ನಿನಗಿದು ತಿಳಿದಿಲ್ಲ ಅನಿಸಿದರೆ
ಈಗಲೀಗ ಹೇಳಿಬಿಡಲೇನು?
ನಾ ನಿನ್ನ ಮೂರನೆಯ ಕಣ್ಣು!
ನಿನ್ನ ಗತಸ್ಮೃತಿ ಮೆಲುಕುಗಳ ಶತಮಾನದಿಂದೆತ್ತಿ ಕಣ್ಣೆದುರು ಚಾಚಿಬಿಡಬಲ್ಲೆ...
ನನ್ನೆದೆಯೊಳಗೆ ಹಿಡಿದಿಟ್ಟ ಲಕ್ಷಕ್ಷಣಕೋಶದಲ್ಲಿವೆ ನಿನ್ನ ಮಸ್ತಿಷ್ಕಭಿತ್ತಿಯ
ಪ್ರತಿಬಿಂಬಗಳ ಸಾಲು ಸಾಲು..
ಗರ್ಭಚೀಲವೊಡೆದು ಹೊರಬಿದ್ದ ಶಿಶು ಅತ್ತ ಗಳಿಗೆಯ ಹಿನ್ನೆಲೆಯಲಿ ಮರೆತ ಪ್ರಸವವೇದನೆಯ ಪರಾಕಾಷ್ಠೆ!
ಮತ್ತೆ ಬೊಚ್ಚುಬಾಯಿ ತೆರೆದ ಎದೆಮೇಲಿನ ಕೂಸು,
ಮೊಲೆತೊಟ್ಟಿನ ಮಾಗ೯ವಾಗಿ ಒಡಲಮೂಲದವರೆಗೆ ಚಾಚಿ ಹರಡಿದ ಅಂತ:ಕರಣ ಸೆಲೆಗೆ ಪ್ರತಿಫಲಿಸಿದ ನಿನ್ನ ಮುಗುಳ್ನಗೆ ನಿನ್ನೊಳಡಗಿರುವ ನೆನಪಿನಷ್ಟೇ ಸಿಹಿ ನನಗೂ...
ನೇವರಿಸಿ ನೆತ್ತಿ ಮೃದುಮುದ್ದೆಯ, ಹೂಪಕಳೆಯಂತೆತ್ತಿ ಹನಿಮುತ್ತನೊತ್ತುತ್ತ ಪತಿ
ನಿನ್ನೆಡೆಗೆ ಬೀರಿದ ನೋಟ...
ನಿನ್ನ ಪ್ರತಿನೋಟದೊಳಗಣ
ಆ ಸಿಹಿಸ್ಮೃತಿಗಳ ಛಾಯೆ ನನ್ನಲ್ಲಿರದೆ
ಇನ್ನೆಲ್ಲಿದೆ ಹೇಳು? ನಿಮ್ಮ ಮಧುರಕ್ಷಣಗಳ ಪ್ರತ್ಯಕ್ಷ ಸಾಕ್ಷಿ ನಾನಲ್ಲದೆ ಇನ್ನಾರು?
ಅಪ್ಪನ ತೋಳಲ್ಲಿ, ಅಮ್ಮನ ಮಡಿಲಲ್ಲಿ ಕೊನೆಗಜ್ಜ ಪಿಜ್ಜನ ತೊಡೆಮೇಲೆ ಕೂತು ಕೇಳಿದ
ಮುಗ್ಧ ಪ್ರಶ್ನಾವಳಿ...
ಹಿಂಡಿ ಹೂಕೆನ್ನೆ ಮತ್ತೆ ಮುತ್ತಿಕ್ಕಿ ಕಿವಿಗೆ ಪಿಸುಗುಟ್ಟಿ ನಿನಗುತ್ತರಿಸಿದ ಕುಚೇಷ್ಟೆ ಪದ ಅರಳಿಸಿದ ನಿನ್ನ ಕಣ್ಣುಗಳ ಆ ಹೊಳಪೆಲ್ಲಿ ಬಂದಿ ಗೊತ್ತೇ?
ಇಗೋ ಇಲ್ಲಿ ನನ್ನಲ್ಲಿ!
