ಬಪ್ಪಿಯ ಕುಡಿ ಇವಾಂಕ ಮೊದಲ ಸೂರ್ಯ
ಕಿರಣಗಳ ಅಪ್ಪಿಕೊಂಡ ದಿನ
ಬಾಶೋ ಸ್ಪೇಸಿನಲಿ ಕೂತು
ನೋಡುತ್ತಲೇ ಇದ್ದಾನೆ
ಕಪ್ಪೆಯೊಂದು ಪ್ರಪಂಚವ
ನೂಕಿಕೊಂಡು ಹೋಗುತ್ತಿರುವುದ
ಅಥವಾ
ಸ್ಪೇಸೇ ಕೂರಿಸಿಕೊಂಡು ಕಪ್ಪೆಯ
ನೂಕುತ್ತಿದೆ ಪ್ರಪಂಚವ
ಅಪರಿಮಿತ ಸದ್ದಿನ ಜಗದಲಿ
ಅದರ ಪುಳಕ್
ಧ್ಯಾನ
ಅದರೂಳಗೆ ಬಾಶೋ
ನದಿ ದಡದಲ್ಲಿ ಕೂತು ಮೀನು ಹಿಡಿಯುತ್ತಿದ್ದಾನೆ
ಬರೀಗೈಯಲ್ಲಿ
ಅವನು ಬರೆದ ಕವಿತೆ ಮತ್ತು ಕಾಗದ
ಮಾರ್ಕ್ವೇಜ್ ನ ಪಾತ್ರಗಳಂತೆ
ಹಾರುತ್ತಿವೆ ಸ್ಪೇಸಿನಾಚೆ
ಇದನೆಲ್ಲ ಝೆನ್ ಗುರುವೊಬ್ಬ
ಮಾರುಕಟ್ಟೆಯಿಂದ ಕೊಂಡು ತಂದ ಹೊಸ ಪಿಂಗಾಣಿ
ಕಪ್ಪು ಮತ್ತು ಸಾಸರನ್ನು
ಒಡೆದು
ಮತ್ತೆ ಜೋಡಿಸಿ
ಅದರೊಳಗೆ ಟೀ ಸುರಿದುಕೊಂಡು
ಕುಡಿಯುತ್ತಿದ್ದಾನೆ ನೋಡುತ್ತ
ಕಲಾಕೃತಿ: ಡಾ. ಅಶೋಕ ಶೆಟಕಾರ
ಎಚ್.ಆರ್. ರಮೇಶ
ಹೊಸ ತಲೆಮಾರಿನ ಪ್ರತಿಭಾವಂತ ಕವಿ ಎಚ್.ಆರ್. ರಮೇಶ್ ಮೂಲತಃ ಚಿತ್ರದುರ್ಗದ ಬಳಿಯ ಹರಿಯಬ್ಬೆಯವರು. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ರಮೇಶ್ ಕೆಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಹೊಸ ತಲೆಮಾರಿನ ವಿಮರ್ಶಕರಾಗಿಯೂ ಗುರುತಿಸಿಕೊಂಡಿರುವ ಇವರು ಸಮಕಾಲೀನ ಲೇಖಕರ ಕೃತಿಗಳ ಕುರಿತು ವಿಮರ್ಶೆಗಳನ್ನು ಬರೆಯುತ್ತಾರೆ, ಕಥೆ, ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ. ಮತ್ತೊಂದು ಕೃತಿ ‘ಅದರ ನಂತರ’ ಪ್ರಕಟವಾಗಿದೆ.
More About Author