Poem

ಭೈರಾಗಿ

ಆ ಊರಿನಲ್ಲೊಬ್ಬ
ವಿರಾಗಿ ಧರ್ಮ ಗುರುವಿದ್ದ
ವಿಭೂತಿ ಭೂಷಣ ಜಟಾಧಾರಿ
ವೇಧಾಂತ ಪಠಣ ಮಣಮಣ ಮಂತ್ರ ಸದಾ
ಮೌನದ ಕುರಿತು ಮಾತಾಡುತ್ತಲೇ ಇದ್ದ
ಮಂದಿ ಹೌದೌದೆಂದು ತಲೆಯಾಡಿಸಿ
ಕಾಲಿಗೆರಗುತ್ತಿದ್ದರು

ಒಮ್ಮೆ ತೊರೆಯಂತೆ ಹರಿಯುತ್ತಿದ್ದ
ಪ್ರವಚನದ ನಡುವೆ ತೂರಿಬಂದ
ಹಳ್ಳಿಗನ ಪ್ರಶ್ನೆಯ ಸಿಬಿರೊಂದು
ಗುರುವಿನ ಗಂಟಲಿಗೆ ನಾಟಿತು
ಆದಿ ಶಂಕರನ ಮರ್ಮಕ್ಕೆ ತಾಕಿದ
ಚಂಡಾಲನ ಪ್ರಶ್ನೆಯಂತೆ
ಗುರು ತತ್ತರಿಸಿ ನಿರುತ್ತರನಾದ

ಉತ್ತರಕ್ಕಾಗಿ ಹುಡುಕಿ ತಡಕಾಡಿದ
ಧರ್ಮಗ್ರಂಥ ಅಕ್ಷರದ ಪಾಂಡಿತ್ಯ
ನೆರವಿಗೆ ಬರಲಿಲ್ಲ
ಧ್ಯಾನಕ್ಕೆ ದಕ್ಕಲಿಲ್ಲ

ಸತ್ಯವ ಅರಸಿ
ಅಲೆದಲೆದು ಅಲೆಮಾರಿಯಾಗಿ
ಊರು ಕೇರಿ ಮಂದಿರ ಮಸೀದಿಗಳ ಸುತ್ತಿದ
ಹಿಮಾಲಯದ ತುತ್ತ ತುದಿ ಏರಿದ
ಹಾದಿ ಇಲ್ಲದ ತುದಿಯಲ್ಲಿ ಕೂತು
ಏನುಮಾಡುವುದು ?
ಕೆಳಗಿಳಿದು ಕಾಡಿನ ಪಾಲಾದ

ನಿಶ್ಯಬ್ದದ ಹಾಡಿಗೆ ಕಿವಿಯಾದ
ಹತ್ತಾರು ನದಿಗಳ ರುಚಿ ನೋಡಿದ
ಹಲವು ಹೂಗಳ ಮೂಸಿದ
ಬಿಸಿಲು ಚಳಿ ಮಳೆಗೆ ಮೈ ಯಾದ
ಬಯಲಾಗಿ ಮೌನವಾದ
ತುಂಬಿ ಕೊಂಡ ಜ್ಞಾನವ ಸುರಿದು
ಉರಿದುರಿದು ಬರಿದಾಗಿ
ವಿಭೂತಿಯೇ ಆದ..

ಅವನ ಮೌನ ಕುರಿತು
ಈಗ ಜನ ಮಾತಾಡತೊಡಗಿದರು
ಸತ್ಯ ಹರಿಯತೊಡಗಿತು ಬೆಳಕಿನಂತೆ

- ಹಂದಲಗೆರೆ ಗಿರೀಶ್

ಹಂದಲಗೆರೆ ಗಿರೀಶ್

ಕವಿ, ಸಾಹಿತಿ, ಹಂದಲಗೆರೆ ಗಿರೀಶ್ ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹಂದಲಗೆರೆ ಗ್ರಾಮದವರು. ತಂದೆ ಚಿಕ್ಕತಿಮ್ಮಯ್ಯ, ತಾಯಿ ಶಾಂತಮ್ಮ. ಸಾಮಾನ್ಯ ರೈತಕುಟುಂಬದಲ್ಲಿ ಹುಟ್ಟಿದ ಗಿರೀಶ್ ಕೆಲಸ ಅರಸಿ ಬೆಂಗಳೂರಿಗೆ ಬಂದವರು. ಬೆಂಗಳೂರಿನ ಖಾಸಗೀ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಾ  ಬದುಕು ಕಟ್ಟಿಕೊಂಡಿದ್ದಾರೆ. 

ರಂಗಭೂಮಿ, ಸಾಹಿತ್ಯ ಮತ್ತು ಸಿನಿಮಾ ಆಸಕ್ತಿಯ ವಿಚಾರಗಳು. ಸಧ್ಯ ಕೃಷಿಯಲ್ಲೂ ತೊಡಗಿರುವುದರಿಂದ ಬಿಡುವಿನ ಸಮಯವೆಲ್ಲಾ ಕೃಷಿಗೆ ಮೀಸಲಿಟ್ಟಿದ್ದಾರೆ. ' ನೇಗಿಲ ಗೆರೆ ' 'ನೀರಮೇಗಲ ಸಹಿ' ಎಂಬ ಎರಡು ಕವನ ಸಂಕಲನಗಳು ಮತ್ತು 'ಅರಿವೇ ಅಂಬೇಡ್ಕರ್ 'ಕೃತಿ ಸಂಪಾದನೆ ಮಾಡಿದ್ದಾರೆ. ಅವರ ಕವಿತೆ ' ಬಯಲ ಜೋಗಿ ' ಏಕಾಂಗಿಯಾಗಿ ಹೊರಡು ಕವಿತೆಯನ್ನು  ದೃಶ್ಯರೂಪಕ್ಕೆ ಅಳವಡಿಸಿದ್ದು ರಾಜ್ಯಾದ್ಯಂತ ಜನಮನ್ನಣೆಗಳಿಸಿದೆ.

More About Author