ಡಾ. ಸಣ್ಣರಾಮ ಕಂಡದ್ದನ್ನು ಕೇಳಿದ್ದನ್ನು, ಓದಿದ್ದನ್ನು, ಅರ್ಥ ಮಾಡಿಕೊಂಡಿದ್ದನ್ನು, ಅನುಭವಿಸಿದ್ದನ್ನು, ಅನುಸಂಧಾನ ಮಾಡಿದ್ದನ್ನು, ಪರಾಮರ್ಶಿಸಿದ್ದನ್ನು ಗೊಂದಲಗೊಳ್ಳದೇ, ಅವಸರ ಪಡದೇ, ಆವೇಶ ಪಡದೇ ತಣ್ಣಗೆ ಎಂಬಂತೆ ಸರಳವಾಗಿ ಸಷ್ಟವಾಗಿ ಸುಲಲಿತವಾಗಿ ಬರೆಯುತ್ತಾರೆ. ಲಂಬಾಣಿ ಸಂಸ್ಕೃತಿ' ಎಂಬ ಅವರ ಈ ಅಧ್ಯಯನ ಕೃತಿಯನ್ನು ಓದಿದವರಿಗೆ ಇಂಥ ಅನುಭವವಾಗುತ್ತದೆ. ಇಲ್ಲಿ ಒಂದು ಬುಡಕಟ್ಟಿನ ಮೌಖಿಕ ಇತಿಹಾಸ ನಮ್ಮೊಡನೆ ಮಾತನಾಡುತ್ತಾ ಹೋಗುತ್ತದೆ. ಲಂಬಾಣಿಗಳ ಬಗ್ಗೆ ಲಘುವಾಗಿ ತಿಳಿದವನು ಬಾಯಿ ಚಪ್ಪರಿಸಬಹುದು. ಅವರ ಜೀವನ ಗಂಭೀರತೆಯನ್ನು ತಿಳಿದವನು ಆತಂಕಗೊಳ್ಳುತ್ತಾನೆ. ಸಂಸ್ಕೃತಿ ಎಂಬುದು ಸ್ವತಂತ್ರವಲ್ಲ, ಜೀವನ ಸ್ವತಂತ್ರ ಸಂಸ್ಕೃತಿ ಒಂದು ಮೊತ್ತವಲ್ಲ, ಒಂದು ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಲಂಬಾಣಿಗಳು ಎಷ್ಟೆಲ್ಲಾ ಒದ್ದಾಡಿದ್ದಾರೆ, ಆಕಾಶದಿಂದ ಉದುರಿದ ನಕ್ಷತ್ರಗಳಂತೆ ನಮ್ಮ ಜೊತೆಗೆ ಬದುಕಿದ್ದಾರೆ.
ಮೂಲತಃ ಲಂಬಾಣಿಗಳು ವರ್ಣರಂಜಿತ ಬುಡಕಟ್ಟು ಎಂಬುದು ನಿಜ. ಅವರ ವೃತ್ತಿಚರಿತ್ರೆಯಲ್ಲಿಯೇ ಅಂತಹ ವೈವಿಧ್ಯತೆಗಳಿವೆ. ಚಲಿಸುವ ಸಮಾಜಕ್ಕೆ ಬೇಕಾದ ಸವಾಲುಗಳಿವೆ. ಆದರೆ ಆ ಸವಾಲುಗಳನ್ನು ಸ್ವೀಕರಿಸುವುದು ಎಷ್ಟು ಕಷ್ಟ, ದೊಂಬರಾಟದಿಂದ ಲಂಬಾಣಿಗಳ ಜೀವನ ಆರಂಭವಾಗಿದೆ. ಅಲ್ಲಿಯೇ ಪ್ರದರ್ಶಿಸುವ ಪ್ರತಿಭೆ ಪ್ರತಿಪಾದಿತವಾಗಿವೆ. ಡಾ. ಸಣ್ಣರಾಮ ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಬದುಕು-ಬರಹಗಳೆರಡೂ ಒಂದಾಗಿರುವ ಬರಹ ಅರ್ಥಪೂರ್ಣವೆಂದು ನಂಬಿದವರು. ಹೋರಾಟದ ಮಧ್ಯದಲ್ಲಿಯೂ ದಲಿತ, ಲಂಬಾಣಿ ಬುಡಕಟ್ಟಿನ ಸಂಸ್ಕೃತಿಯನ್ನು ಅಧ್ಯಯನ ಮಾಡಲು ತೊಡಗಿಸಿಕೊಂಡಿರುವುದು ಅವರ ದಲಿತ ಕಾಳಜಿಯ ದ್ಯೋತಕವೇ ಆಗಿದೆ, ಲಂಬಾಣಿ ಸಂಸ್ಕೃತಿಯು ಆ ಬುಡಕಟ್ಟನ್ನು ಕುರಿತು ಒಂದು ಅನನ್ಯ ಕೃತಿಯಾಗಿದೆ. ಲಂಬಾಣಿ ಸಂಸ್ಕೃತಿಯ ಮೂಲ, ತಲಸ್ಪರ್ಶಿಯಾದ ಅಧ್ಯಯನ ಇಲ್ಲಿದೆ. ಆ ಸಂಸ್ಕೃತಿಯ ಆಚರಣೆ, ವಿಧಿ-ವಿಧಾನ, ಸಂಪ್ರದಾಯ, ಸಾಹಿತ್ಯ, ಕಲೆ ಮುಂತಾದ ಎಲ್ಲಾ ಮಗ್ಗಲುಗಳನ್ನೂ ಅಧ್ಯಯನಕ್ಕೆ ಒಳಪಡಿಸಿ ಅದರ ಅನನ್ಯತೆಗಳನ್ನು ಸಣ್ಣರಾಮರವರು ಹೊರಹಾಕಿದ್ದಾರೆ. ಅದರ ನ್ಯೂನತೆಗಳನ್ನು ಎತ್ತಿ ತೋರಿಸಿದ್ದಾರೆ. ಗ್ರಂಥದುದ್ದಕ್ಕೂ ಅವರ ಪ್ರತಿಭೆ, ವೈಜ್ಞಾನಿಕ ಮನೋಧರ್ಮ, ವಿಮರ್ಶಾ ಪ್ರಜ್ಞೆ ಹಾಗೂ ತೌಲನಿಕ ದೃಷ್ಟಿಕೋನಗಳು ಜಾಗೃತವಾಗಿರುವುದನ್ನು ಕಾಣಬಹುದು. ವಿದೇಶಿ ಸಿದ್ದಾಂತಗಳ ಕಣ್ಣರಿಕೆಯಲ್ಲಿ ಜಾನಪದೀಯ ಅಧ್ಯಯನ ಹೆಚ್ಚುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ದೇಶೀಯ ತತ್ವಗಳ ಬೆಳಕಿನಡಿಯಲ್ಲಿ ನಡೆಯುವ ಈ ಬಗೆಯ ಅಧ್ಯಯನಗಳು ಹೆಚ್ಚು ಮೌಲಿಕವಾಗುತ್ತವೆ.
©2024 Book Brahma Private Limited.