Poem

ಮತ್ತೆ ನೀ ಹುಟ್ಟುವುದು

ಹೋಗು ದಕ್ಷನ ಮಗಳೆ
ನೀನು ತಿರುಗಿ ಬರುವೆ ಅಂತ
ಕರಗದೆ ಕಾಯುತ್ತವೆ ಈ ನೂರು ಮಂಜಿನ ಬೆಟ್ಟ
ಅಲ್ಲಿ ಕೊರೆವ ಗವಿ ಕತ್ತಲಿನಲ್ಲಿ
ಅರಳುತ್ತಲೇ ಇರುತ್ತವೆ ನೀಲಿ ಮಂಜು ತಾವರೆ

ಕೈಯ ಕೊಳ್ಳಿ ಮಾಡಿ
ಜೀವದೆಣ್ಣೆ ಬತ್ತಿ ದೀಪಗಳ
ಉರಿಸುತ್ತ ಕಣ್ಣಲ್ಲಿ ಸುತ್ತ
ನಿನ್ನ ಬರವಿನ ಹಗಲು ಇರುಳಿನ
ಗೆಜ್ಜೆಯುಲಿವಿಗೆ ಹೆಜ್ಜೆಗಳನಿಕ್ಕುತ್ತ
ಹೊಟ್ಟೆ ಎದೆಗಳ ಡೊಳ್ಳು ಬಾರಿಸುತ
ಪಾತಾಳ ಮೆಟ್ಟಿ
ಗೌರಿಶಂಕರ ನೆತ್ತಿ ನಡುಗುವ ಹಾಗೆ
ಆಗಸದ ವಿಶಾಲ ಭಿತ್ತಿ ಹರಿಯುವ ಹಾಗೆ
ನೆಗೆನೆಗೆದು ಕುಪ್ಪಳಿಸಿ ಬೆವಬೆವತು
ದಣಿದುರುಳಿ ಮತ್ತೆದ್ದು
ಕುಣಿಯುತ್ತಲೇ ಇರುತ್ತಾರೆ
ಈ ನಂದಿ ಆ ಭೃಂಗಿ
ಭೂತಗಣಗಳ ಮಧ್ಯ

ದೇವಪುತ್ರಿಗೂ ಆಜೀವ ತಿರುಕನಿಗೂ
ಯಾವ ಯಾತರ ನಂಟು?
ಹೊತ್ತಾಯಿತು ಹೊರಡು
ಕಟ್ಟಿಕೋ ನೆನಪಿನ ಗಂಟು
ಮುತ್ತುಗಳ ಸರ ನತ್ತು ಬೆಂಡೋಲೆ
ಅಪ್ಪುಗೆ ಸೋಕುಗಳ ಜರತಾರಿ ಸೀರೆ
ಕಟ್ಟಿಕೊ ಕಟ್ಟಿಕೊ ನೆನಪಿನ ಗಂಟು
ಒಡಲ ಸುಡುಗಾಡಲ್ಲಿ
ಎಲುಬು ಚೂರು ಕರುಕು ಬಾಡು
ಬಿಸುಟ ವಿಮಾನಗಳ
ನಡುವೆ ನಾನಿಲ್ಲಿ ಒಬ್ಬೊಂಟಿ
ಪಕ್ಕ ಈ ಮುದಿಯೆತ್ತು

ನೀ ಬರುವೆ ಬರುವೆ ಎಂಬ ಕನಸಿನ
ಇರುವೆ ಕಚ್ಚಿದರೂ
ಮರೆತು ಒರಗಿರುವ ಭೂತಗಣಗಳ
ನಡುವೆ

ಶಕ್ತಿಯಿಲ್ಲದ ಶಿವನ ಮೈಯೆಲ್ಲ ಶವವಾಗಿ
ಬತ್ತುವಳು ಗಂಗೆ ತಲೆಯಲ್ಲಿ
ಕಂದುವನು ಚಂದ್ರ ಮುಡಿಯಲ್ಲಿ

ನನ್ನ ಎದೆಗೊರಗಿ ಹಗಲುಗನುಸುತ್ತಿದ್ದ
ನಿನ್ನ ಹೆರಳುಗಳ ಕಪ್ಪು ಹೊಳಪಲ್ಲಿ
ಹೊಕ್ಕು ಬಾಗಿದ ಸೂರ್ಯ ಕಿರಣಗಳ ಬಿಲ್ಲು
ಒಡೆದು ಕಾಮನಬಿಲ್ಲು
ಎಷ್ಟು ಕಾಮನಬಿಲ್ಲು ಲೋಕಗಳು
ಭೂತಗಳ ಬೂದಿಬುಡುಕನ
ಬುಡುಬುಡುಕೆಯವನ
ಸುಡುಗಾಡು ಮೈಯಲ್ಲಿ

