Poem

ದ್ರೋಣರ ಪ್ರಯೋಗಶಾಲೆ

ಆ ವೃಕ್ಷ ನೋಡಿ ವಿದ್ಯಾರ್ಥಿಗಳೇ
ಏನೂ ಗೋಚರಿಸುತ್ತಿದೆ ನಿಮಗೆ
ನಿಮ್ಮ ಅಕ್ಷಿಗಳಿಗೆ
ಮುಂದೆ ಕರೆತಂದು ಮೌಖಿಕ ಪರೀಕ್ಷೆ ಶುರು

ನೋಟ ಹೊರಗಿನದೆ, ಒಳಗಿನದೇ
ಒಳ ಹೊರವುಗಳ ಒಟ್ಟು ಫಲವೇ
ದೃಷ್ಟಿ ಮಂದವೋ, ತೀಕ್ಷಣವೋ
ಅನುಭವದ ನದಿಯ ಮೇಲೆ, ಯೋಚನೆಯ ನಾವೆ

ಹೇಳಿ ಯಾರ್‍ಯಾರಿಗೆ ಏನೇನೂ ಕಾಣಿಸುತ್ತದೆ ಆ ವೃಕ್ಷದಲ್ಲಿ
ನಿಮ್ಮ ಅಕ್ಷಿಗಳಿಗೆ
ಈ ಕಾಣುವ ನೋಟದೆದುರು

ಅವನಿಗೆ ಕಂಡದ್ದು ವೃಕ್ಷ
ಇವನಿಗೆ ಕಂಡದ್ದು ನೀಲಾಕಾಶ
ಅವನಿಗೆ ಕಂಡದ್ದು ಎಲೆಗುಚ್ಛ
ಇವನಿಗೆ ಕಂಡದ್ದು ಯಥೇಚ್ಛ ಕಾಂಡ
ಬರೀ ಟಿಸಿಲು, ಒಂದು ರೆಂಬೆ, ಒಂದು ಹಕ್ಕಿ
ಅದರ ಗರಿ ಹಗುರವಾಡಲು

ಬೆರಳುಗಳಿಗೆ ಅಂಟ ಬಲ್ಲ ಬಣ್ಣ
ಪುಟ್ಟ ಕೊಂಡಿ ಕಾಲು, ಕೊರಳು
ಹೊರಳುವ ಪುಟ್ಟ ರೆಪ್ಪೆ, ಛಾಪೆ
ಕಣ್ಣುಗಳು ಬರೀ ಕಣ್ಣು ಮಿಂಚುವ ಕಣ್ಣು
ಅವನಿಗೆ ಇದು ಕಂಡಿತು, ಅವನಿಗೆ ಅದು ಕಂಡಿತು
ತರಾವರಿ ಕಂಡ ನೋಟ

ಪಾರ್ಥನನ್ನು ಸೇರಿ
ಹಕ್ಕಿಯೊಳಗಿನ ಜೀವ ಯಾರ ಕಣ್ಣಿಗೂ ಕಾಣದೇ ಹೋಯಿತು.
ಜೀವ ಯಾರಿಗೂ ಕಾಣದೇ ಹೋಯಿತು.

-ವಾಸುದೇವ ನಾಡಿಗ್

ವಿಡಿಯೋ

ವಾಸುದೇವ ನಾಡಿಗ್

ವಾಸುದೇವ ನಾಡಿಗ್ ಮೂಲತಃ ಶಿವಮೊಗ್ಗದ ಭದ್ರಾವತಿಯವರು. ಕುವೆಂಪು ವಿವಿಯಿಂದ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ತುಮಕೂರು ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯ ದಲಿ ಬಿ. ಎಡ್. ಪದವಿ ಪಡೆದಿದ್ದಾರೆ. 20 ವರ್ಷಗಳಿಂದ ಜವಾಹರ ನವೋದಯ ವಿದ್ಯಾಲಯದಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯದ ಮಧ್ಯೆ, ಭವದ ಹಕ್ಕಿ, ನಿನ್ನ ಧ್ಯಾನದ ಹಣತೆ, ವಿರಕ್ತರ ಬಟ್ಟೆಗಳು, ಅಲೆ ತಾಕಿದರೆ ದಡ, ಅವನ ಕರವಸ್ತ್ರ ಅನುಕ್ತ ( ಈವರೆಗಿನ ಕವಿತೆಗಳು) ಇವರ ಪ್ರಕಟಿತ ಕವನ ಸಂಕಲನಗಳು. ಬೇಂದ್ರೆ ಅಡಿಗ, ಕಡೆಂಗೋಡ್ಲು ಶಂಕರಭಟ್ಟ, ಮುದ್ದಣ, ಜಿ ಎಸ್ ಎಸ್ ಕಾವ್ಯ ಪ್ರಶಸ್ತಿ ಇವರಿಗೆ ದೊರೆತಿವೆ.

More About Author