About the Author

ಜಾನಪದ ತಜ್ಞ, ಸಾಹಿತಿ, ದಕ್ಷ ಆಡಳಿತಗಾರರೆನಿಸಿದ್ದ ನಾಗೇಗೌಡರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನ ಹಳ್ಳಿಯ ‘ದೊಡ್ಡಮನೆ’ ಕುಟುಂಬದಲ್ಲಿ. ತಂದೆ ಲಿಂಗೇಗೌಡ, ತಾಯಿ ಹುಚ್ಚಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಅಳೀಸಂದ್ರ ಹಾಗೂ ನಾಗತಿಹಳ್ಳಿಯಲ್ಲಿ ಮುಗಿಸಿದ ಅವರು ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚನ್ನರಾಯಪಟ್ಟಣದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರಿನಲ್ಲಿ ಇಂಟರ್ ಮೀಡಿಯೆಟ್‌, ಮೈಸೂರಿನಲ್ಲಿ ಬಿ.ಎಸ್ಸಿ, ಮತ್ತು ಪೂನದಲ್ಲಿ ಎಲ್‌.ಎಲ್‌.ಬಿ ಪದವಿ ಪಡೆದರು. ಮುನ್ಸೀಫ್ ಕೋರ್ಟಿನಲ್ಲಿ ಹೆಡ್ ಮುನ್ಷಿಯಾಗಿ ವೃತ್ತಿ ಆರಂಭಿಸಿದ್ದು ನರಸಿಂಹರಾಜಪುರದಲ್ಲಿ.  ಆನಂತರ ಮೈಸೂರು ಸಿವಿಲ್‌ ಸರ್ವೀಸ್‌ನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರೆವಿನ್ಯೂ ಇಲಾಖೆಯಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಆಯ್ಕೆಯಾದರು. 

ಅಲ್ಲದೆ 1960ರಲ್ಲಿ ಐ.ಎ.ಎಸ್‌. ಅಧಿಕಾರಿಯಾಗಿ ಆಯ್ಕೆಯಾಗಿ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು, ತದನಂತರದಲ್ಲಿ 1969ರಲ್ಲಿ ಆಯುಕ್ತರಾಗಿ ನೇಮಕಗೊಂಡರು. 1973ರಲ್ಲಿ ರಾಜ್ಯದ ಲೋಕಸೇವಾ ಆಯೋಗದ ಸದಸ್ಯರಾಗಿ ನೇಮಕಗೊಂಡು ನಾಗೇಗೌಡರು 1979ರಲ್ಲಿ ನಿವೃತ್ತಿ ಪಡೆದರು. ಅಧಿಕಾರಿಯಾಗಿ ರಾಜ್ಯದ ನಾನಾ ಭಾಗಗಳಲ್ಲಿ ದಕ್ಷ ಆಡಳಿತ ನಡೆಸಿದ ಅವರು ವೃತ್ತಿ ದಿನಗಳಿಂದಲೂ ಗ್ರಾಮೀಣ ಬದುಕಿನ ವಸ್ತುಗಳ ಸಂಗ್ರಹ ಹಾಗೂ ಜಾನಪದ ಕಲೆಯ ಬಗ್ಗೆ ಆಳವಾದ ಪ್ರೀತಿ ಬೆಳೆಸಿಕೊಂಡಿದ್ದರು. 