ಹೋಗು ದಕ್ಷನ ಮಗಳೆ
ದಶದಿಕ್ಕುಗಳ ಜ್ವಾಲೆ ಕರೆಯುತ್ತಿದೆ ನಿನ್ನ
ಮೂಲೋಕಗಳ ಯಜ್ಞಶಾಲೆ ಕರೆಯುತ್ತಿದೆ ನಿನ್ನ
ಮರೆತ ವಿಲಯದ ಧೂಮಮಾಲೆ ಕರೆಯುತ್ತಿದೆ ನಿನ್ನ
ಬಾರೆ ಸತಿ ಬಾಯೆಂದು
ಪತಿಯಿದ್ದರೂ ನಿನಗೆ ಸತಿಯೆಂದು
ಕ್ಷಾಮ ಡಾಮರ ಢಮರು ತೊಗಲು ಹರಿಯುವ ಹಾಗೆ
ಕ್ರೂರ ಕರ್ಕಶ ಮೊರೆತ ಹಾಡು ಅನ್ನುವ ಹಾಗೆ
ಅಸುರರೆ ಸುರರಾಗಿ ಸುರರೇ ಅಸುರರ ಹಾಗೆ
ಕೇಕೆಕೇಳಿ ನಡುವೆ
ಮಂತ್ರ ಘೋಷಣೆ ನಡುವೆ
ನರರ ನರಕಿಗರ ಮಾಂಸ ಭಕ್ಷಣೆ ನಡುವೆ

ನೀ ಹೋಗಿ
ಶಿವನೆಲ್ಲಿ ಭವನೆಲ್ಲಿ
ಅಂತ ಬಿದ್ದಾಗ ಉರಿಯಲ್ಲಿ
ನಿನ್ನ ಜೊತೆ ಬೂದಿ
ಸುರಭೂಜಧೇನುಗಳು
ಚಿಂತಾಮಣಿಗಳು

ಕೇಕೆ ಕೇಳಿಯ ನಡುವೆ
ಮಂತ್ರ ಘೋಷಣೆ ನಡುವೆ
ವರವರಗುಟ್ಟಿ ನರಕ ನನ್ನೊಳಗೆ
ನಾನು ನರಕದೊಳಗೆ
ಒಡಲ ಸುಡುಗಾಡೊಳಗೆ
ಎಲುಬು ತುಣುಕುಗಳೊಳಗೆ
ಜೀವ ಸಂಚಾರಗಳು

ಹುಳುಗಳೂ ಫಣಿಯಾಗಿ
ಹೆಡೆಯೆತ್ತಿ
ಒಲೆದು ನೋವು ಪುಂಗಿಗೆ
ಆಚಾರವೂ ಚರವಾಗಿ
ಸಿಡಿಲು ಢಮರುಗ ಅಗೋ
ನರರೂಪಿ ಮಿಂಚುಬಳ್ಳಿ ಸಂಚಯ ಇಗೋ
ಕಡೆಲೆಲ್ಲ ಬಡಬಾನಲದ ತವರಿನ್ನು
ಇನ್ನು ರಕ್ತದ ವರ್ಷಾಕಾಲ
ಮಲಯ ಮಾರುತ ಇನ್ನು
ಪ್ರಳಯ ಜಂಝಾವಾತ
ಇನ್ನು ತಾಂಡವ ನೃತ್ಯ

ಅಗೋ ಬಂದ
ಇಗೋ ಬಂದ
ಭೂತಗಣಗಳ ನಾಥ
ವೀರಭದ್ರ
ಅಹಹಾ ಕರುಣಾ ಸಮುದ್ರ

ದೇವಿಯರ ಅಳಲು ಮುಟ್ಟಿದರು ನಭವನ್ನು
ಕಿವುಡಾಗಿ ಕುರುಡಾಗಿ ಕಡಿಯುವನು
ದೇವದೇವರ ರುಂಡ
ಕೆಡಹುವನು ಸ್ವರ್ಗ ವೈಭವ ಸ್ತಂಭ

