Poem

ಮತ್ತೊಂದು ಮುಖಾಮುಖಿ

ಈಚೆಗೆ ಪಾರ್ಕಿನಲ್ಲಿ ಒಬ್ಬಳೇ ನಡೆಯುತ್ತಿದ್ದಾಗ
ಬೆಕ್ಕೊಂದು ಎದುರಾಯಿತು.
ನನ್ನ ಮುಖವನ್ನೂ ಅದು
ನೋಡುತ್ತದೆಂದು ನಿರೀಕ್ಷಿಸಿದೆ,
ನೋಡದೇ ಹೊರಟು ಹೋಯಿತು.
ಕ್ಷಣ ಅಧೀರಳಾದೆ...
ಕವಿ ತಿರುಮಲೇಶರೇ,
ನಿಮ್ಮ ಮನೆಯಂಗಳದ ಬೆಕ್ಕಿನಂತಲ್ಲ
ಈ ನಮ್ಮ ಕಾಲದ ಬೆಕ್ಕುಗಳು.
ಅವು ಈ ಪರಿಯಲ್ಲಿ
ಮನುಷ್ಯರ ನಿರ್ಲಕ್ಷಿಸಬಹುದೆಂದು
ಹೀಗೆ ನಿಚ್ಚಳವಾಯಿತು.

ತಿರುಮಲೇಶರೇ,
ಮೊನ್ನೆ ರೆಸಾರ್ಟ್ ನಲ್ಲಿ ಬೆಕ್ಕುಗಳ ಹಿಂಡೇ ಸಿಕ್ಕಿತು
ಮುದ್ದಿಗೊಂದನ್ನು ಕರೆದೆ
ತಣ್ಣನೆ ನೋಟ ಬೀರಿ ವಿಶ್ರಾಂತಿಗೆ ತೆರಳಿತು
ಅರಣ್ಯ ರೋದನವಾಯ್ತು ನನ್ನ
ಮುದ್ದು ಸಂಧಾನ.
ಹೋಗಲಿಬಿಡಿ,
ದೊಡ್ಡ ದೊಡ್ಡ ಹೆಗ್ಗಣಗಳ
ಜೊತೆ ಸೆಣಬೇಕಲ್ಲ ಅದೂ,
ನಮ್ಮಂಥ ಹುಲು‌ಮಾನವರು
ಬೆಕ್ಕಿಗೂ ಬೇಡವಾದವರು ಸ್ವಾಮೀ...

ತಿರುಮಲೇಶರೇ,
ಈಗಲೂ ಬೆಕ್ಕಿನ ಮೋಹ ನನಗೆ.
ಕಿಟಕಿ ತೆರೆದಿಡುತ್ತೇನೆ
ಕದ್ದಾದರೂ ಒಳಬರಲೆಂದು,
ಬಂದಿಲ್ಲ ಎಂದೂ.
ಸುದ್ದಿ ಬರುತ್ತಿದೆ, ಬೆಕ್ಕಿನ ಜಾತಿಯ
ಚಿರತೆ ಬರುತ್ತಿದೆ ಶಾಲೆಗೂ ಮನೆಗೂ ನಗರಕ್ಕೂ...

ಅಂಜಿಕೆ ತಿರುಮಲೇಶರೇ,
ಈ ಚಿರತೆ ದಿನದಿನ
ಬೀದಿಯಲಿ ಸಿಕ್ಕು ಹಿಂಬಾಲಿಸಿದರೆ,
ಚೂಪುನಖಗಳಲಿ ಬಟ್ಟೆಯನು ಗೀರಿದರೆ,
ಕೊಂದು ತಿನ್ನುವೆನೆಂದು ಅಬ್ಬರಿಸಿದರೆ
ಹೇಗೆ ದಿಟ್ಟಿಸಲಿ,
ಒಂದು ಮುಂಜಾನೆ ಮನೆಮುಂದೆ
ಕುಳಿತು ಬಾಯಗಲಿಸಿದರೆ
ನೂರು ಮನೆಗಳ ಪುಟ್ಟಕರುಗಳ
ಬಚ್ಚಿಡುವ ತಾವೆಂತು?
ಹೇಳಿಕೊಟ್ಟಿಲ್ಲ ನೀವು ತಿರುಮಲೇಶರೇ,
ದಿಕ್ಕೆಟ್ಟಂತಾಗಿದೆ...

- ವಿದ್ಯಾರಶ್ಮಿ ಪೆಲತ್ತಡ್ಕ

ವಿದ್ಯಾರಶ್ಮಿ ಪೆಲತ್ತಡ್ಕ

ವಿದ್ಯಾರಶ್ಮಿ ಪೆಲತ್ತಡ್ಕ- ದಕ್ಷಿಣ ಕನ್ನಡ-ಕಾಸರಗೋಡು ಗಡಿ ಭಾಗದ ಪೆಲತ್ತಡ್ಕದವರು. ಮಂಗಳೂರು ವಿವಿಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕನ್ನಡ ಪ್ರಭ, ಸುವರ್ಣ ನ್ಯೂಸ್, ವಿಜಯ ನೆಕ್ಸ್ಟ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ. ಸದ್ಯ ವಿಜಯ ಕರ್ನಾಟಕ ದಿನಪತ್ರಿಕೆಯ ಲವಲವಿಕೆ ವಿಭಾಗದಲ್ಲಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಇವರು ಬರೆದ ಕವನ, ಕಥೆ, ಪ್ರಬಂಧಗಳು ಹಲವೆಡೆ ಪ್ರಕಟವಾಗಿವೆ.  ‘ಗೌರೀದುಃಖ’ ಇವರ ಪ್ರಕಟಿತ ಕವನ ಸಂಕಲನ. 

More About Author