ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಪ್ರೊ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಕನ್ನಡದ ಜನಪ್ರಿಯ ಕವಿಗಳಲ್ಲಿ ಒಬ್ಬರು. ಮೂಲತಃ ಶಿವಮೊಗ್ಗದವರಾದ ಅವರು ಸದ್ಯ ಬೆಂಗಳೂರು ನಗರದ ನಿವಾಸಿ. ಅವರ ತಂದೆ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. ಅವರ ಪೂರ್ಣ ಹೆಸರು ನೈಲಾಡಿ ಶಿವರಾಮ ಲಕ್ಷ್ಮೀನಾರಾಯಣ ಭಟ್ಟ. ಅವರು ಕವಿ ಮಾತ್ರವಲ್ಲದೆ ವಿಮರ್ಶಕ ಹಾಗೂ ವಾಗ್ಮಿ. ಅವರ ಭಾವಗೀತೆಗಳು ಕ್ಯಾಸೆಟ್‌ಗಳ ಮೂಲಕಜನಪ್ರಿಯಗೊಂಡಿವೆ.
ವೃತ್ತ, ಸುಳಿ, ನಿನ್ನೆಗೆ ನನ್ನ ಮಾತು, ದೀಪಿಕಾ ಮತ್ತು ಬಾರೋ ವಸಂತ (ಕವನ ಸಂಗ್ರಹಗಳು), ಹೊರಳು ದಾರಿಯಲ್ಲಿ ಕಾವ್ಯ (ವಿಮರ್ಶೆ), ಜಗನ್ನಾಥ ವಿಜಯ, ಮುದ್ರಾ ಮಂಜೂಷ, ಕರ್ಣ, ಕುಂತಿ, ಕನ್ನಡ ಮಾತು (ಬಾಲ, ಸಾಹಿತ್ಯ), ಠಾಕೂರರ ಎರಡು ನಾಟಕಗಳು, ಅನನ್ಯ (ವಿಮರ್ಶಾ ಸಂಕಲನ) ಅವರ ಪ್ರಕಟಿತ ಕೃತಿಗಳು. ಅವರು ಇಂಗ್ಲೀಷಿನಲ್ಲಿ ಹಲವು ಕೃತಿ ರಚಿಸಿದ್ದಾರೆ. 'ಹೊರಳು ದಾರಿಯಲ್ಲಿ ಕಾವ್ಯ' ವಿಮರ್ಶಾ ಗ್ರಂಥಕ್ಕೆ ಹಾಗೂ 'ಚಿನ್ನದಹಕ್ಕಿ' (ಅನುವಾದ 1990)ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ (1974) ಬಹುಮಾನ ದೊರೆತಿವೆ.