ಆನಂದ ವಿ. ಪಾಟೀಲ ಅವರು ಜನವರಿ 1-1955, ಧಾರವಾಡ ಜಿಲ್ಲೆಯ ನಾಗಲಿಂಗನ ನವಲಗುಂದದಲ್ಲಿ ಜನಿಸಿದರು. ವಿದ್ಯಾಭ್ಯಾಸ- ಘಟಪ್ರಭಾ, ನವಲಗುಂದ, ಗೋಕಾಕ, ಹಿಡಕಲ್ ಮತ್ತು ಧಾರವಾಡಗಳಲ್ಲಿ ಮುಗಿಸಿದ ಅವರು, ಜಾನಪದ ಕಲೆ ಮತ್ತು ವಿಧಿ ಕ್ರಿಯೆಗಳು' ಕುರಿತ ಪ್ರೌಢ ಪ್ರಬಂಧಕ್ಕೆ ಧಾರವಾಡ ವಿ.ವಿ.ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸದ್ಯ ಆಕಾಶವಾಣಿಯಲ್ಲಿ ಉಪ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. “ಅಜ್ಜಿ ಮನೆ ಬಹಳ ದೂರ', 'ಹೂ', 'ಹಕ್ಕಿ ಪುಟಾಣಿ', 'ಹೂ ಅಂದ್ರ ಹೂ', “ಅಜ್ಜಿ ಬಿಡಿಕಾಳ್ ಬಿಡಿಕಾಳು', 'ಪಪ್ಪಿ ಕೊಟ್ಟು ಬಾಪೂ', 'ಹೃದ್ಧಿ', 'ಪುಟ್ಟ ಪುಟ್ಟ ಪಾಪು ಪುಟಾಣಿ ಪಾಪು', 'ಪುಟ್ಟನ ಹಾವು ಹುತ್ತ ಬಿಟ್ಟು ಹೊರಗೆ ಬಂತು' (ಮಕ್ಕಳ ಕವನ ಸಂಕಲನಗಳು), 'ಪುಟ್ಟಕ್ಕನ ಪತ್ರಗಳು', 'ಬೆಳದಿಂಗಳು', 'ಡಂ ಡಂ ಊರಿಗೆ ಡಿಂ ಡಿಂ ಗಾಡಿ', 'ಖಾಲಿ ಕಡ್ಡಿಪೆಟ್ಟಿಗೆ ಮತ್ತು ಬೆಳಕಿಂಡಿ', 'ನನ್ನ ಪ್ರಾಣಿ ಕತೆಗಳು', 'ಮತ್ತೆ ಬಂತು ಚಂಪೂ', 'ಮೂರು ಮೇಲೊಂದು', 'ಹತ್ತು ಹತ್ತು ಇಪ್ಪತ್ತು' (ಗದ್ಯ ಕೃತಿಗಳು) 'ಒಂದು ಎರಡು ಮೂರು ನಾಲ್ಕೂ. ಮಕ್ಕಳಿಗಾಗಿ ನಾಟಕ ಅಷ್ಟೂ' (ಮಕ್ಕಳ ನಾಟಕ), 'ಮಕ್ಕಳ ಸಾಹಿತ್ಯ 2006' (ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ) 'ಮಕ್ಕಳ ಸಾಹಿತ್ಯ ಶತಮಾನ', 'ಹೀಗೇ ಖುಷಿ ಕೊಟ್ಟವು', 'ಹೀಗೇ ಒಂದಿಷ್ಟು ಆಚೀಚೆ', 'ಅಲರು', 'ಮುಗುಳು' (ಮಕ್ಕಳ ಸಾಹಿತ್ಯ ಕುರಿತು).
ಸಂಧ್ಯಾ ಸಾಹಿತ್ಯ ವೇದಿಕೆಯ ಮೂಲಕ ನಾಡಿನಾದ್ಯಂತ ಮಕ್ಕಳ ಸಾಹಿತ್ಯ ಕುರಿತ ಚಟುವಟಿಕೆ. 'ಸಂಧ್ಯಾ', 'ಮಕ್ಕಳ ಸಾಹಿತ್ಯ ಒಂದಷ್ಟು ಮಾತುಕತೆ' ಸಂಚಿಕೆಗಳ ಸಂಪಾದನೆ. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಹರ್ಡೆಕರ್ ಮಂಜಪ್ಪ ಪ್ರಶಸ್ತಿ, ರಾಣೆಬೆನ್ನೂರಿನ ಲದ್ವಾ ಪ್ರತಿಷ್ಠಾನ ಹಾಗು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ-ಪ್ರಶಸ್ತಿಗಳು ಸಂದಿವೆ.