ಲೇಖಕ ಮಲ್ಲಿಕಾರ್ಜುನ ಹಿರೇಮಠ ಅವರದ್ದು ವಿವೇಚನಾಪೂರ್ಣ ಸಾಹಿತ್ಯ ಮತ್ತು ವ್ಯಕ್ತಿತ್ವ. ಹುಟ್ಟಿದ್ದು ಕೊಪ್ಪಳ ಜಿಲ್ಲೆಯ ಬಿಸರಹಳ್ಳಿ 1946 ಜೂನ್ 05ರಂದು. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸದ್ಯ ನಿವೃತ್ತರಾಗಿದ್ದಾರೆ. 'ಆಕ್ವೇರಿಯಂ ಮೀನು' ಅವರ ಮೊದಲ ಕವನ ಸಂಕಲನ 1974ರಲ್ಲಿ ಪ್ರಕಟವಾಯಿತು.
‘ಅಮೀನಪುರದ ಸಂತೆ, ಜ್ಞಾನೇಶ್ವರನ ನಾಡಿನಲ್ಲಿ (ಪ್ರವಾಸ ಕಥನ), ಅಂತರ್ಗತ (ವಿಮರ್ಶೆ), ಅಭಿಮುಖ (ವಿಮರ್ಶೆ), ಹವನ (ಕಾದಂಬರಿ), 'ಮೊಲೆವಾಲು ನಂಜಾಗಿ' (ಕತಾ ಸಂಕಲನ), ಮೂರುಸಂಜೆ ಮುಂದ ಧಾರವಾಡ (ಲಲಿತ ಪ್ರಬಂಧಗಳು), ಗಿರಡ್ಡಿ ಗೋವಿಂದರಾಜ : ವ್ಯಕ್ತಿ-ಆಭಿವ್ಯಕ್ತಿ (ವಿಮರ್ಶೆ)’ ಅವರ ಪ್ರಮುಖ ಕೃತಿಗಳು.
ಅವರ ಸಾಹಿತ್ಯ ಸೇವೆಗೆ ‘ಕನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ, ಮದ್ರಾಸ್ ನಲ್ಲಿ 'ಕನ್ನಡ ಸಾಹಿತ್ಯಕಾರ' ಪ್ರಶಸ್ತಿ, ಹಾವೇರಿಯ ಹಾವನೂರು ಪ್ರತಿಷ್ಠಾನ ಪ್ರಶಸ್ತಿ, ಸಮೀರವಾಡಿ ಪ್ರಶಸ್ತಿ, ಸಂಗಮ ಗೌರವ ಪ್ರಶಸ್ತಿ, ನೀರಾವರಿ ಟ್ರಸ್ಟ್ ಪ್ರಶಸ್ತಿ ಹಾಗೂ ಅವರ ‘ಹವನ' ಕಾದಂಬರಿಗೆ ಕಸಾಪದಿಂದ ಮುದ್ದಣ ದತ್ತಿನಿಧಿ ಪ್ರಶಸ್ತಿ, (ವರ್ಷದ ಅತ್ಯುತ್ತಮ ಗದ್ಯಕೃತಿ) ಮುಂತಾದ ಪ್ರಶಸ್ತಿಗಳು ಲಭಿಸಿವೆ.
'ಲಕ್ಕವ್ವನ ಮಂದಿ' ಮತ್ತು 'ಅಮೀನಪುರದ ಸಂತೆ' ಕಥೆಗಳು ಆಕಾಶವಾಣಿ ಧಾರವಾಡ ಹಾಗೂ ದೂರದರ್ಶನ (ಚಂದನ) ದಲ್ಲಿ ನಾಟಕಗಳಾಗಿ ಪ್ರಸಾರಗೊಂಡಿವೆ.