ಇಲ್ಲಿ ಮನಸು ಮಾರಿಕೊಳ್ಳುವ
ಸಂತೆ ಒಂದು ನಡೆಯುತ್ತಿದೆ!!
ಅವನು ಅವಳಿಗೆ, ಅವಳು ಇವನಿಗೆ.
-- ಇಲ್ಲ ಇನ್ಯಾರಿಗೋ ಗೊತ್ತಿಲ್ಲ.
ಮನಸ್ಸಂತು ಮಾರಿಕೊಳ್ಳುತ್ತಾರೆ ಸಂತೆಯಲ್ಲಿ.
ಆದರೆ, ದಿನ ವಾರ ತಿಂಗಳು ವರ್ಷಗಳ ಲೆಕ್ಕಕ್ಕಿಲ್ಲ.
ಅವರವರ ಖುಷಿ ದುಃಖದ ಮೇಲೆ ಸಂಬಂಧ.
ಒಮ್ಮೊಮ್ಮೆ ಅನುಭವಕ್ಕಿಂತ ಅನುಮಾನದ ಕಾಟ.
ಏಟಿಗೆ ಎದಿರೇಟು, ಮಾತಿಗೆ ಮಾತು.
ಮುನಿಸಿಕೊಂಡ ಮನಸು ಮರಳಿ ಸಂತೆ ಕಡೆಗೆ.
ಮತ್ತದೇ ಸಂತೆ ಮನಸು ಮಾತ್ರ ಬೇರೆ ಬೇರೆ.
ಈಗ ಮನಸ್ಸಿಗೆ ಮನಸ್ಸಾಗುತ್ತಿಲ್ಲ ಮಾರಿಕೊಳ್ಳುಲು.
ಅನುಮಾನದ ಕಹಿ ಅನುಭವ ಸಂಕಟ.
ಬರೀ ಮೈ ನೆಕ್ಕುವ ಉರುಕು ಬಿರುಕು ನಾಲಿಗೆ ನೆನಪು.
ಈ ಸಲದ ಸಂತೆ ಬೇಡ? ಆದರೂ ಮನಸ್ಸಿನಾಟ ಬಲ್ಲವರಾರು.
ಮತ್ತೆ ಮತ್ತೆ ಕನಸು ಹೇಳುತ್ತಿದೆ ಈ ಸಲ ಹುಷಾರೆಂದು.
ಆದರೂ ಅವನು ಇವನು ಇಲ್ಲ ಇಲ್ಲ ನನ್ನೊಳಗೇ ನಾನು-
-- ಮಾರಿಕೊಳ್ಳಬೇಕು ಜಗದ ಜಂಜಾಟ ಮರೆಯಬೇಕು.
ಹೌದೌದು ಮಾರಿದ್ದು ಮನಸು ಗಾಯವಾಗಿದ್ದು ಮೈಗೆ!
ಇದ್ಯಾವ ನ್ಯಾಯ? ಸಾಕು ಮಾಯದ ಸಂತೆ ಸಹವಾಸ.
ಒಂದು ದಿನದ ಸಾವಿಗಾಗಿ ಬದುಕೆಂಬ ಬುತ್ತಿ ಭಾರ.
ಮನಸ್ಸೆಂಬುದು ಮಾಯೆಯಾಟ ಆಲಯದೊಳಗಿನ ಬಯಲಾಟ.
ಈಗಲೂ ಮನಸು ಮಾರಿಕೊಳ್ಳುವರ ಸಂತೆ ಇದ್ದೇಇದೆ.
ಆದರೆ! ಮನುಷ್ಯನೆಂಬ ಸರಕು ಮಾತ್ರ ನಿಷೇಧಿಸಲಾಗಿದೆ.
ಆಗಾಗ ಉರುಕು ನಾಲಿಗಳು ಸಂತೆಗೆ
ಮಾರುವೇಷದಲ್ಲಿ ಬಂದ್ಹೋಗುತ್ತಿವೆ.
ಒಳ ಸತ್ಯ ನಿತ್ಯ ಬಯಲಾಗಿದೆ........
ಸಂತೆ ಇದೆ ಆದರೆ ಮನುಷ್ಯನೆಂಬ ಸರಕು ಮಾತ್ರ ಇಲ್ಲ ಅಷ್ಟೇ.
--- ಅಲ್ಲಾಗಿರಿರಾಜ್ ಕನಕಗಿರಿ.
ಅಲ್ಲಾಗಿರಿರಾಜ್ ಕನಕಗಿರಿ
ವೃತ್ತಿಯಿಂದ ಪತ್ರಕರ್ತರಾಗಿರುವ ಅಲ್ಲಾಗಿರಿರಾಜ ಅವರ ಕೊಪ್ಪಳ ಜಿಲ್ಲೆಯ ಕನಕಗಿರಿಯವರು. ಗಜಲ್ ಬರೆಯುವುದರಲ್ಲಿ ವಿಶೇಷ ಆಸಕ್ತಿ ಹೊಂದಿರುವ ಅವರ ’ಆಜಾದಿ ಗಜಲ್’, ಸುರೂರು ಗಜಲ್, ನೂರ್ ಗಜಲ್ ಕೃತಿಗಳು ಪ್ರಕಟವಾಗಿವೆ.
More About Author