ಹಾಡ ಹಗಲೇ ನೆಟ್ಟ
ಸಂಜೆಗೆಂಪಿನ ಸೇವಂತಿಗೆಯ ಸುತ್ತ
ಹಾರುತ್ತಿವೆ ಇರುಳ ಬಣ್ಣದ ಚಿಟ್ಟೆಗಳು
ಬಹುಶಃ ಅವನಲ್ಲಿ ಬಟ್ಟೆ ಬದಲಿಸುತ್ತಿರಬಹುದು
ಅವಸರದಲ್ಲಿ ಎರಡನೇ ಗುಂಡಿಗೆ
ಮೊದಲ ಕಾಜಾವನ್ನು ಸೇರಿಸಿಕೊಂಡಿರಬಹುದು
ಕನ್ನಡಿಯ ಮುಂದೆ ಕ್ರಾಪ್ ತೆಗೆಯಲು ನಿಂತಾಗ
ತನ್ನ ವೇಶಕ್ಕೆ ತಾನೇ ನೆರೆತ ಮೀಸೆಯ ಕೆಳಗೆ
ನಗುತ್ತಿರಬಹುದು...
ನಗು ನಗುತ್ತಲೇ ಗಾಡಿ ತೆಗೆಯುವಾಗ ಕಂಡ
ಕಪ್ಪು ಚೆಟ್ಟೆಯನ್ನು ಗಮನಿಸದೆ ವೇಗವಾಗಿ
ರಸ್ತೆಗಿಳಿದಿರಬಹುದು
ಹೀಗೆ ನಾನವನ ಬಗ್ಗೆ ಕದ್ದು ಯೋಚಿಸುತ್ತಿರುವಂತೆ
ಅವನೂ ನನ್ನ ಹಾರುವ ಸೆರಗು ಮತ್ತು
ಅಚಾನಕ್ ಕಣ್ಣಿಗೆ ಬೀಳುವ ಹೊಕ್ಕಳ ಕಂಡು
ಮಿಂಚಿನ ಸಂಚಾರವಾಗಬಹುದು ಎಂದೆಲ್ಲಾ
ಯೋಚಿಸಿ ತುಟಿ ಕಚ್ಚಿಕೊಳ್ಳುತ್ತಿರಬಹುದು..
ಮೊದಲ ಸ್ಪರ್ಷದ ನೆನಪನ್ನು ಕೂಡಿಟ್ಟುಕೊಳ್ಳುವ
ಹುರುಪಿನಲ್ಲಿ ಬೈಕಿನ ವೇಗ ಹೆಚ್ಚಿಸಿಕೊಂಡು
ಬರುತ್ತಿರಬಹುದು...
ಇನ್ನೇನು ಇದೇ ಈಗ ಈ ರಸ್ತೆಗೆ ತಿರುಗಿಕೊಳ್ಳುವಾಗ
ಮೆಲ್ಲಗೆ ಬಂದು ಎಡ ಹೆಗಲ ಮೇಲೆ ಕೂತ
ಸೇವಂತಿ ಗಂಧದ ಕಪ್ಪು ಚಿಟ್ಟೆಗೆ
ಸುದ್ದಿ ಮುಟ್ಟಿಸೆಂದು ಹೇಳಿ
ಕಳುಹಿಸಿರಲೂಬಹುದು...
