Poem

ನಿಲ್ಲುವುದೇ ಇಲ್ಲ

ಅಮ್ಮನ ಗರ್ಭಗುಡಿಯಿಂದ
ಹೊರಗೆ ಬಂದ ದಿನವು
ಅಳುತ್ತಲೇ ಈ ಲೋಕವನ್ನು
ನೋಡಿದವನು ನಾನು
ಇನ್ನೂ ಅಳುವುದನ್ನು ನಿಲ್ಲಿಸಲಿಲ್ಲ

ಹಸಿವಿಗಾಗಿ ಅತ್ತಿದ್ದೇನೆ
ದುಡಿಯುವಾಗ ಅತ್ತಿದ್ದೇನೆ
ದುಡಿಮೆ ಇಲ್ಲದೆ ಅತ್ತಿದ್ದೇನೆ
ಇನ್ನು ಅಳುತ್ತಲೇ ಇದ್ದೇನೆ
ಇರುಳು ತುಂಬಿದ ಕೋಣೆಯೊಳಗೆ
ಬೆಳಕನ್ನು ಹುಡುಕುತ್ತಲೇ ಅತ್ತು ಅತ್ತು
ಕತ್ತಲೊಳಗೆ ಕರಗಿ ಹೋಗಿದ್ದೇನೆ

ಭೂತಕಾಲವನ್ನು ದೂರವಿಟ್ಟು
ಭವಿಷ್ಯತನ್ನು ಮರೆತು
ವರ್ತಮಾನದೊಳಗೆ ಬದುಕುವಾಗಲೂ
ಅಳು ನನ್ನನ್ನು ಸುಡುತ್ತಲೇ ಇದೆ

ಎಲ್ಲವನ್ನು ಸಹಿಸಿಕೊಂಡ ದೇಹವು
ಬರಡು ನೆಲದ ಮೇಲೆ
ನಿಶ್ಚಿಂತೆಯಿಂದ ಮಲಗಿದೆ
ಅದಕ್ಕೆ ಯಾವುದೂ ಕಾಣುತ್ತಿಲ್ಲ
ಯಾವುದೂ ಕೇಳಿಸುತ್ತಿಲ್ಲ

ನನ್ನೊಳಗೆ ದಿನವೂ ಅಬ್ಬರಿಸುತ್ತಿದ್ದ ಅಳು
ಈಗ ಮೌನಸೆರೆಯೊಳಗೆ ಬಂಧಿಯಾಗಿದೆ

ಮುದಲ್ ವಿಜಯ್
ಬೆಂಗಳೂರು

ವಿಡಿಯೋ
ವಿಡಿಯೋ

ಮುದಲ್ ವಿಜಯ್

ಲೇಖಕ ಮುದಲ್ ವಿಜಯ್ ಮೂಲತಃ ತಮಿಳುನಾಡಿನವರು. ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ‘ಕಡಲಿನಾಳದ ಕವನ’ ಕವನ ಸಂಕಲನ ಆಡಿಯೋ ರೂಪದಲ್ಲಿ ಹೊರ ಬಂದಿದೆ. ‘ಜವುಗು’, ‘ನೂಲಿನ ಬೇಲಿ’ ಅವರ ಮತ್ತಿತರ ಕವನ ಸಂಕಲನಗಳು. 

More About Author