ಎದೆಗವುಚಿ ಹೊತ್ತಿಗೆ
ನಡೆದು ಭಿರಿಭಿರಿ,
ಕಥನಗಳ ಒಡಲುಹೊಕ್ಕು ಹೊರಬಂದು ಪ್ರಶ್ನಾಪ್ರಶ್ನೆಗಳ ಲೋಕಭೇದಿಸಿ ಮಥಿಸಿ, ಮನ್ನಿಸಿ, ಮರ್ದಿಸಿ ಕಡೆದು, ಹೊರಬರುವ ತಥ್ಯಗಳ ಮಿದುಳ ಕೋಶದೊಳಿಟ್ಟು ಕೊನೆಗೊಮ್ಮೆ ಹೊರಚೆಲ್ಲಿ ಹಗುರಾಗಿ ಕೈಚಾಚಿ
ಹಿಗ್ಗಿ ನಕ್ಕ ನಿನ್ನ ಗಳಿಗೆಗಳು
ಇಲ್ಲಿ ನನ್ನಲ್ಲಿ....
ಬೇಕೇನು ಮತ್ತೆ?
ನನಗಿಲ್ಲ ನಿಮ್ಮ ಜಗವ್ಯಾಪಾರಗಳ ನಂಟು, ನನಗಿಲ್ಲ ಕವಚದಡಿಯ ಪದರಗಳ ಅರಿವು.
ಆದರೂ,
ನಂಬಲಾಗದ ನಂಬಲೊಲ್ಲದ ಸತ್ಯದಶ೯ನ ಕ್ಷಣಗಳ
ಘೋರಕ್ಕೆ ನಿನ್ನ ಕಂದಿದ
ಕಣ್ಣಿನಿಂದಿಳಿದ ರಕ್ತವೂ
ನನ್ನ ನಡುಗಿಸಿತೆನ್ನಲಾರೆ...
ನಾ ಬರಿಯ ಕಾಲಚಕ್ರಯಂತ್ರ ಹಚ್ಚಿಕೊಂಡಿರುವ
ಅಂಗೈ ಕನ್ನಡಿ!!
ಇರುವುದನ ಇರುವಂತೆ ಹೇಳುವ
ಅನಿವಾರ್ಯಜನಿತ ಕಣ್ಣು!
ನಿನ್ನ ಬದುಕಿನ ಹಾಳೆಗಳ ತುಂಬ ಮೂಡಿರುವ ಹೆಜ್ಜೆಗಳ ಬಿಂಬ ನಾನು!
ಹಿಂದಿರುಗಿ ನೋಡೊಮ್ಮೆ
ಎಲ್ಲ ಕಂಡು ಕರಗಿಸಿಕೊಳ್ಳುತ್ತ ಮುಗುಳ್ನಗುವೆ ನಾ!
-ಜಯಶ್ರೀ ದೇಶಪಾಂಡೆ
ಜಯಶ್ರೀ ದೇಶಪಾಂಡೆ
ಲೇಖಕಿ ಜಯಶ್ರೀ ದೇಶಪಾಂಡೆ ಅವರು ಮೂಲತಃ ವಿಜಯಪುರದವರು. ಮನಃಶಾಸ್ತ್ರ ಹಾಗೂ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವೀಧರರು. ದೇಶ ಸುತ್ತುವುದರ ಜೊತೆಗೆ ಅಲ್ಲಿಯ ಜನ, ಭಾಷೆ, ಆಹಾರ, ಸಂಸ್ಕೃತಿಯನ್ನು ತಮ್ಮ ಲೇಖನಗಳ ಮೂಲಕ ಪರಿಚಯಿಸುತ್ತಿದ್ದಾರೆ.
