ಮೂಲತಃ ಬೆಳಗಾವಿಯವರಾದ ಡಾ. ಲತಾ ಗುತ್ತಿ ಅವರು ತಮ್ಮ ಪ್ರವಾಸ ಕಥನ ಹಾಗೂ ಕವಿತೆಗಳ ಮೂಲಕ ಚಿರಪರಿಚಿತರಿದ್ದಾರೆ. ಲತಾ ಅವರು ಜನಿಸಿದ್ದು 1953ರ ಆಗಸ್ಟ್ 12ರಂದು.
ಬೆಂಗಳೂರು ಕಂಪ್ಯೂಟರ್ ಟೆಕ್ನಾಲಜಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ ನಾಗನಗೌಡ, ತಾಯಿ -ಶಾಂತಾದೇವಿ ಪಾಟೀಲ.
ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಿಎಚ್.ಡಿ. ಪದವಿ ಪಡೆದಿರುವ ಅವರು ಮೈಸೂರು ವಿಶ್ವವಿದ್ಯಾಲಯಿಂದ ಇಂಗ್ಲಿಷಿನಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.
ಯುರೋನಾಡಿನಲ್ಲಿ (1993), ನಾ ಕಂಡಂತೆ ಅರೇಬಿಯಾ (1995), ಅಂಡಮಾನಿನ ಎಳೆಯನು ಹಿಡಿದು (2013), ಚಿರಾಪುಂಜಿಯವರೆಗೆ (2017) ಅವರ ಪ್ರವಾಸ ಕಥನಗಳಾದರೆ ಹೆಜ್ಜೆ (2004), ಕರಿನೀರು (2015) ಕಾದಂಬರಿಗಳು.
“ಪ್ರವಾಸ ಸಾಹಿತ್ಯ ವಿಶ್ವ ಸಂಸ್ಕೃತಿಗಳು (2006) ಮಹಾ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ. ’ಕಡಲಾಚೆಯ ಕಥೆಗಳು’ಕಥಾಸಂಕಲನ ಹಾಗೂ ಸಮಕಾಲೀನ ಬಂಗಾಲಿ ಕವಿಯತ್ರಿಯರ ಕವಿತೆಗಳು ಅನುವಾದ ’ಕವಿತೆ ಉದಯಿಸಿದಾಗ’ ಪ್ರಕಟಿಸಿದ್ದಾರೆ. ವರ್ತಮಾನ, ಗಾಂಜಾಡಾಲಿ, ಬೆಳ್ಳಿ ಹೂವು, ಸೂಜಿಗಲ್ಲು, ಇರುವಿಕೆ, ಆಕಾಶ ಗೀತೆಗಳು, ಭೂಮಿ ಬಾನಿನ ನಡುವೆ, ಕಿಚ್ಚು ಹಾಯುವ ಕಾಲ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಸೌದಿ ಅರೇಬಿಯಾ, ಲಂಡನ್, ಪ್ರಾನ್ಸ್, ಇಟಲಿ, ಬೆಲ್ಜಿಯಂ, ಹಾಲೆಂಡ್ ಮುಂತಾದ ದೇಶಗಳಲ್ಲಿ ಪ್ರವಾಸ ಮಾಡಿರುವ ಅವರು ಒಟ್ಟು 15 ವರ್ಷಗಳಷ್ಟು ವಿದೇಶಗಳಲ್ಲಿ ವಾಸವಾಗಿದ್ದರು. ಸದ್ಯ ಅವರು ಬೆಂಗಳೂರಿನ ನಿವಾಸಿಯಾಗಿದ್ದಾರೆ.