ಹೋದೆಡೆಯಲ್ಲೆಲ್ಲಾ ತಾವು ಸಂಗ್ರಹಿಸಿದ ವಸ್ತುಗಳ ಪ್ರದರ್ಶನಕ್ಕೊಂದು ಸ್ಥಳ ಕಲ್ಪಿಸಿಕೊಂಡು ಮಾರ್ಚ್ 21ರಂದು 1979ರಲ್ಲಿ ಕರ್ನಾಟಕ ಜಾನಪದ ಟ್ರಸ್ಟ್‌’ ಸ್ಥಾಪಿಸಿದರು. ಇವರು ನಿವೃತ್ತರಾದಾಗ ಬೆಂಗಳೂರಿನಲ್ಲಿ ಇವರ ಅಭಿಮಾನಿಗಳು ಅಭಿನಂದನ ಸಮಾರಂಭವನ್ನೇರ್ಪಡಿಸಿ ಅರ್ಪಿಸಿದ ಒಂದು ಲಕ್ಷದ ಹದಿನೈದು ಸಾವಿರ ರೂಪಾಯಿಗಳನ್ನು ಮೂಲಧನವನ್ನಾಗಿಸಿಕೊಂಡು ರಾಮನಗರದ ಬಳಿ 15 ಎಕರೆ ಪ್ರದೇಶದಲ್ಲಿ ಸ್ಥಾಪಿಸಿದ್ದೇ ‘ಜಾನಪದ ಟ್ರಸ್ಟ್‌’. ಈಗ ಅದು ಕರ್ನಾಟಕ ಜಾನಪದ ಪರಿಷತ್‌ ಎನಿಸಿ ಇದೊಂದು ಜಾನಪದ ಲೋಕವೆನಿಸಿದೆ. ಜನಪದ ಗೀತೆಗಳ ಧ್ವನಿಮುದ್ರಣ, ವರ್ಣಪಾರದರ್ಶಿಕೆಗಳ ತಯಾರಿಕೆ, ಮೂಲಗಾಯಕರ ಧ್ವನಿ ಶೇಖರಣೆ, ಜಾನಪದ ಮಹಾವಿದ್ಯಾಲಯ ಸ್ಥಾಪಿಸಿ, ಡಿಪ್ಲೊಮ, ಸರ್ಟಿಫಿಕೇಟ್‌ ಕೋರ್ಸ್‌‌ಗಳು, ಯಕ್ಷಗಾನ ತರಬೇತಿ, ವಸ್ತು ಸಂಗ್ರಹಣೆ, ಸಾಕ್ಷ್ಯಚಿತ್ರ ನಿರ್ಮಾಣ ಮುಂತಾದ ಜಾನಪದ ಸಂಬಂಧಿ ಕಾರ್ಯಕ್ರಮಗಳಿಗೊಂದು ಕೇಂದ್ರಸ್ಥಾನ ಜಾನಪದಲೋಕ. ಅವರಿಗಿದ್ದ ಒಲವು ಬರೇ ಜಾನಪದ ಲೋಕವೊಂದೇ ಅಲ್ಲದೆ ಪ್ರವಾಸ ಸಾಹಿತ್ಯ, ಕಥೆ, ಕಾದಂಬರಿ, ಜೀವನ ಚರಿತ್ರೆ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕ್ರಿ.ಪೂ. ಐದನೆಯ ಶತಮಾನದಿಂದ ಹದಿನೆಂಟನೆಯ ಶತಮಾನದವರೆವಿಗೂ ಮತ ಪ್ರಚಾರ, ವ್ಯಾಪಾರ ವಾಣಿಜ್ಯೋದ್ಯಮ ಅಥವಾ ಪ್ರವಾಸಾನಂದಕ್ಕಾಗಿ ಭಾರತಕ್ಕೆ ಭೇಟಿನೀಡಿದ ಪ್ರವಾಸಿಗಳ ಬಗ್ಗೆ ಮಾಹಿತಿ ಶೇಖರಿಸಿ ಇವರು ಬರೆದ ‘ಪ್ರವಾಸಿ ಕಂಡ ಇಂಡಿಯಾ’ ಎಂಟು ಸಂಪುಟಗಳಲ್ಲಿ ಪ್ರಕಟಗೊಂಡಿದೆ.

ಇದಲ್ಲದೆ ‘ಮಾರ್ಕೊಪೋಲೋ ಪ್ರವಾಸ ಕಥನ’, ‘ನಾ ಕಂಡ ಪ್ರಪಂಚ’, ಮುಂತಾದ ಪ್ರವಾಸ ಕಥನಗಳೂ ಪ್ರಕಟಗೊಂಡಿವೆ. ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಗಳಿಸಿಕೊಟ್ಟ ಕೃತಿ ಎಂದರೆ ‘ದೊಡ್ಡಮನೆ’ ಕಾದಂಬರಿ. ಇವರ ಮತ್ತೆರಡು ಕಾದಂಬರಿಗಳು ‘ಸೊನ್ನೆಯಿಂದ ಸೊನ್ನೆಗೆ’ ಮತ್ತು ‘ಭೂಮಿಗೆ ಬಂದ ಗಂಧರ್ವ’. ಅವರ ಹಳ್ಳಿಯ ಚಿತ್ರಗಳ ಕೃತಿ ‘ನನ್ನೂರು’, ‘ಬೆಟ್ಟದಿಂದ ಬಟ್ಟಲಿಗೆ’ – ಕಾಫಿಯ ಕಥೆ, ವಿಶಿಷ್ಟ ಕೃತಿ ಜಾನಪದ ಸಾಹಿತ್ಯಕ್ಕೆ ಸಂಬಂಧಿಸಿದಂತೆ ‘ಸೋಬಾನೆ ಚಿಕ್ಕಮ್ಮನ ಪದಗಳು’, ‘ಕರ್ನಾಟಕದ ಜಾನಪದ ಕಥೆಗಳು’, ‘ಪದವವೆ ನಮ್ಮ ಎದೆಯಲ್ಲಿ’, ‘ಮೈಲಾರ ಲಿಂಗನ ಕಾವ್ಯ’, ‘ಹೆಳವರು ಮತ್ತು ಅವರ ಕಾವ್ಯಗಳು’, ‘ಹಾಡಾನ ಬನ್ನಿ ದನಿ ಎತ್ತಿ’, ಕನ್ನಡ ಜಾನಪದಕೋಶ ಸೇರಿದಂತೆ ಹಲವಾರು ಕೃತಿಗಳು ಪ್ರಕಟವಾಗಿವೆ. 

