About the Author

ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾದ ಕೇಶವರೆಡ್ಡಿ ಹಂದ್ರಾಳ ಅವರು 22-07-1957 ರಲ್ಲಿ ಮಧುಗಿರಿ ತಾಲೂಕಿನ ಹಂದ್ರಾಳದಲ್ಲಿ ಜನಿಸಿದರು. ತಂದೆ ತಾಯಿ ಇಬ್ಬರೂ ಅನಕ್ಷರಸ್ಥರು . ಕೃಷಿ ಕೆಲಸಗಳನ್ನು ಮಾಡಿಕೊಂಡೇ ಹಂದ್ರಾಳದ ಪ್ರೈಮರಿ ಸ್ಕೂಲು , ಬ್ಯಾಲ್ಯದ ಮಿಡ್ಲಿಸ್ಕೂಲು ಪೂರೈಸಿದ್ದು . ತಾತ ನರಸಿಂಹರೆಡ್ಡಿ ಆಂಧ್ರದ ಅನಂತಪುರ ಜಿಲ್ಲೆಯ ಊರೊಂದರ ಜಮೀನುದಾರ . ಕಳೆದ ಶತಮಾನದ ಇಪ್ಪತ್ತರ ದಶಕದಲ್ಲಿ ಆ ಸೀಮೆಯ ಶೋಷಕ ಬ್ರಿಟಿಷ್ ಕಲೆಕ್ಟರ್ ನನ್ನು ಖೂನಿ ಮಾಡಿ ರಾತ್ರೋರಾತ್ರಿ ಕರ್ನಾಟಕದ ಕಡೆ ಪ್ರಯಾಣ .  ಕಾಪು ರೆಡ್ಡಿಯಾಗಿದ್ದ ತಾತ ಮದುವೆಯಾಗಿದ್ದು ಕಮ್ಮ ಜಾತಿಯ ಅಜ್ಜಿಯನ್ನು . 1947 ರವರೆಗೂ ಕಾಡಿನಲ್ಲಿ ಭೂಗತರಾಗಿ ಬದುಕಿದ್ದು ಕಾಡುಗೊಲ್ಲರ ಸಮುದಾಯದ ಜೊತೆ . ಸ್ವಾತಂತ್ರ್ಯ ನಂತರ ಹಂದ್ರಾಳಕ್ಕೆ ಬಂದು ನೆಲೆಗೊಂಡಿದ್ದು .

ಹೈಸ್ಕೂಲಿನಿಂದ ಬೆಂಗಳೂರಿನಲ್ಲಿ ಓದು. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ  ಸ್ನಾತಕೋತ್ತರ ಪದವಿ. ಎಂ ಎ ನಂತರ  ಮೂರು ವರ್ಷಗಳ ಕಾಲ ಊರಿನಲ್ಲಿ ಬೇಸಾಯದಲ್ಲಿ ತೊಡಗಿದ್ದು. 1984 ರಿಂದ ಆರು ವರ್ಷಗಳ ಕಾಲ  ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕನ ಹುದ್ದೆಯಲ್ಲಿ ತೊಡಗಿದ್ದು. ಕೆ ಎ ಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ 1991 ರಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸೇರಿದ್ದು. 2017 ರಲ್ಲಿ  ವಾಣಿಜ್ಯ ತೆರಿಗೆ ಉಪ ಆಯುಕ್ತನಾಗಿ ನಿವೃತ್ತಿ.

