ಗೋಡ್ಸೆ ಗುಂಡಿಟ್ಟ ಕಾರಣದಿಂದಲೇ
ನೀವು ನಮ್ಮ ಎದೆಯೊಳಗೆ ಅವಿತುಕೋಂಡಿದಿರಿ.
ಬಾಪೂ ನಿಮ್ಮ ನಂತರದ ಭಾರತದಲ್ಲಿಯೂ ನೀವು ನಮ್ಮೊಂದಿಗೆ ಇದ್ದೀರಿ...
ಎದೆಯೊಳಗಿನ ಚೌಕಟ್ಟಿನಲ್ಲಿ ಮಹಾತ್ಮನಾಗಿ, ನನ್ನ,ಅವನ, ಮತ್ತವರ
ಜೇಬಿನಲ್ಲಿ ಮತ್ತು ಅವಳ ಕುಪ್ಪಸದೊಳಗೆ ಅಡಗಿರುವ ನೋಟು- ನೋಟುಗಳಲ್ಲಿ ಬೆಚ್ಚಗಾಗಿ,
ಪುಳಕಿತಗೊಂಡು ನಗುನಗುತಿದ್ದಿರಿ.
ಹೌದು, ನಾವು ನಿಮ್ಮ ಬೆತ್ತಲೆ ಎದೆ, ಬೈತಲೆ ಸ್ಪರ್ಶಿಸುತ್ತ ನಿಮ್ಮ ಧ್ಯಾನದೊಳು ನಮಗೆ ಅರಿವಿಲ್ಲದೆ
ಮುಳುಮುಳುಗಿ ತೇಲುತ್ತಿದ್ದೇವೆ.
ನಿನ್ನ ರಾಮರಾಜ್ಯದ ಕನಸಿನಲ್ಲಿ ನಾವು ನವ ಭಾರತವನ್ನು ಕಂಡೆವು ಎಂದು ಭ್ರಮಿಸುತ್ತಿದ್ದೆವೆ.
ಇಲ್ಲೇ ನಮ್ಮೆದುರಲ್ಲೇ ನಡೆಯುವ ಕೊಲೆ ,ಸುಲಿಗೆ ,ಅತ್ಯಾಚಾರ, ಭ್ರಷ್ಟತನಗಳನೆಲ್ಲ ಕಂಡರು
ವಿರೂಪಗೊಂಡ ಮನಸ್ಥಿತಿಯಲ್ಲಿ ನಿಮ್ಮ ಮೂರು ಮಂಗಗಳ ತತ್ವದಲ್ಲಿಯೇ ಬದುಕುತ್ತಿದ್ದೇವೆ.
ಕೊಳಕು ಬಟ್ಟೆಯ ತಿರುಕನ ಕಂಡು ಮೂಗುಮುರಿಯುತ್ತೇವೆ.
ಕಾಂಪೌಂಡುಗಳ ಮೇಲೆ ಉಚ್ಚೆ ಹೊಯ್ದು ಸಂಭ್ರಮಿಸುತ್ತೇವೆ.
ಶೌಚಾಲಯಗಳ ಗೋಡೆಗಳ ಮೇಲೆ ಅಶ್ಲೀಲ ಪದಗಳ ಬರೆದು.
ಹಸ್ತ ಮೈಥುನ ನಡೆಸಿ ವಿಕೃತ್ತದೊಳಗೂ ಸಜ್ಜನಿಕೆಯ ನಡೆ ನುಡಿ ಕಲಿತುಕೊಂಡು
ಗಾಂಧಿ ನಿನ್ನ ಮುಖವಾಡ ತೊಟ್ಟುಕೊಂಡಿದೆವೆ.
ಹಣ ಹೆಂಡದ ಆಸೆಗೆ ಕರೆದವರ ಹಿಂದೆ ಹೋಗಿ, ಜೈಕಾರ ಹಾಕುತ್ತವೆ.
ನಿನ್ನ ಜನ್ಮದಿನವೇಂದು ಬೀದಿ ಬೀದಿಗಳನ್ನು ಪೊರಕೆ ಹಿಡಿದು ಶುದ್ಧಗೊಳಿಸುವಂತೆ ನಟಿಸುತ್ತೇವೆ.
ಪೋಟಕ್ಕೆ ಫೋಸ್ ಕೊಟ್ಟು ನಕ್ಕು ಕಸವೇನು, ಪೊರಕೆಯನಲ್ಲೇ ಬಿಟ್ಟು ತೆರಳುತ್ತೇವೆ.
ಯಾರು ಉತ್ತಮ ನುಡಿಯೊಂದು ಹರವಿದರೆ ಇವನೊಬ್ಬ ದೊಡ್ಡ ಗಾಂಧಿ ಎಂದು ಪಟ್ಟ ಕಟ್ಟುತ್ತೇವೆ.
ಸಿನಿಮಾ ಥಿಯೇಟರ್ ನ ಮುಂಭಾಗದ ಸೀಟುಗಳಿಗೆಲ್ಲ ಗಾಂಧಿ ಕ್ಲಾಸು ಎಂದು ಹೆಸರಿಟ್ಟು
ಅಲ್ಲಲ್ಲೇ ತಂಬಾಕು, ಗುಟ್ಕ ಜಗಿದು ಉಗುಳುತಲೆ ನಿರ್ಮಲ ಭಾರತ ನಿರ್ಮಿಸುತ್ತೇವೆ ಎಂದು ವೇದಿಕೆ ಹತ್ತಿ ಬೊಗಳೆ ಬಿಡುತ್ತಿದ್ದೇವೆ.
ಹೌದು, ರಾತ್ರಿ ಹನ್ನೆರಡರ ಸರಿಸುಮಾರಲ್ಲಿ ಬೀದಿಯಲ್ಲಿ ಒಂಟಿ ಹುಡುಗಿ ಒಬ್ಬಳು ನಡೆದು ಹೋಗಬೇಕು
ಅದುವೇ ರಾಮರಾಜ್ಯವೆಂದು ಹೇಳಿದೆ.
ಪ್ರಿಯ ಗಾಂಧಿ, ಅದಂತೂ ಖಂಡಿತ ನೆರವೇರಿದೆ.
ಹುಡುಗಿಯ ಕೈಯಲ್ಲಿ ಸಿಗರೇಟು ಸರಬು ಬಾಟಲು ಇದ್ದೆ ಇದೆ.
ನೋಡು ನವ ಭಾರತದ ನಿರ್ಮಾಣವಾಗಿದೆ.
ವಿಡಿಯೋ
ವಿಡಿಯೋ
ಜಗದೀಶ್ ಜೋಡುಬೀಟಿ
ಜಗದೀಶ್ ಜೋಡುಬೀಟಿ ಅವರು ಮೂಲತಃ ಕೊಡಗಿನವರು. ಅವರು ಕಾವ್ಯ ಪ್ರಕಾರಗಳಲ್ಲಿ ಆಸಕ್ತಿಯನ್ನು ಹೊಂದಿದ್ದು, ಈಗಾಗಲೇ ಹಲವು ಕವಿತೆಗಳನ್ನು ಬರೆದು, ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿರುತ್ತಾರೆ.