‘ಚೆಂಚು ಬುಡಕಟ್ಟು ಸಂಸ್ಕೃತಿ’ ಡಾ. ಮಲ್ಲಿಕಾರ್ಜುನ ಬಿ ಮಾನ್ಪಡೆ ಅವರು ರಚಿಸಿರುವ ಸಂಶೋಧನಾತ್ಮಕ ಕೃತಿ. ಚೆಂಚು ಬುಡಕಟ್ಟಿನವರು ಅನೇಕ ಶತಮಾನಗಳಿಂದಲೂ ಬೆಟ್ಟ-ಗುಡ್ಡಗಳ ಪ್ರದೇಶಗಳಲ್ಲಿ ವಾಸವಾಗಿರುತ್ತ, ನಗರದ ಜೀವನಕ್ಕೆ ಹಾಗೂ ಗ್ರಾಮೀಣ ಸಂಸ್ಕೃತಿಗಳ ಪ್ರಭಾವಕ್ಕೆ ಸಿಲುಕಿಕೊಂಡರೂ ತಮ್ಮದೇ ಆದ ಮೂಲಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ. . ಚೆಂಚು, ಚೆಂಚರು ದಕ್ಷಿಣಭಾರತದ ಮೂಲನಿವಾಸಿಗಳು. ಇವರ ಭಾಷೆ ತೆಲುಗು. ಕರ್ನೂಲು, ನೆಲ್ಲೂರು, ಮಹಬೂಬ್‍ನಗರಗಳಿಂದ ವಲಸೆ ಹೊರಟು ಶ್ರೀಹರಿಕೋಟ, ಚಿತ್ತೂರು, ಅನಂತಪುರ ಜಿಲ್ಲೆಗಳಿಗೆ, ತಮಿಳುನಾಡಿನ ಉತ್ತರ ಆರ್ಕಾಟು ಜಿಲ್ಲೆಗಳಿಗೆ ಚದುರಿಹೋಗಿದ್ದಾರೆ.
ಅನಂತಪುರ, ಚಿತ್ತೂರು ಮುಂತಾದ ಬಯಲುಸೀಮೆಗೆ ಸೇರಿದ ಈ ಜನ ಆ ಮೂಲಕ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಪ್ರವೇಶ ಮಾಡಿ ಕಾಡುಮೇಡು ಇರುವ ಕಡೆ ವಸತಿ ಸ್ಥಾನಗಳನ್ನು ನಿರ್ಮಿಸಿಕೊಂಡಿದ್ದಾರೆ. ಕರ್ನಾಟಕದ ಕೋಲಾರ, ಚಿಕ್ಕಮಗಳೂರು, ಬಿಜಾಪುರ, ಧಾರವಾಡ, ರಾಯಚೂರು, ಬಳ್ಳಾರಿ, ಕಲಬುರಗಿ, ಯದಗಿರಿ ಜಿಲ್ಲೆಗಳಲ್ಲಿ ಹರಡಿದ್ದಾರೆ. ಚೆಂಚು ಸಮುದಾಯದವರು ವಿಶಿಷ್ಟವಾಗಿ ಚೆಂಚುಗೆಡ್ಡೆ ತೆಗೆದು ಹಳ್ಳಿಗರಿಗೆ ಮಾರಾಟ ಮಾಡುವುದರಿಂದ ಈ ಹೆಸರು ಪ್ರಾಪ್ತವಾಗಿದೆ. ಚೆಂಚು ಬುಡಕಟ್ಟು ಸಂಸ್ಕೃತಿ ಕೃತಿಯ ಲೇಖಕರು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕಿರು ಸಂಶೋಧನೆ ಯೋಜನೆಯ ಭಾಗವಾಗಿ ಕ್ಷೇತ್ರಕಾರ್ಯದ ಮೂಲಕ ಮಾಹಿತಿ ಸಂಗ್ರಹಿಸಿ ಅವರ ಸಂಸ್ಕೃತಿ, ಸಮಾಜೋ-ಆರ್ಥಿಕ ಸ್ಥಿತಿಗತಿಗಳ ಮೇಲೆ ಬೆಳಕು ಚಲ್ಲಿದ್ದು, ಉತ್ತಮ ಆಕರ ಗ್ರಂಥವಾಗಿದೆ.
©2024 Book Brahma Private Limited.