ಕೇಕೆಕೇಳಿಗಳೆಲ್ಲಿ
ಮಂತ್ರಘೋಷಣೆಯೆಲ್ಲಿ

ಅವನಿಕಾಂತನೆ ಅವನೇ ಬೇಕೆಂದು ಎಂದು
ಭವಭವದಿ ಬೆಂದು
ಮತ್ತೆ ನೀ ಹುಟ್ಟುವುದು ಬೆಟ್ಟಗಳ ಮಗಳಾಗಿ
ಘಟ್ಟಗಳ ಬದಿಯಲ್ಲಿ ಬಯಲು ಬಟ್ಟೆಗಳಲ್ಲಿ
ಕಾಡುಗಳ ಒಡನಾಡಿ ಬಾನಾಡಿ ಕೋಗಿಲೆ ಗಿಳಿಯ ಜೊತೆ ಮಾತಾಡಿ
ಸಿಂಹಶಾರ್ದೂಲಗಳ ಜೊತೆ ಆಟಗಳಾಡಿ
ಬೆಳಕು ಬೇಡರ ರಸಸಿದ್ಧಿಯೋಗಿಗಳ
ಜೊತೆ ಜೊತೆ ಅಲೆದಾಡಿ
ಹೊಸಜಾಗದ ಕಡಲ ಕರೆ
ನದೀ ತೀರಗಳ ಪಕ್ಕ
ಹಸಿರಾದ ನಗರಗಳ
ಹಸಿವಿರದ ಹಳ್ಳಿಗಳ ಗಲ್ಲಿ ಬೀದಿಗಳಲ್ಲಿ
ಅರಸಿ ಅರಸುತ ಬರುವೆ
ಕೋಟಿ ದೇಹಗಳಲ್ಲಿ
ಕೋಟಿ ಕೊರಳುಗಳಲ್ಲಿ
ಬೆಳದಿಂಗಳೇ ಬಿಸಿಲೆ
ಕೋಗಿಲೆಯೇ ಮಾಮರವೆ
ಹೇಳಿ ಎಲ್ಲಿದೆ ಹಾದಿ

ನಾ ತೊರೆದು ಬಂದ ಭವಹರನ ಭವನಕ್ಕೆ
ಕಾದಿರಿವೆ ಕಾದಲೆ ನಾನು ನಿನಗಾಗಿ
ಮರುಭೂಮಿ ಹಿಮರಾಶಿ ಸುಡುಗಾಡುಗಳ ಜೊತೆಗೆ
ಯೋಗಮುದ್ರೆ ತಳೆದು

ದೇವ ಮಾನವನಾದ ಆ ಯುಗದ ಮೊದಲು
ನೀನು ನನ್ನ ಇಹಗಳ ಒಡತಿ
ನಾನು ನಿನ್ನ ಮಹಗಳ ಒಡೆಯ

ಬೆಸೆದು ಅರೆಚಣ
ಬಿರಿಸಿ ಮರುಚಣ ಬಿಡಿಸುವ
ಅಪ್ಪುಗೆಯೆ ಸಿಹಿಮುತ್ತೆ
ಈ ಕ್ಷಣವೆ
ನಮಗೆಲ್ಲ

ತೀಡಿಕೋ ಮುಂಗುರುಳು
ಹೋಗು ಹೋಗಿ ಬಾ
ದಕ್ಷನ ಮಗಳೆ

ಎಚ್.ಎಸ್. ಶಿವಪ್ರಕಾಶ್

ಕವಿ, ಸಾಹಿತಿ, ಲೇಖಕ ಎಚ್.ಎಸ್.ಶಿವಪ್ರಕಾಶ್ ಬೆಂಗಳೂರಿನಲ್ಲಿ 15-06-1954ರಂದು ಜನಿಸಿದರು. ತಂದೆ ಪ್ರಸಿದ್ಧ ಸಾಹಿತಿಗಳು ಮತ್ತು ಕನ್ನಡ ಪರಿಷತ್ತಿನ ಅಧ್ಯಕ್ಷರು ಆಗಿದ್ದ ಶಿವಮೂರ್ತಿ ಶಾಸ್ತ್ರಿಗಳು.  ನವದೆಹಲಿಯ ಜೆ.ಎನ್.ಯು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಈಸ್ತೆಟಿಕ್ಸ್ನಲ್ಲಿ ಪ್ರೋಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯ, ನಾಟಕ, ಅನುವಾದ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಶಿವಪ್ರಕಾಶರು ತಮ್ಮ ನಾಟಕ ಮಹಾಚೈತ್ರೆ ರಚನೆಯಿಂದಾಗಿ ಸಾರ್ವಜನಿಕ ವಿರೋಧ ಎದುರಿಸುವಂತಾಯಿತು. ಅವರ ಪ್ರಮುಖ ನಾಟಕಗಳು- ಮಹಾಚೈತ್ರ, ಸುಲ್ತಾನ್ ಟಿಪ್ಪು, ಮಂಟೇಸ್ವಾಮಿ, ಮಾದರಿ ಮಾದಯ್ಯ, ಮದುವೆ ಹೆಣ್ಣು. ಶಿವಪ್ರಕಾಶರ ಕವನ ಸಂಕಲನಗಳು- ಮಳೆ ಬಿದ್ದ ನೆಲದಲ್ಲ, ಮಿಲರೇಪ, ಅಣುಕ್ಷಣ ಚರಿತೆ, ಸೂರ್ಯಜಲ, ಮಳೆಯೇ ಮಂಟಪ. ಅವರ ಅನುವಾದಿತ ಕೃತಿ- ಕಿಂಗ ಲಿಯರ್ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. 

More About Author