ಲೇಖಕ ನಿಡಸಾಲೆ ಪುಟ್ಟಸ್ವಾಮಯ್ಯ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ನಿಡಸಾಲೆ (ಜನನ: 05-02-1951) ಗ್ರಾಮದವರು. ತಂದೆ- ಮುಳವಾಗಲಯ್ಯ, ತಾಯಿ- ನಿಂಗಮ್ಮ. ನಿಡಸಾಲೆಯಲ್ಲಿ ಪ್ರಾಥಮಿಕ, ಹುಲಿಯೂರುದುರ್ಗದಲ್ಲಿ ಪ್ರೌಢಶಾಲೆಯವರೆಗೆ ವ್ಯಾಸಂಗ ಪೂರ್ಣಗೊಳಿಸಿದರು. 1968ರಲ್ಲಿ ಬೆಂಗಳೂರಿನ ಐ.ಟಿ.ಐ.ನಲ್ಲಿ ತರಬೇತಿ ಪಡೆದು, 1969ರಿಂದ ಕೃಷಿ ಇಲಾಖೆಯಲ್ಲಿ ಉದ್ಯೋಗ ಆರಂಭಿಸಿದರು. ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಪಿ.ಯು.ಸಿ ತೇರ್ಗಡೆ ಯಾಗಿ ಬಿ.ಕಾಂ.ಗೆ ಸೇರ್ಪಡೆಯಾದರು. ಹಿರಿಯ ಸಾಹಿತಿ ಬಿ.ಜಿ. ಸತ್ಯಮೂರ್ತಿಯವರ ಒಡನಾಟದಲ್ಲಿ 1971ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಅವರು ಸಣ್ಣ ಕಥೆ, ನಾಟಕ, ಕಾದಂಬರಿ ಸೇರಿದಂತೆ ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ.
ಕೃತಿಗಳು: ಗೊಲ್ಲಳ್ಳಿ ತೋಟ’, ‘ಸಾಧನೆಯ ಹಾದಿಯಲ್ಲಿ’, ‘ಪರಂಪರೆ’, ‘ಬೆಳಕಿನೆಡೆಗೆ’, ‘ರಾಜಾವಾರ್ಡ್’ ‘ಅಗ್ನಿದಿವ್ಯ’ ಸೇರಿದಂತೆ 6 ಕಾದಂಬರಿಗಳು. ‘ಅಪೂರ್ಣ ಚಿತ್ರ’, ‘ಬಿಸಿಲುಗುದುರೆ ಮತ್ತಿತರ ಕಥೆಗಳು’ ಎಂಬ 2 ಕಥಾಸಂಕಲನ. ‘ನಿಯತ್ತಿಲ್ಲದವರು’, ‘ಬೆನ್ನೇರಿದ ಭೂತ’, ‘ಕರಿಮುಗಿಲು ಸರಿದಾಗ’, ‘ಜಾಗೃತಿ’, ‘ಬೆಳೆಯೋಣ ಬಾರ’, ‘ಕೃಷಿತಜ್ಞ-ಸುಂದ್ರಿಲಗ್ನ’, ‘ಸವಲತ್ತು ತಿಳಿಯೋಣು ಬಾರ’ ಎಂಬ 7 ನಾಟಕಗಳು. ‘ಕಂಚಿನ ತೋಟ’ ಎಂಬ ಜಾನಪದ ಕತೆಗಳ ಸಂಕಲನ. ‘ಸಂಕ್ರಾಂತಿ’ ಎಂಬ ಜೀವನ ಕಥನ, ‘ಹಳ್ಳಿ ಹೈದನ ವಿದೇಶ ಪ್ರವಾಸ’, ‘ಸುಗ್ಗಿಯ ಸೊಬಗು’ ಎಂಬ ಅಭಿನಂದನಾ ಗ್ರಂಥ. ‘ಗುಪ್ತಗಾಮಿನಿ’ ಕವನ ಸಂಕಲನ ಸೇರಿದಂತೆ 21 ಕೃತಿಗಳನ್ನು ಪ್ರಕಟಿಸಿದ್ದಾರೆ. ಕೃಷಿ ಸಂಬಂಧಿತ 40 ಸಾಕ್ಷ್ಯಚಿತ್ರಗಳ ನಿರ್ದೇಶನ, 25 ನಾಟಕಗಳು, 11 ದೂರದರ್ಶನ ಧಾರಾವಾಹಿಗಳು, 5 ಚಲನಚಿತ್ರಗಳಲ್ಲಿ ಅಭಿನಯಿಸುವ ಜೊತೆಗೆ ಚಿಗುರು ಕ್ರಿಯೇಷನ್ಸ್ ಸಂಸ್ಥೆಯಡಿಯಲ್ಲಿ 2012ರಲ್ಲಿ ಶ್ರೀ ಶ್ರೀ ಶಿವಕುಮಾರಸ್ವಾಮೀಜಿಯವರ ಆಶೀರ್ವಾದದೊಡನೆ ‘ಸಿದ್ಧಗಂಗಾ’, 2014ರಲ್ಲಿ ತಮ್ಮದೇ ಆದ ‘ಸಾಧನೆಯ ಹಾದಿಯಲ್ಲಿ’ ಕಾದಂಬರಿ ಆಧಾರಿತ ‘ವ್ಹಾವ್ ಮುರುಗೇಶ್’, 2017ರಲ್ಲಿ ಡಾ. ಅಮರೇಶ ನುಗಡೋಣಿಯವರ ಕಥೆ ಆಧಾರಿತ ‘ನೀರು ತಂದವರು’, 2018ರಲ್ಲಿ ನಿಡಸಾಲೆಯವರ ಸಣ್ಣಕಥೆ ಆಧಾರಿತ ‘ಅನುತ್ತರ’ ಹಾಗೂ 2021ರಲ್ಲಿ ‘ಅಗ್ನಿವರ್ಷ’ 5 ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.
ಪ್ರಶಸ್ತಿ-ಗೌರವಗಳು: ಸಾಹಿತ್ಯ ಮತ್ತು ಸೃಜನಶೀಲ ಕ್ಷೇತ್ರದಲ್ಲಿನ ಸೇವೆಗಾಗಿ 2011ನೇ ಸಾಲಿನಲ್ಲಿ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಆಶ್ರಯದಲ್ಲಿ ‘ಕೆಂಪೇಗೌಡ ಪ್ರಶಸ್ತಿ’ ಪುರಸ್ಕಾರ, ವಿವಿಧ ಸಂಘಟನೆಗಳ ಆಶ್ರಯದಲ್ಲಿ ‘ಸೇವಾರತ್ನ ಪ್ರಶಸ್ತಿ’, ಹಾಗೂ ‘ವಿಶ್ವೇಶ್ವರಯ್ಯ ಪ್ರಶಸ್ತಿ’ಗಳು ಲಭಿಸಿವೆ. ಉದಯ ಟಿ.ವಿ.ಯ ಪರಿಚಯ ಹಾಗೂ ಬೆಂಗಳೂರು ದೂರದರ್ಶನದ ಬೆಳಗು ಕಾರ್ಯಕ್ರಮಗಳಲ್ಲಿ ಬದುಕು-ಬರಹ ಹಾಗೂ ಸಂಘಟನೆಗಳ ಬಗ್ಗೆ ಸಂವಾದಗಳಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕ ರಾಜ್ಯ ಕೃಷಿ ಇಲಾಖೆಯಲ್ಲಿ 42 ವರ್ಷಗಳ ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. ಸದ್ಯ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.