ಜೊತೆಗೆ ಸರೋಜಿನಿ ದೇವಿ ಮತ್ತು ಮಲೆನಾಡ ವಾಲ್ಮೀಕಿ (ಕುವೆಂಪು) ಅವರ ಜೀವನ ಚರಿತ್ರೆಯಲ್ಲದೆ ತಮ್ಮದೇ ಆತ್ಮಕಥೆ ‘ಜೀವನಯಾತ್ರೆ’, ‘ವಿದೇಶಯಾತ್ರೆ’, ‘ಚುನಾವಣಾಯಾತ್ರೆ’, ‘ಜಾನಪದಯಾತ್ರೆ’ ಎಂಬ ನಾಲ್ಕು ಭಾಗಗಳಲ್ಲಿ ಬರೆದ ಕೃತಿಗಳೂ ಸೇರಿ ಒಟ್ಟು ಮೂವತ್ತಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ಹಿತೈಷಿಗಳು ಅರ್ಪಿಸಿದ ಗೌರವ ಗ್ರಂಥ ‘ನಾಗವಲ್ಲಿ’ (1979). ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಾರಂಭವಾದಾಗ ಪ್ರಥಮ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು, ಮತ್ತು 1995ರಲ್ಲಿ ಮುಧೋಳದಲ್ಲಿ ನಡೆದ 64ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ‘ನನ್ನೂರು’, , ವೆರಿಯರ್ ಎಲ್ವಿನ್‌ರ ‘ಗಿರಿಜನ ಪ್ರಪಂಚ’, ‘ಸೋಬಾನೆ ಚಿಕ್ಕಮ್ಮನ ಪದಗಳು’, ‘ಪದವವೆನಮ್ಮ ಎದೆಯಲ್ಲಿ’, ‘ನಾ ಕಂಡ ಪ್ರಪಂಚ’, ‘ಭೂಮಿಗೆ ಬಂದ ಗಂಧರ್ವ’ (ಕಾದಂಬರಿ), ‘ಬೆಟ್ಟದಿಂದ ಬಟ್ಟಲಿಗೆ’ (ಕಾಫಿಯಕಥೆ) ಈ ಏಳು ಕೃತಿಗಳಿಗೂ ಸಾಹಿತ್ಯ ಅಕಾಡಮಿ ಬಹುಮಾನ ದೊರೆಯುವುದರ ಜೊತೆಗೆ ಸಾಹಿತ್ಯ ಅಕಾಡಮಿಯ ಪ್ರಶಸ್ತಿ (1975), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಫೆಲೋಷಿಪ್‌, ನಾಡೋಜ ಪ್ರಶಸ್ತಿ (2002), ಪಂಪ ಪ್ರಶಸ್ತಿ (2004) ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಜಾನಪದದ ಬಗ್ಗೆ ದೂರದರ್ಶನದಲ್ಲಿ ಪ್ರಸಾರವಾದ ‘ಸಿರಿಗಂಧ’ ಧಾರಾವಾಹಿಯ ರೂವಾರಿಗಳು. ಬಹುದಿನದ ಬಯಕೆಯಾಗಿದ್ದ ಜಾನಪದ ಅಕಾಡಮಿಯ ಸ್ಥಾಪನೆಗೆ ಹಗಲಿರುಳೂ ದುಡಿದು ಕರ್ನಾಟಕದ ಪರಂಪರೆಯಲ್ಲಿ ಜಾನಪದಕ್ಕೊಂದು ವಿಶಿಷ್ಟ ಸ್ಥಾನ ಗಳಿಸಿಕೊಟ್ಟ ನಾಗೇಗೌಡರು ಜಾನಪದಲೋಕದಿಂದ ಮರೆಯಾದದ್ದು 2005 ರ ಸೆಪ್ಟೆಂಬರ್ 22ರಂದು

ಎಚ್.ಎಲ್. ನಾಗೇಗೌಡ

(11 Feb 1915-10 Sep 2005)