ಹೂ ಬಿಟ್ಟ ನೆಲ
ಕಾಯಿ ಕಚ್ಚಿದ ಗಿಡ
ಉಗಿದು ನುಂಗಿದ ಆಕಾಶ
ಸುತ್ತಲೂ ತೆರೆದ ಬನ
ಶಾಂತ ಸ್ವರೂಪಿ ಕಾಲ ಭೈರವಿ.
ಖಡ್ಗ ರುಂಡಗಳು ಕೈಯಲ್ಲಿ ಇಲ್ಲ
ಶಿವನ ಕಪಾಲ ಅವಳ ಬಳಿಯಿಲ್ಲ
ಬಿಳಿ ತಾವರೆಯ ಮುಡಿದು
ನಿಂತ ಭಾರತ ಭೈರವಿ ಇವಳು!
ರಕ್ತದ ದೇಶವಲ್ಲ ಇದು ರಕ್ತವಲ್ಲ
ಕಾಲ ಭೈರವಿ ರಾಗದಲ್ಲಿ
ಹುಟ್ಟಿದ ಭಾರತವಿದು!
ಎದೆಗೆ ಹೊತ್ತಿಸಿ ಭುಗ್ಗನೇ
ಉರಿದ ಜ್ವಾಲೆಯಲ್ಲಿ ಹುಟ್ಟಿದ ಮಕ್ಕಳಯಿವರು
ಕಾಶಿ, ಕಾಮೇಶ್ವರದಿಂದ
ಹರಿದು ಹರಡಿ ನಿಂತ
ಕಾಲಭೈರವಿಯ ನೆಲವಿದು.
ಇವಳು ಹಣ್ಣು ಹಂಪಲು
ತಿನ್ನುವ, ಎದೆಯ ಹಾಲನ್ನು
ಕುಡಿಸುವ ಮಾಹಾ ಭೈರವಿ ಇವಳು
ಗೂಸು ಮೂಟ್ಟೆಯ ಕಟ್ಟಿ
ಭಾರತ ಮಕ್ಕಳ ತೂಗುವ
ಭಾರತಾಂಬೆ ಇವಳು.
ಕೋರೆಗಳು ಇಲ್ಲ
ದಾಡೆಗಳೂ ಇಲ್ಲ
ವಿಷದ ದೇಹವಂತೂ
ಅಲ್ಲವೇ ಅಲ್ಲ!
ನೀರ ಗೆಜ್ಜೆಯ ಕಟ್ಟಿ
ನಡೆವ , ನಡೆಸುವ ಕಾಲ
ಭೈರವಿ ಇವಳು.
- ಸೂರ್ಯ ಕೀರ್ತಿ
ಚೈತ್ರಾ ಶಿವಯೋಗಿಮಠ
ಕವಯತ್ರಿ ಚೈತ್ರಾ ಶಿವಯೋಗಿಮಠ ಮೂಲತಃ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದವರು. ಪ್ರಸ್ತುತ ಬೆಂಗಳೂರಿನ ವಾಸವಿದ್ದಾರೆ. ವಿಟಿಯು ವಿಶ್ವವಿದ್ಯಾಲಯದಿಂದ ಎಂಟೆಕ್ ಪದವೀಧರರು. ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಓದು ಬರಹ, ನಿರೂಪಣೆ ಅವರ ಹವ್ಯಾಸ. ನಾಡಿನ ಮುದ್ರಣ ಹಾಗೂ ಡಿಜಿಟಲ್ ಪ್ರತ್ರಿಕೆಗಳಲ್ಲಿ ಇವರ ಕವನ-ಬರಹಗಳು ಪ್ರಕಟವಾಗಿವೆ.
More About Author