'ಅಜ್ಜಯ್ಯನ ಕಾಡಿನ ಹೊಸ ಹೆಜ್ಜೆ' ಕೃತಿಯು ನಾಗರಹೊಳೆ ಕಾಡಿನ ಆದಿವಾಸಿ ಸಮುದಾಯಗಳ ಚಳವಳಿಯ ಒಂದು ಯಶೋಗಾಥೆ. 'ನಂಗಕಾಡು, ನಂಗಹಾಡಿ, ನಂಗಾವೇ ಆಳಾಕು' ಎಂಬ ಜೇನುಕುಡಿಗಳ ದನಿಯನ್ನು ಒಟ್ಟು ಮಾಡಿದ ಡೀಡ್ ಸಂಸ್ಥೆಯ ಡಾ. ಎಸ್. ಶ್ರೀಕಾಂತ್ ಅವರ ಸಾರ್ಥಕ ಹೆಜ್ಜೆಗಳು ಕೂಡ ಇದಾಗಿದೆ. ದಲಿತ ಚಳವಳಿಯ ಮುಂಚೂಣಿಯಲ್ಲಿ ದುಡಿದ ಪ್ರೊ. ಎಚ್. ಗೋವಿಂದಯ್ಯ ಅವರು ಪುಸ್ತಕದ ಬೆನ್ನುಡಿಯಲ್ಲಿ ಹೇಳಿರುವಂತೆ 'ಅಜ್ಜಯ್ಯನ ಕಾಡು' ಹೊಸ ಹೆಜ್ಜೆಯನ್ನಿಡಲು ಸಿದ್ಧವಾಗಿದೆ. ನಾಗರಹೊಳೆ, ಕಾಕನಕೋಟೆ ಅರಣ್ಯ ಪ್ರದೇಶ ಗಳ ಆದಿಮ ಬುಡಕಟ್ಟು ಸಮುದಾಯಗಳು ಇಡುತ್ತಿರುವ ಸ್ವಾಭಿಮಾನಿ ಹೆಜ್ಜೆಯೂ ಇದು. ಇಂತಹ ಅಜ್ಜಯ್ಯನ ಕಾಡು ಹೊಸ ಹೆಜ್ಜೆಯನ್ನಿಡಲು ಕಾರಣರಾದವರು ಶ್ರೀಕಾಂತ್.ಅವರ ಬದುಕು ಹಾಗೂ ಹಾಡಿಯ ಸಮುದಾಯಗಳ ಅನನ್ಯ ಬದುಕಿನ 'ಜುಗಲ್ ಬಂದಿ'ಯಂತೆ ಇಲ್ಲಿ ಕಥನ ಮೂಡಿಬಂದಿದೆ.
ಸಾಹಿತಿ ಪೂರೀಗಾಲಿ ಮರಡೇಶ ಮೂರ್ತಿ ಅವರ ಸಾತ್ವಿಕ, ಸೃಜನಾತ್ಮಕ ಶೈಲಿಯ ಬರಹದಿಂದ ಮೂಡಿಬಂದಿರುವ 'ಅಜ್ಜಯ್ಯನ ಕಾಡಿನ ಹೊಸಹೆಜ್ಜೆ ' ಪ್ರಜ್ಞಾವಂತರೆಲ್ಲರ ಅನುಕರಣೀಯ ಹೆಜ್ಜೆಯಾಗಿದೆ ಎನ್ನುವ ಅವರ ಮಾತುಗಳು ಕೃತಿಯ ಆಂತರ್ಯವನ್ನು ತೆರೆದಿಟ್ಟಿದೆ. ಇದು ಕೇವಲ ಕಾಡಿನ ಕಥೆಯಲ್ಲ. ಅಂತಿಂತಹ ಸಂಗತಿಯಲ್ಲ. ಸಾವಿರಾರು ವರ್ಷಗಳಿಂದ ಬಾಳಿ ಬದುಕಿದ ನೆಲವೇ ಇನ್ನಿಲ್ಲವಾದ ಹಾಡಿ ಮಕ್ಕಳ ಸಂಗತಿ. ಆಧುನಿಕತೆಯ ಆಡಂಬರದ ರೇಚಿಲ್ಲದೆ, ಸೀದಾ ಸಾದಾ ಬದುಕಿನ ಪ್ರೀತಿಯ ಲ್ಲಿ, ಸಹಜೀವಿಗಳನ್ನು ಗೌರವದಿಂದ ಕಾಣುತ್ತಾ ಬದುಕಿದ ಒಂದು ದೇವಗಣವೇ ಆದಿವಾಸಿಗಳು. 50 ಸಾವಿರ ವರ್ಷಗಳ ಮಾನವಶಾಸ್ತ್ರದ ಚಾರಿತ್ರಿಕ ಹಿನ್ನೆಲೆಯ ಮೇಲೆ ಇದೇ ನೆಲದಲ್ಲಿ ನಡೆಯುತ್ತಿರುವ ಸಂಪನ್ನ ಜನರು, ಜೇನುಕುರುಬ, ಎರವ, ಇರುಳಿಗ, ಕೊರವ, ಸೋಲಿಗ ಹಸಲ, ಮಲೆಕುಡಿಯ ಮುಂತಾದ ಹೆಸರಿನಲ್ಲಿ ಭೂಮಿ ಸುಖದ 'ಕಣ್ಕಾಪಿ'ನಲ್ಲಿ ಬದುಕುತ್ತಿರುವವರು. ಇಂತಹ ಆದಿವಾಸಿಗಳ ಕಥನದೊಟ್ಟಿಗೆ ಅವರ ಹೋರಾಟದ ಬದುಕಿನಲ್ಲಿ 40 ವರ್ಷಗಳ ಸಾರ್ಥಕ ಹೆಜ್ಜೆ ಇಟ್ಟಿರುವ ಶ್ರೀಕಾಂತ್ ರ ಅನನ್ಯ ಬದುಕನ್ನು ಇಲ್ಲಿ ಜೋಡಿ ಮಾಡಿ ಇಡಲಾಗಿದೆ.
ಈ ಕೃತಿ ಕಾಡಿನ ಜಮ್ಮಾ, ಜೇನುಕುಡಿಗಳ ಸೌದಾಗಾರ, ಹೋರಾಟದ ಶೃಂಗಗಳ ಕಥನ, ಸಾಮಾಜಿಕ ಪರಿವರ್ತನೆ, ಹಾಡಿ ಹಕ್ಕಿಗಳ ಕಲರವ, ಅವರ ಬಿಚ್ಚುಂಡ ಬದುಕು ಎಲ್ಲವನ್ನು 16 ಅಧ್ಯಾಯಗಳಲ್ಲಿ ತೆರೆದಿಟ್ಟಿದೆ. ಚಿತ್ರದುರ್ಗ ಬೃಹನ್ಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಮುನ್ನುಡಿ ಬರೆದು ನಾಡು ಮರೆತವರ ಪಾಡನ್ನು ಕಣ್ಣಿಗೆ ಕಟ್ಟುವಂತೆ ಸಾಹಿತಿಗಳು 'ಅಜ್ಜಯ್ಯನ ಕಾಡಿನ ಹೊಸಹೆಜ್ಜೆ'ಯನ್ನು ಚಿತ್ರಿಸಿದ್ದಾರೆ ಎನ್ನುವ ಮಾತುಗಳಲ್ಲಿ ಕೃತಿಯ ಗಮ್ಯತೆ ಅನಾವರಣಗೊಂಡಿದೆ.
©2024 Book Brahma Private Limited.