ಅನಂತಮೂರ್ತಿ ಅವರ ವಿವಾದಾತ್ಮಕ ಮತ್ತು ಸೂಕ್ಷ್ಮ ಒಳನೋಟಗಳಿರುವ ಪುಸ್ತಕ. ಈ ಗ್ರಂಥದಲ್ಲಿ ಒಟ್ಟು 17 ಲೇಖನಗಳಿವೆ. ಈ ಸಂಕಲನದ ಬರಹಗಳ ಕುರಿತು ಹಿರಿಯ ಚಿಂತಕ ಜಿ. ರಾಜಶೇಖರ ಅವರು ’ಕೆ.ವಿ. ಸುಬ್ಬಣ್ಣ, ರಾಜೀವ ತಾರಾನಾಥ, ಆರ್.ಕೆ. ನಾರಾಯಣ್, ಗೋಪಾಲಕೃಷ್ಣ ಅಡಿಗ, ಮಾಸ್ತಿ, ಜಿ.ಎಸ್.ಎಸ್, ಗಿರೀಶ್ ಕಾರ್ನಾಡ್, ಆರ್.ಕೆ. ಲಕ್ಷ್ಮಣ್, ಫೀಲ್ಡ್ ಮಾರ್ಷಲ್ ಕಾರಿಯಪ್ಪ, ಚಿನುವಾ ಅಚಿಬೆ, ಶಿವರಾಮ ಕಾರಂತ, ಎಸ್.ಎಂ. ಕೃಷ್ಣ, ಜೆ.ಹೆಚ್. ಪಟೇಲ್- ಈ ಮಹನೀಯರ ಜೊತೆ ಅನಂತಮೂರ್ತಿ ನಡೆಸಿರುವ ಸಂದರ್ಶನಗಳಲ್ಲಿ ನಮ್ಮ ಕಾಲದ ಮಹತ್ವದ ವಿದ್ಯಮಾನಗಳು ಕಣ್ಣಮುಂದೆ ಹಾದುಹೋಗುತ್ತವೆ.
ಈ ಪುಸ್ತಕದಲ್ಲಿ ಒಡಮೂಡುವ ಸಮಕಾಲೀನ ನಾಗರಿಕತೆಯ ಚಿತ್ರಕ್ಕೆ ನಾವು ಕೇವಲ ಪ್ರೇಕ್ಷಕರಲ್ಲ- ಅದು ನಮ್ಮನ್ನೂ ಒಳಗೊಂಡಿರುವಂಥದ್ದು ಎಂಬ ಸಹಭಾಗಿತ್ವದ ಅರಿವನ್ನು ಓದುಗರಲ್ಲಿ ಉದ್ದೀಪಿಸುವುದು ಈ ಸಂದರ್ಶನಗಳ ಹೆಚ್ಚುಗಾರಿಕೆಯಾಗಿದೆ. ಸಹಭಾಗಿತ್ವ ಸಹಾನುಭೂತಿಯೂ ಆಗಬೇಕು ಎಂಬ ಸಂದರ್ಶಕನ ಆತಂಕ ಇಲ್ಲಿ ನಿಚ್ಚಳವಾಗಿ ವ್ಯಕ್ತವಾಗಿದೆ. ಪರಂಪರೆಯು ಭೂತ ಸಾಹಿತ್ಯಕ್ಕೆ ಇರುವ ಸಂಬಂಧದ ಬಿಕ್ಕಟ್ಟುಗಳು, ಗಣಿಯಲ್ಲಿ ಸೌಂದರ್ಯಾಭಿವ್ಯಕ್ತಿಯ ಸಮಸ್ಯೆ, ಭಾಷೆ ಮತ್ತು ಸಂಸ್ಕೃತಿ, ಸ್ಥಳೀಯ ಸಮುದಾಯಗಳು ಮತ್ತು ವಸಾಹತುಶಾಹಿ ಕರ್ನಾಟಕದ ಈ ಹೊತ್ತಿನ ಕಷ್ಟಗಳುಇವೇ ಮುಂತಾದ ವಿಷಯಗಳ ಕುರಿತು ಅಭ್ಯಾಸ ನಡೆಸುವವರಿಗೆ ಈ ಪುಸ್ತಕ ಒಂದು ಅಮೂಲ್ಯ ಆಕರವಾಗಬಲ್ಲದು’ ಎಂದು ಅಭಿಪ್ರಾಯಪಟ್ಟಿದ್ದಾರೆ.
...ಇದು ಒಟ್ಟಿನಲ್ಲಿ ನನಗೆ ಪ್ರಿಯವಾದ ಸಂಕಲನವೆಂದು ನಾನು
ಸಂಕೋಚವಿಲ್ಲದೆ ಹೇಳಬಯಸುತ್ತೇನೆ. ನನ್ನ ಸಮಕಾಲೀನ
ಲೇಖಕರಿಗೆ ಇಲ್ಲಿ ನನ್ನ ಸ್ಪಂದನವಿದೆ. ಕನ್ನಡ ಭಾಷೆ ಮತ್ತು
ಸಂಸ್ಕೃತಿಯ ಬಗ್ಗೆ ನನ್ನ ಚಿಂತನೆಯಿದೆ. ಈ ಎರಡನ್ನೂ ನಾನು
ಒಟ್ಟಿನಲ್ಲಿ ನಮ್ಮ ರಾಷ್ಟ್ರೀಯ ಪರಿಕಲ್ಪನೆ ಹೇಗಿರಬೇಕೆಂಬ
ಚೌಕಟ್ಟಿನಲ್ಲಿಟ್ಟು ನೋಡಿದ್ದೇನೆ. ನಮ್ಮ ಧರ್ಮ, ನಮ್ಮ
ರಾಜಕೀಯ, ನಮ್ಮ ಸಾಹಿತ್ಯ- ಈ ಎಲ್ಲವೂ ಒಂದಕ್ಕೊಂದು
ಸಂಬಂಧವಿರುವ ವಿಷಯಗಳೆಂದು ನಾನು ತಿಳಿದಿರುವುದರಿಂದ
ಇಲ್ಲಿನ ಎಲ್ಲ ಲೇಖನಗಳಲ್ಲೂ ಈ ಸಂಬಂಧಗಳ ಬೇರೆ ಬೇರೆ
ಮಗ್ಗುಲುಗಳು ಪ್ರತ್ಯಕ್ಷವಾಗುತ್ತ ಹೋಗುತ್ತವೆ. ನಾನು ನನ್ನ
ಕಾಲವನ್ನು ಪರಿಭಾವಿಸುವ ಕ್ರಮವನ್ನೇ ಈ ಬರವಣಿಗೆಗಳಲ್ಲಿ
ಹಿಡಿದಿಡಲು ಪ್ರಯತ್ನಿಸಿದ್ದೇನೆ.
©2024 Book Brahma Private Limited.