ ಯಶಸ್ವಿಯಾಗಿದ್ದಾರೆ. ಪ್ರಬಂಧದುದ್ದಕ್ಕೂ ಎಲ್ಲೂ ನಿರಾಸಕ್ತಿ ಹುಟ್ಟದಂತೆ ಕಾಳಜಿ ವಹಿಸಿ ಬರೆದಿದ್ದಾರೆ. ಬದಲಾವಣೆಗಳು ಎಂದಿಗೂ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಅವುಗಳನ್ನು ಚೆನ್ನಾಗಿ ವಿಮರ್ಶಿಸಿ, ಉದಾಹರಣೆಗಳ ಮೂಲಕ ಸಮರ್ಥವಾಗಿ ಪ್ರಬಂಧವನ್ನು ಬರೆಯಲಾಗಿದೆ.
ಪ್ರಬಂಧವು ಉನ್ನತ ಮಟ್ಟದ್ದಾಗಿದ್ದು ಬುಡಕಟ್ಟು ಜನಾಂಗಗಳ ಜೀವನ ಶೈಲಿಯ ಅಭ್ಯಾಸದಲ್ಲಿ ಆಸಕ್ತಿ ಇರುವವರಿಗೆ ಓದಲೇಬೇಕಾದ ಕೃತಿ. ಸ್ಥಿತ್ಯಂತರಗಳು ಎಲ್ಲೆಡೆ ಇರುತ್ತವೆ. ಆದರೆ ಅವುಗಳನ್ನು ಕಂಡು ಹೊರಗೆಳೆಯುವುದು ಸಂಶೋಧನೆ ಮಾಡುವವರ ಜವಾಬ್ದಾರಿ. ಇಲ್ಲಿ ತಮ್ಮ ಜವಾಬ್ದಾರಿಯನ್ನು ಸಂಶೋಧಕಿ ಶ್ರೀಮತಿ ಲೀನಾ ನಾಯ್ಕರವರು ಸಮರ್ಥವಾಗಿ ನಿಭಾಯಿಸಿದ್ದಾರೆ.
-ರಾಜೇಶ ನಾಯ್ಕ, ಬುಡಕಟ್ಟು-ಇತಿಹಾಸ-ಚಾರಣ ಆಸಕ್ತರು, ಉಡುಪಿ.
©2024 Book Brahma Private Limited.