ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದಲ್ಲಿ 1955ರ ಆಗಸ್ಟ್ 30 ರಂದು ಪದ್ಜರಾಜ ದಂಡಾವತಿ ಅವರು ಜನಿಸಿದರು. ತಂದೆ ದೇವೇಂದ್ರಪ್ಪ, ತಾಯಿ ಚಂಪಮ್ಮ. ಪ್ರಾಥಮಿಕ- ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ಮುದ್ದೇಬಿಹಾಳದಲ್ಲಿ ಮುಗಿಸಿ, ಪದವಿ ಶಿಕ್ಷಣವನ್ನು ರಾಮದುರ್ಗದಲ್ಲಿ ಪೂರೈಸಿದರು. ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು.
ಪತ್ರಕರ್ತರಾಗಿ 1982ರಲ್ಲಿ ಪ್ರಜಾವಾಣಿ ಸೇರಿದ್ದು, ಹಂತ ಹಂತವಾಗಿ ಬಡ್ತಿ ಹೊಂದಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ಸತತ ಎಂಟು ವರ್ಷಗಳಿಂದ ಅವರು ಪ್ರತಿ ಭಾನುವಾರ ಪ್ರಜಾವಾಣಿಯಲ್ಲಿ ಬರೆದ ‘ನಾಲ್ಕನೇ ಆಯಾಮ’ ಅಂಕಣ, ತನ್ನವಿಚಾರ-ವಿಷಯ ವೈವಿಧ್ಯತೆಯಿಂದಾಗಿ ಜನಪ್ರಿಯತೆ ಪಡೆದಿತ್ತು.
ಕೃತಿಗಳು: ಪತ್ರಿಕಾಭಾಷೆ, ರಿಪೋರ್ಟಿಂಗ್, ಅವಲೋಕನ, ನಾಲ್ಕನೇ ಆಯಾಮ(ಆರು ಸಂಪುಟಗಳು), ಗೊಮ್ಮಟ, ಕನ್ನಡ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಶ್ರವಣಬೆಳಗೊಳದ ಪ್ರಾಗೈತಿಹಾಸ ತಿಳಿಸುವ ಪುಸ್ತಕವನ್ನು ಕರ್ನಾಟಕ ಸರ್ಕಾರದ ಪ್ರಕಟಿಸಿದೆ. ಆರಂಭ, ಚೌಕಟ್ಟಿನಾಚೆ, ಹೆಜ್ಜೆ ಮೂಡಿಸಿದ ಹಾದಿ, ರೂವಾರಿ (ಪ್ರಧಾನ ಸಂಪಾದಕತ್ವದಲ್ಲಿ ಎಸ್.ಜಿತೇಂದ್ರ ಕುಮಾರ್ ಅಭಿನಂದನ ಗ್ರಂಥ), ಮಾಧ್ಯಮ ಮಾರ್ಗ.
ಪ್ರಶಸ್ತಿ-ಗೌರವಗಳು: ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಜೀವಮಾನ ಸಾಧನೆಯ ಪ್ರಶಸ್ತಿ, ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ ಕರ್ನಾಟಕ ವಿ.ವಿ.ಯಿಂದ ಗೌರವ ಡಾಕ್ಟರೇಟ್, ಶ್ರವಣ ಬೆಳಗೊಳದ ಗೊಮ್ಮಟೇಶ ವಿದ್ಯಾಪೀಠ (ಮಾಧ್ಯಮ) ಪ್ರಶಸ್ತಿ, ದಕ್ಷಿಣ ಭಾರತ ಜೈನ ಮಹಾಸಭೆಯ ಆದರ್ಶ ಪತ್ರಕಾರ ಪ್ರಶಸ್ತಿ, ಆಳ್ವಾಸ್ ನುಡಿ ಸಿರಿ ಪ್ರಶಸ್ತಿ ಸೇರಿದಂತೆ ಇತರೆ ಪ್ರಶಸ್ತಿ-ಪುರಸ್ಕಾರಗಳು ಸಂದಿವೆ. ರಾಮದುರ್ಗ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಬೋರಗಾಂವಿಯ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರೂ ಆಗಿದ್ದರು.