ಕೃತಿಗಳು : ಪದ್ಮಿನಿ, ಮೂರನೆಯ ಹೆಜ್ಜೆ, ರೇಖೆಗಳ ನಡುವೆ, ಸ್ಥವಿರ ಜಂಗಮಗಳಾಚೆ ಹಾಗೂ ಉತ್ತರಾರ್ಧ (ಕಥಾ ಸಂಕಲನಗಳು), ಯತ್ಕಿಂಚಿತ್ (ಕವನ ಸಂಕಲನ),ಮಾಯಿ ಕೆಂದಾಯಿ ಸ್ಮೃತಿ ಲಹರಿ (ಲಲಿತ ಪ್ರಬಂಧ ಸಂಕಲನ) ಹೌದದ್ದು ಅಲ್ಲ ಅಲ್ಲದ್ದು ಹೌದು (ಹಾಸ್ಯಲೇಖನ ಸಂಕಲನ), ಕಾಲಿಂದಿ (ಮಯೂರ), ಕೆಂಪು ಹಳದಿ ಹಸಿರು (ತರಂಗ), ದೂರ ದಾರಿಯ ತೀರ (ತರಂಗ) , ಬೇವು (ವಿಜಯ ಕರ್ನಾಟಕ), ಚಕ್ರವಾತ (ನೂತನ), ಸರಸ್ವತಿ ಕಾಯದ ದಿನವಿಲ್ಲ. (ಉದಯವಾಣಿ) ಇವು ಧಾರಾವಾಹಿಯಾಗಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿತ ಕಾದಂಬರಿಗಳು.:ಪ್ರಥಮ್ ಬುಕ್ಸ್ ಸಂಸ್ಥೆಗಾಗಿ ಸ್ವಂತ ಕಥೆಗಳಲ್ಲದೆ ಮರಾಠೀ ಮತ್ತು ಇಂಗ್ಲಿಷ್ಶ್ ಭಾಷೆಗಳಿಂದ ಕನ್ನಡಕ್ಕೆ ಭಾವಾನುವಾದ ಮಾಡಿದ ನಲವತ್ತರಷ್ಟು ಪುಸ್ತಕಗಳು ಪ್ರಕಟವಾಗಿವೆ.
ಪ್ರಶಸ್ತಿ-ಗೌರವ: ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ , ದೂರದರ್ಶನ, ಉದಯ ಟಿವಿ ವಾಹಿನಿಗಳಲ್ಲಿ ಸಂದರ್ಶನ, *ಅಕ್ಷರ ಪ್ರತಿಷ್ಠಾನದ ಮಕ್ಕಳ "ಕಲಿಕಾ ಏಣಿ" ಯೋಜನೆಯ ಮಾರ್ಗದರ್ಶಕರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ. (ಯತ್ಕಿಂಚಿತ್- ಕವನ ಸಂಕಲನಕ್ಕೆ ), ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ 'ಸುಧಾ ಮೂರ್ತಿ ತ್ರಿವೇಣಿ ಸಾಹಿತ್ಯ ಪ್ರಶಸ್ತಿ' (ಸ್ಥವಿರ ಜಂಗಮಗಳಾಚೆ' ಕಥಾ ಸಂಕಲನಕ್ಕೆ), ಅತ್ತಿಮಬ್ಬೆ ಪ್ರಶಸ್ತಿ. (ಹೌದದ್ದು ಅಲ್ಲ ಅಲ್ಲದ್ದು ಹೌದು- ಲಲಿತ ಪ್ರಬಂಧ ಸಂಕಲನಕ್ಕೆ), ಗೋರೂರು ಪ್ರತಿಷ್ಠಾನದ 'ಶ್ರೇಷ್ಠ ಪುಸ್ತಕ' ಪ್ರಶಸ್ತಿ.( ಮೂರನೆಯ ಹೆಜ್ಜೆ- -ಕಥಾಸಂಕಲನಕ್ಕೆ), ರಾಜ್ಯಮಟ್ಟದ ಕಾದಂಬರಿ ವಿಮರ್ಶಾ ಪ್ರಶಸ್ತಿ. ಅತ್ತಿಮಬ್ಬೆ ಪ್ರತಿಷ್ಠಾನದಿಂದ. (ಬೆಳಗಾಂವಕರ್ ನಾಸು- ಕಾದಂಬರಿ ಸುನಂದಾ - ವಿಮರ್ಶೆ), ದಿ. ಸಿ ಎನ್ ಜಯಲಕ್ಷ್ಮೀದೇವಿ (ಕಥಾಪ್ರಶಸ್ತಿ)
More About Author