Poem

ಏಕಾಂಗಿಯ ಭಾವಲಹರಿ  

ನೋವುಗಳು ಅಸಹನೀಯ
ಎದೆ ಬಿರಿವಂತೆ ನಾಟಿವೆ
ಭಾವಗಳ ಬಂಧಿಸಿ
ಮನಸು ದುರ್ಬಲಗೊಳುತಲಿದೆಯೇ
ಎಂಬ ಚಿಂತೆ ಕಾಡುತಿದೆ

ಸಾವಿರಾರು ಬಾಣಗಳು
ನನ್ನತ್ತಲೇ ನೆಟ್ಟಿವೆ
ನಾಲಿಗೆ ಹರಿತಗೊಂಡರೂ
ಮೂಕಮೌನ ತಾಳಿ
ಪರಿಸ್ಥಿತಿಗೆ ಶರಣಾಗಿರುವೆ

ಪದಗಳು ಕಡಿವಾಣ ತೊರೆದರೆ
ಅವಿತು ಕೂತವರ ಹಣೆಬರಹ
ಹೊರಹೊಮ್ಮುತ್ತದೆ

ಆದರಿದೆಲ್ಲ ಬೇಕಾ… ಎಂದು ಮನ
ಒಮ್ಮೆ ಪ್ರಶ್ನಿಸುತ್ತದೆ?!

ನನ್ನಾತ್ಮವ ಮೆಟ್ಟಿ ತಾವು ಮೆರೆದು
ಕುಪ್ಪಳಿಸುತ್ತಿರುವವರ ಮೋಸದಾಟಕೆ
ನಾ ಬಲಿಪಶುವಾಗಿರುವೆ
ಇವರ ಸೋಜಿಗದ ಸೋಗಿನಾಟಕೆ ಮರುಳಾಗದವ
ಮಾತ್ರ ತಿಳಿವರು ದಿಟವಾಗಿ ನಾ ಏನೆಂದು

ನೋವ ನುಂಗಿ
ನಗೆಯ ತಂದು
ಭ್ರಮೆಯ ಬದುಕು ಸಾಕೆಂದು
ಸುಮ್ಮನಿದ್ದರೂ
ಬಿಡಲೊಲ್ಲರು ನನ್ನ ಪಾಡಿಗೆ

ಹುದುಗಿಡಲೂ ಆಗದು
ಕಕ್ಕಲೂ ಆಗದು
ಎನ್ನ ಒಡಲು ಸುಡುತಿದೆ
ಬೆತ್ತಲೆ ಸತ್ಯದ ಹಿಂದೆ ಓಡುತ
ಬಳಲಿ ಬೆಂಡಾದೆ

ನನ್ನ ಮೌನದ ಆಕ್ರಂದನ
ನಿಮಗೆ ಕೇಳಿಸುತ್ತಿಲ್ಲವೇ?
ಒಂದು ಬಾರಿ ಜಗದೆದುರು ನಿಂತು
ನನ್ನ ದುಃಖ ತೋಡಿಕೊಳ್ಳಲೇ!

ಆದರೆ ಯಾರು ನನ್ನವರೆಂಬ
ಪ್ರಶ್ನೆಯೊಂದು ಎದ್ದು ಕಾಡುತ್ತಿದೆ…
ಎಷ್ಟು ಕೂಗಿದರೂ ನನ್ನದೇ ದನಿ ಮಾತ್ರ
ಪ್ರತಿಧ್ವನಿಸುತ್ತಿದೆ

ಎಲ್ಲರು ಇದ್ದರೂ
ನಾ ಮಾತ್ರ ಒಬ್ಬಂಟಿ ಎನಿಸಹತ್ತಿದೆ!

-ಧಾರಿಣಿ ಮಾಯಾ

ಧಾರಿಣಿ ಮಾಯಾ

ಧಾರಿಣಿ ಮಾಯಾ ಅವರು ಮೈಸೂರಿನ ಪತ್ರಿಕೋದ್ಯಮ ವಿಭಾಗದಲ್ಲಿ ಪದವಿ ಹಾಗೂ ಇಂಗ್ಲೀಷ್ ವಿಭಾಗದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿದ್ದು, ಓದು- ಬರಹದಲ್ಲಿ ಆಸಕ್ತಿ, ಬರವಣಿಗೆಯನ್ನು ಪ್ರಾರಂಭಿಸಿ ಹವ್ಯಾಸಿ ಬರಹಗಾರ್ತಿಯಾಗಿ, ಸಾಹಿತ್ಯ ಕಣಜವು ಕಥೆ, ಕವನ, ಲೇಖನ ಹಾಗೂ ಲಲಿತ ಪ್ರಬಂಧಗಳ ಪ್ರಕಾರಗಳನ್ನು ಒಳಗೊಂಡಿದೆ. ಬಹುತೇಕ ಬರಹಗಳು ಭೂಮಿಕಾ, ಸುಧಾ, ತರಂಗ, ವಿಶ್ವವಾಣಿ, ವಿಜಯ ಕರ್ನಾಟಕ, ಮಂಗಳ, ಕರ್ಮವೀರ, ಹಾಗೂ ವಿನಯವಾಣಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 'ನೇಯ್ದೆನುಡಿ' ಎಂಬ ಮಾಸಿಕ ಪತ್ರಿಕೆಯಲ್ಲಿ ಇವರ ಅಂಕಣ ಬರಹಗಳು ಕಳೆದ ಮೂರು ವರ್ಷಗಳಿಂದ ಸತತವಾಗಿ ಮೂಡಿ ಬರುತ್ತಿವೆ. ಚಿತ್ರಕಲೆ, ವಾಲ್ ಪೇಂಟಿಂಗ್, ಅಡುಗೆ, ಸ್ಟ್ರೀಟ್ ಫೋಟೋಗ್ರಾಫಿ ಹವ್ಯಾಸವಾಗಿದ್ದು ಚಿಕ್ಕಂದಿನಿಂದಲೂ ನೃತ್ಯ, ನಾಟಕ ಇವರ ನೆಚ್ಚಿನ ರಂಗಗಳು, ಕೌಂಟುಬಿಕ ಆಧಾರಿತ “ಮನೋರಮೆಯರ ತಲ್ಲಣಗಳು” ಎಂಬ ನಾಟಕವನ್ನು (ಮ್ಯೂಸಿಕಲ್ ಡ್ರಾಮಾ) ರಚಿಸಿ, ನಿರ್ದೇಶಿಸಿ ನಟಿಸಿದ್ದಾರೆ.

ಕೃತಿ: ಮೌನದ ಚಿಪ್ಪಿನೊಳಗೆ

More About Author