ನೋಟು ರದ್ದತಿಯನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎನ್ನುವ ಕುರಿತಂತೆ ದೇಶದಲ್ಲಿ ಇನ್ನೂ ಗೊಂದಲಗಳು ಇವೆ. ಆರಂಭದಲ್ಲಿ ಕಪ್ಪು ಹಣ ನಿವಾರಣೆಗಾಗಿ ಈ ಕ್ರಮ ಎಂದಿರುವ ಸರಕಾರ, ಬಳಿಕ ಭಯೋತ್ಪಾದನೆ ಮಟ್ಟ ಹಾಕಲು ಎಂದಿತು. ಇದಾದ ಬಳಿಕ ಕಾಶ್ಮೀರದ ದಂಗೆಯನ್ನು ದಮನಿಸಲು ಎಂದಿತು. ಕೆಲ ಸಮಯದ ಬಳಿಕ ನೋಟು ರಹಿತ ವ್ಯವಹಾರವನ್ನು ಜಾರಿಗೊಳಿಸಲು ಈ ಮಹತ್ತರ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಿತು. ಒಟ್ಟಿನಲ್ಲಿ, ಸರಕಾರ ಇಂದಿಗೂ ನೋಟು ನಿಷೇಧವನ್ನು ಯಾಕಾಗಿ ಮಾಡಲಾಯಿತು ಮತ್ತು ಅದರಿಂದ ದೇಶದ ಮೇಲಾದ ಒಳಿತುಗಳು ಏನು ಎನ್ನುವುದನ್ನು ವಿವರಿಸಲು ಸಂಪೂರ್ಣವಾಗಿ ವಿಫಲವಾಗಿದೆ. ಇದೇ ಸಂದರ್ಭದಲ್ಲಿ ಈ ವಿಫಲತೆಯನ್ನು ಮಾಧ್ಯಮಗಳ ಮೂಲಕ ಸರಕಾರ ಮುಚ್ಚಿ ಹಾಕುವಲ್ಲಿ ಯಶಸ್ವಿಯಾಗಿದೆ. ನೋಟು ರದ್ದತಿಯ ಹಿಂದಿರುವವರು ಯಾರು, ಇದರಿಂದ ಯಾರಿಗೆ ಲಾಭವಾಯಿತು, ಯಾರಿಗೆ ನಷ್ಟವಾಯಿತು ಎನ್ನುವುದನ್ನು ಈ ಕೃತಿಯೂ ವಿವರಿಸುತ್ತದೆ. ಯಾವುದೇ ಪೂರ್ವಸಿದ್ಧತೆ ಮತ್ತು ಯೋಜನೆಯಿಲ್ಲದ ಈ ಕ್ರಮದಿಂದಾಗಿ ಆದ ಅನಾಹುತಗಳನ್ನು ಮಂಡಿಸುತ್ತಾರೆ. ಗ್ರಾಮೀಣ ಪ್ರದೇಶಗಳ ಕೃಷಿ ಕಾರ್ಮಿಕರಿಗೆ ಆದ ಹಿನ್ನಡೆಯನ್ನೂ ಅವರು ಪ್ರಸ್ತಾಪಿಸುತ್ತಾರೆ. ಕಪ್ಪು ಹಣವನ್ನು ಮಟ್ಟ ಹಾಕುವ ಹೆಸರಿನಲ್ಲಿ ಮಧ್ಯಮ ವರ್ಗದ ಜನರ ಆರ್ಥಿಕ ಬದುಕಿನ ಮೇಲೆ ಬರೆ ಎಳೆಯಲಾಯಿತು ಎಂದು ಅವರು ಅಭಿಪ್ರಾಯ ಪಡುತ್ತಾರೆ. ನೋಟು ನಿಷೇಧದ ಹಿಂದೆ ಇರುವ ರಾಜಕೀಯ ಕಾರಣ ಮತ್ತು ಕಾರ್ಪೊರೇಟ್ ವಲಯದ ಹಿತಾಸಕ್ತಿಯನ್ನು ಅವರು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2025 Book Brahma Private Limited.