ಅಗ್ರಶ್ರೇಣಿಯ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು ಹುಟ್ಟಿದ್ದು ಬಾಗಲಕೋಟ ಜಿಲ್ಲೆಯ ಬೀಳಗಿಯಲ್ಲಿ.1911 ಸೆಪ್ಟಂಬರ್ 5ರಂದು. 1933ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಪುರಾಣಿಕರು 1946ರಲ್ಲಿ 'ರಾಮೂನ ಕಥೆಗಳು' ಪ್ರಕಟಿಸಿದರು. ಅವರ 'ಧರ್ಮದೇವತೆ' ಕಾದಂಬರಿ 'ಕರುಣೆಯೇ ಕುಟುಂಬದ ಕಣ್ಣು' ಎಂಬ ಚಲನಚಿತ್ರವಾಗಿದೆ. ಪುರಾಣಿಕರ 11 ಕೃತಿಗಳು ಬೆಳ್ಳೆತೆರೆ ಕಂಡಿವೆ.
'ಸನಾದಿ ಅಪ್ಪಣ್ಣ' ಕನ್ನಡಿಗರೆಂದೂ ಮರೆಯದ ಕೃತಿ. ಮೊದಲ ಪ್ರಕಟಿತ ಗದ್ಯ ಕೃತಿ, 'ರಾಮೂನ ಕಥೆಗಳು'. ಮೊದಲ ಕವನ ಸಂಕಲನ 'ಬಾಳ ಕನಸು'. ಮೊದಲ ಕಾದಂಬರಿ 'ಮುಗಿಲಮಲ್ಲಿಗೆ'. 'ಮೌನಗೌರಿ', 'ಮುತ್ತೈದೆ', `ಮನೆ ತುಂಬಿದ ಹೆಣ್ಣು', 'ಮಣ್ಣಿನ ಮಗಳು', 'ಕುಲವಧು', 'ಮನಸೋತ ಮನದನ್ನೆ', 'ಧರ್ಮ ದೇವತೆ', 'ಹಾಲು ಕೆನ್ನೆ', 'ಸವಿತಾ ಸತ್ಯವತಿ', 'ಗಂಧದ ಬಳ್ಳಿ', 'ಪಾವನ ಗಂಗಾ', 'ಭಾಗ್ಯವಂತೆ', 'ಹಾಲುಂಡ ತವರು', 'ಭಗೀರಥ', 'ವತ್ಸಲೆ', 'ಜೀವ ಜೇನು', 'ಚಂದ್ರಿಕಾ', 'ಬೆವರಿನ ಬೆಲೆ', 'ದೇವರ ಕೂಸು', 'ಹಸಿರು ತೋರಣ', `ಸ್ನೇಹದ ಸುಳಿಯಲ್ಲಿ, 'ಸಾವಂತ್ರಿ,' 'ಮದುವೆಯಾಟ', 'ಕಾಳನಕೆರೆ', “ಬೆಳವಡಿ ಮಲ್ಲಮ್ಮ', 'ಕಿತ್ತೂರ ರಾಣಿ ಚೆನ್ನಮ್ಮ' ಮುಂತಾದ ಕಾದಂಬರಿಗಳನ್ನು ಬರೆದಿದ್ದಾರೆ.
'ಜೀವನಾದ', 'ಸರಣೆ-ಪ್ರಾರ್ಥನೆ' “ಸರಳ ರಗಳೆ'- ಕವನ ಸಂಕಲನ. 'ಮಗನ ಗೆಲುವು', 'ಸೈರಂದ್ರಿ', 'ರತಿ ವಿಲಾಪ', 'ವಾಸವದತ್ತೆ', 'ಜಯಭೇರಿ'-ನಾಟಕಗಳು. 'ಸಾಹಿತ್ಯ ದರ್ಶನ' - ವಿಮರ್ಶಾ ಕೃತಿ. 1956ರಲ್ಲಿ 'ಮಣ್ಣಿನ ಮಗ' ಕೃತಿಗೆ ಮೈಸೂರು ರಾಜ್ಯ ಸರ್ಕಾರದ ಬಹುಮಾನ, 1969ರಲ್ಲಿ ತರಳಬಾಳು ಜಗದ್ಗುರುಗಳವರಿಂದ 'ಕಾದಂಬರಿ' ಬಿರುದು ಪ್ರದಾನ. ಶೃಂಗೇರಿ ಜಗದ್ಗುರು ಅವರಿಂದ 'ಶ್ರೀ ಶಾರದಾಂಬ ಬಂಗಾರದ ಪದಕ' ಪ್ರದಾನ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ದೇ. ಜವರೇಗೌಡರ ಅಧ್ಯಕ್ಷತೆಯಲ್ಲಿ ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಸನ್ಮಾನ ಹಾಗೂ 'ಕಾದಂಬರಿ ದರ್ಶನ' ಅಭಿನಂದನಾ ಗ್ರಂಥ ಸಮರ್ಪಣೆ. ಐದು ದಶಕಗಳ ಕಾಲ ನಿರಂತರ ಸಾಹಿತ್ಯ ಕೃಷಿಗೈದು 50 ಕಾದಂಬರಿ, 12 ಸಣ್ಣ ಕಥೆಗಳು, 11 ಗೀತ ನಾಟಕಗಳನ್ನು, ನಾಲ್ಕು ಕವನ ಸಂಕಲನ, 8 ಶಿಶು ಸಾಹಿತ್ಯ ಕೃತಿಗಳನ್ನು ಕನ್ನಡ ವಾಚಕರ ಮಡಿಲಿಗೊಪ್ಪಿಸಿ 9 ನವೆಂಬರ್ 1985ರಂದು ಅಸು ನೀಗಿದರು.