ಪಾರ್ವತೀಶ ಹಾಗೂ ಬಿಳಿದಾಳೆ ಈಶ ಎಂಬ ಹೆಸರಿನಲ್ಲಿ ಬರೆಯುವ ಪತ್ರಕರ್ತ- ಲೇಖಕ ಪಾರ್ವತೀಶ್ ಜನಿಸಿದ್ದು 1967ರಲ್ಲಿ. ಬಾಲ್ಯ- ಪ್ರಾಥಮಿಕ ಶಿಕ್ಷಣ ಪಡೆದದ್ದು ಆನೇಕಲ್, ಮಾಲೂರು, ದೊಡ್ಡ ಬಳ್ಳಾಪುರದಲ್ಲಿ. ಬಿ.ಕಾಂ. ಪದವಿ ಪೂರ್ಣಗೊಳಿಸಿರುವ ಅವರು ಎಂ.ಎ. ಪತ್ರಿಕೋದ್ಯಮ ಕೋರ್ಸ್ ಅನ್ನು ಅರ್ಧಕ್ಕೆ ನಿಲ್ಲಿಸಿದವರು. ಕನಕಪುರ ತಾಲ್ಲೂಕಿನ ಬಿಳಿದಾಳೆ ಗ್ರಾಮದವರಾದ ಅವರು ಅರೆಕಾಲಿಕ ರೈತರೂ ಹೌದು. ಕೆಲಕಾಲ ಸರ್ಕಾರಿ ನೌಕರಿ ಮಾಡಿದ ಪಾರ್ವತೀಶ್ ಅವರು ನಂತರ ಕರ್ನಾಟಕ ಪ್ರಗತಿರಂಗ ಹಾಗೂ ಕರ್ನಾಟಕ ವಿಮೋಚನಾ ರಂಗದ ಸಕ್ರಿಯ ಕಾರ್ಯಕರ್ತರಾಗಿದ್ದರು. ಲಂಕೇಶ್ ಪತ್ರಿಕೆ, ಗೌರಿ ಲಂಕೇಶ್ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿರುವ ಅವರು ಸಾಕೇತ್ ಎನ್ನುವ ವಾರಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಗೈಡ್ ಮಾಸಪತ್ರಿಕೆಯ ಸಂಪಾದಕರಾಗಿಯೂ ದುಡಿದಿದ್ದಾರೆ.
ಕನ್ನಡದಲ್ಲಿ ಬಳಕೆಯಲ್ಲಿರುವ ಅನ್ಯಭಾಷಾ ಪದಗಳ ವಿವರಣೆ ನೀಡುವ Someಪದ, ಚೆಕ್ ಪೋಸ್ಟ್, ಕಾಮೆಂಟರಿ ಅವರ ಪ್ರಕಟಿತ ಕೃತಿಗಳು. ಪಿ.ಲಂಕೇಶ್ ಅವರ ಟೀಕೆ-ಟಿಪ್ಪಣಿ, ಈ ನರಕ ಈ ಪುಲಕ, ಆಟ-ಜೂಜು-ಮೋಜು ಕೃತಿಗಳ ಸಂಪಾದಕ.