ಕೆನ್ನೆಗಳ ಮೇಲೆ ಮುದ್ದಾದ ಗುಳಿ
ಗಾಳಿಗೆ ಹಾರುತ್ತಿರುವ ಮುಂಗುರುಳು
ದಂತಪಂಕ್ತಿಯ ಕೇಂದ್ರ ಬಿಂದುವಿನಂಥಾ
ಕೋರೆಹಲ್ಲುಗಳ ಮುದ್ದು
ಜೊತೆಗೆ ಅವನ ಕಣ್ಣ ಹೊಳಪಿನಲ್ಲಿ
ನೂರು ಕಪ್ಪು ಚಿಟ್ಟೆಗಳು ಫಡಫಡಿಸುತ್ತಿರಲಿ ದೇವಾ
ಅವನ ಸೆರೆಹಿಡಿವ ನೀಲಾಗಸಕೆ
ನನ್ನ ಎದೆಯೊಳಗಿನ ಕಪ್ಪುಚಿಟ್ಟೆ
ಹಿಡಿತಕ್ಕೆ ಸಿಗದೆ ಹಾರಲಿ ಎಂಬ ಪುಟ್ಟ ಪ್ರಾರ್ಥನೆ
ಹಾಗೇ ಅವ ಬಂದಿಲ್ಲಿ ಇಳಿವುದರೊಳಗಾಗಿ
ಅಡಗಿಸಬೇಕು ಅಂಗಾಂಗಗಳ ಮಡಿಕೆಗಳನ್ನು
ಸಪಾಟಾಗಿರುವ ಎದೆಯನ್ನು
ಸಪಾಟಲ್ಲದ ನಡು ಮತ್ತು ಸ್ಟ್ರೆಚ್ ಮಾರ್ಕುಗಳನ್ನು
ಎಷ್ಟು ಕ್ಯೂಸೆಕ್ಸ್ ನೀರು ಹರಿದು ಹೋಗಿರಬಹುದು
ಈ ಅಣೆಕಟ್ಟಿನಿಂದ ಇಷ್ಟು ವರ್ಷಗಳಲ್ಲಿ...
ಅದೆಷ್ಟು ಇರುಳ ಬಣ್ಣವನುಂಡ
ಕಪ್ಪು ಚಿಟ್ಟೆಗಳು ರೂಪಾಂತರ
ಹೊಂದಿರಬಹುದು...
ಆತ್ಮಗಳು ಸಂಧಿಸುವಾಗ ಎಲ್ಲವೂ ಗೌಣ
ಒಂದು ಅನಿಶ್ಚಿತ ಸಾವು ಕಪ್ಪು ಚಿಟ್ಟೆ
ಸ್ವಚ್ಛಂದವನ್ನ ಕದ್ದ ಸ್ವೇಚ್ಛೆ ಮೋಹ
ಅವ ಬರುವನೆಂಬ ನಂಬಿಕೆ
ದಾರಿಯ ಅರವಟಿಗೆ
ಒಂದು ದಿನದ ಬದುಕಿಗೆ
ಯಾವ ಲೆಕ್ಕಾಚಾರ!
ಹಾರುತ್ತಾ ಹಾರುತ್ತಾ ಹಾರುತ್ತಾ
ಹಾರುತ್ತಲೇ ಸಾವ ವಶವಾಗಿ
ಸಾವೇ ಆಗಿಬಿಡುವ ಕಪ್ಪುಚಿಟ್ಟೆಗೆ
ಪ್ರಿತಿಯಷ್ಟೇ ಅದರ ಅನುಭೂತಿಯೂ
ಬದುಕಿನ ಪರಿಮಳವೇ
ಅರೆ ಎಲ್ಲಿ ಹೋಯಿತು ಚಿಟ್ಟೆ
ತನ್ನ ಮುದ್ದಾದ ಕಪ್ಪು ರೆಕ್ಕೆಗಳನ್ನಿಲ್ಲೇ ಬಿಟ್ಟು
ಅವ ಬಂದನೇ ಇದ್ದನೇ ಹೋದನೇ..
ಆತ್ಮದ ಹಸಿವಾಸನೆಯ ಕಂಪು
ಕಪ್ಪು ಚಿಟ್ಟೆಯೇ ಅವನು?!
- ಆಶಾ ಜಗದೀಶ್
ಆಶಾ ಜಗದೀಶ್
ಕವಯತ್ರಿ ಆಶಾ ಜಗದೀಶ್ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಲವಾರು ಕತೆ, ಲೇಖನ, ಕವಿತೆ, ಪ್ರಬಂಧಗಳು ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ. ‘ಮೌನ ತಂಬೂರಿ’ ಅವರ ಚೊಚ್ಚಲ ಕವನ ಸಂಕಲನ.
More About Author