ಶ್ರೀರಂಗಪಟ್ಟಣದಲ್ಲಿ ಎಸ್.ಜಿ. ನರಸಿಂಹಾಚಾರ್ಯರು 11-09-1862 ರಂದು ಜನಿಸಿದರು. ತಂದೆ ಪೂಜಾಳಂ ಮನೆತನದ ಅಳಸಿಂಗಾಚಾರ್ಯರು. ತಾಯಿ ಸೀತಮ್ಮ.ಶ್ರೀರಂಗಪಟ್ಟಣದಲ್ಲಿ ಪ್ರಾಥಮಿಕ ಶಿಕ್ಷಣದ ನಂತರ ಮೈಸೂರಿನಲ್ಲಿ ಬಿ.ಎ. ಪದವಿ ಹಾಗೂ 1892ರಲ್ಲಿ ಎಂ.ಎ. ಪದವೀಧರರು. ವಿದ್ಯಾ ಇಲಾಖೆಯಲ್ಲಿ ಸೇರಿ ಶ್ರೀರಂಗಪಟ್ಠಣದ ಶಾಲೆಯಲ್ಲೇ ಶಿಕ್ಷಕರು. ನಂತರ, ಮೈಸೂರು ಪ್ರಾಚ್ಯ ಕೋಶಾಗಾರದಲ್ಲಿ ಪಂಡಿತರಾಗಿ ಸೇರಿದರು.
ರಾಮಾನುಜ ಅಯ್ಯಂಗಾರ್ಯರೊಡನೆ ‘ಕರ್ನಾಟಕ ಕಾವ್ಯಮಂಜರಿ’ ಮಾಸಪತ್ರಿಕೆ ಆರಂಭಿಸಿದರು. ನಂತರ, 1899ರಲ್ಲಿ ‘ಕರ್ನಾಟಕ ಕಾವ್ಯ ಕಲಾನಿ’ ಪತ್ರಿಕೆ ಪ್ರಾರಂಭಿಸಿದರು. ಕನ್ನಡ ಕವಿಗಳ ಚಂಪೂ, ಗದ್ಯ, ಪದ್ಯ, ನಾಟಕ, ಕೀರ್ತನೆ, ಶತಕ, ನಿಘಂಟುಗಳನ್ನು ಪರಿಷ್ಕರಿಸಿ ಪ್ರಕಟಿಸಿದರು. ಕರ್ನಾಟಕ ಕಾವ್ಯಮಂಜರಿಯಲ್ಲಿ ಗದಾಯುದ್ಧ, ಮಲ್ಲಿನಾಥ ಪುರಾಣ, ಲೀಲಾವತಿ ಪ್ರಬಂಧ, ಕರ್ನಾಟಕ ಪಂಚತಂತ್ರ, ಮಿತ್ರವಿಂದಾ ಗೋವಿಂದ, ಜಯನೃಪ ಕಾವ್ಯ ಗ್ರಂಥಗಳನ್ನು ಪ್ರಕಟಿಸಿದರು. ಪ್ರಾಚ್ಯಕೋಶಾಗಾರದ ಮೂಲಕ ಆದಿಪುರಾಣ, ಜಗನ್ನಾಥ ವಿಜಯ ಕೃತಿಗಳನ್ನು ಪರಿಷ್ಕರಿಸಿದರು.
ಹಿಂದೂದೇಶದ ನಾಗರಿಕತೆ, ಬಾಲ ವಿವರಣೆಯ ಕೃತಿಗಳು, ಮಕ್ಕಳ ಪದ್ಯಗಳಲ್ಲಿ ಮಿನುಗು ಮಿನುಗುತಿಹ ಕಿರುತಾರಣಿಯೆ, ಬಾರೋ ನಾವಾಡುವ ಬಾರೋ, ಇಟ್ಟರೆ ಸಗಣಿಯಾದೆ ಜನಪ್ರಿಯ ಪದ್ಯಗಳನ್ನು ಬರೆದರು. ಸ್ವತಂತ್ರ ರಚನೆ ಮತ್ತು ರಘುವಂಶದ ಅನುವಾದಗಳಾದ-ದಿಲೀಪ ಚರಿತೆ, ಅಜನೃಪ ಚರಿತೆ, ಶಾಲಾಪಠ್ಯಗಳಾದ ಷಟ್ಪದಿ ಕಾವ್ಯಗಳು, ಪ್ರೋಷಿತ ಪ್ರಿಯ ಸಮಾಗಮಂ, ಗೋಡ್ಲ್ಸ್ಮಿತ್ನ ‘ದಿ ಹರ್ಮಿಟ್, 9 ಜನ ವೀರ ಪುರುಷರ ವೃತ್ತಾಂತದ ಭಾರತ ವೀರ ಚರಿತೆ, ಅಲ್ಲಾವುದೀನ್ ಮತ್ತು ಅದ್ಭುತ ದೀಪ, ಉತ್ತರ ರಾಮಚರಿತಂ, ಸಂಸ್ಕೃತ ನಾಟಕಾನುವಾದ, ಈಸೋಪನ ನೀತಿಕಥೆಗಳು, ಗಲಿವರನ ದೇಶ ಸಂಚಾರ, ಗಯ್ಯಾಳಿಯನ್ನು ಸಾಧುಮಾಡುವಿಕೆ, ಭಾರವಿ, ಮುಕುಂದಮಾಲೆ ಇತ್ಯಾದಿ ಕೃತಿಗಳು.
ಧಾರವಾಡದಲ್ಲಿ ನಡೆದ ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳನದ ಮೊದಲ ಅಧ್ಯಕ್ಷರಾಗಿದ್ದು, 22-12-1907 ರಂದು ನಿಧನರಾದರು.