ಸಾವಿರದ ಒಂಬೈನೂರ ಎಪ್ಪತ್ತೊಂದರಿಂದಲೇ  ಅಂದರೆ ಹೈಸ್ಕೂಲು ವಿದ್ಯಾಭ್ಯಾಸದ ಕಾಲದಿಂದಲೇ ಹಿಂದಿ, ತಮಿಳು ವಿರೋಧಿ ಚಳುವಳಿಗಳಲ್ಲಿ ತೊಡಗಿಸಿಕೊಂಡಿದ್ದು . ಆಗಿನಿಂದಲೂ ಎಲ್ಲಾ ಕನ್ನಡ ಪರ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದು. ಎಪ್ಪತ್ತೈದರ ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯಲ್ಲಿ ಭಾಗವಹಿಸಿ ಪೊಲೀಸ್ ಸ್ಟೇಶನ್ ಸೆಲ್ ರುಚಿ ನೋಡಿದ್ದು . ಎಪ್ಪತ್ತು ಎಂಬತ್ತರ ಬಂಡಾಯ, ದಲಿತ, ರೈತ ಚಳವಳಿಗಳಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದು. ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿ ಪೊಲೀಸ್ ಲಾಠಿ ರುಚಿ ಕಂಡದ್ದು. ಕ್ರಾಂತಿ ಸಿರಿ ಪ್ರಕಾಶನ ಪ್ರಾರಂಭಿಸಿ ಅನೇಕ ಉದಯೋನ್ಮುಖ ಮತ್ತು  ಖ್ಯಾತ ಸಾಹಿತಿಗಳ ಪುಸ್ತಕಗಳನ್ನು ಪ್ರಕಟಿಸಿದ್ದು . ಅನೇಕ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದು.

1984 ರಿಂದಲೂ ಕಥೆಗಳನ್ನು ಬರೆಯಲು ತೊಡಗಿ ಇದುವರೆಗೆ 500 ಕ್ಕೂ ಹೆಚ್ಚು ಕಥೆಗಳು ಕನ್ನಡದ ಬಹುತೇಕ ಎಲ್ಲಾ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. 300 ಕ್ಕೂ ‌ಹೆಚ್ಚು ಪ್ರಬಂಧಗಳ  ರಚನೆ.  ಕೆಲವು ಕಥೆಗಳು ಹಿಂದಿ ಮತ್ತು ತೆಲುಗು ಭಾಷೆಗಳಿಗೆ  ಭಾಷಾಂತರಗೊಂಡಿವೆ. ಅನೇಕ ಕಥೆಗಳು ನಾಟಕ ಮತ್ತು ಸಿನಿಮಾಗಳಾಗಿವೆ. 

ಪ್ರಕಟಗೊಂಡ ಕೃತಿಗಳು : ನನ್ನ ಕ್ರಾಂತಿಯ ಹುಡುಗಿ, ಹಂದ್ರಾಳ, ಅಂತಃಪುರ , ಬರದ ನಾಡಲ್ಲಿ ಬೆಳದಿಂಗಳು, ಜಡೆಗೆ ಗುಲ್ ಮೊಹರ್ ಕೈಗಳು, ಮೋಡ ಕರಗುವ ಮುನ್ನ, ಒಂದು ಹಿಡಿ ಮಣ್ಣು, ಬಾರಕ್ಕ ಬೆಳದಿಂಗಳೆ, ಒಕ್ಕಲ ಒನಪು, ರಾಜಧಾನಿಯ ರಸ್ತೆಗಳಲ್ಲಿ, ಮರೆತ ಭಾರತ , ಮಣ್ಣಿನ ಗೋಡೆಗಳು, ಹಾಲು ಕುಡಿಯದಿರು ಕಂದ , ಅಲ್ಲಮನ ಆತ್ಮಲಿಂಗ, ಈ ಕ್ಷಣದ ಬುದ್ದ, ಕೀಟ,  ಹಂದ್ರಾಳರ ಕಥಾಲೋಕ ಭಾಗ 1ಮತ್ತು 2, ಹಂದ್ರಾಳರ ಗ್ರಾಮ ಭಾರತ , ಮೃಗಜಲ,  ಮಹಾಪ್ರಸ್ಥಾನ, ಎದೆ ಗಿಲಕಿಯ ಗೆಜ್ಜೆ - ಫೇಸ್ಬುಕ್ ಬರಹ .

ಕಾದಂಬರಿಗಳು: ಅಣು, ಲಂಟಾನಾ , ಸೋನಾಗಾಚಿ , ಮೃಗತೃಷ್ಣ 

 ಪ್ರಶಸ್ತಿಗಳು:  ' ಮೋಡ ' ಕರಗುವ ಮುನ್ನ ಸಂಕಲನಕ್ಕೆ ಕನ್ನಡ  ಪುಸ್ತಕ ಸೊಗಸು ಬಹುಮಾನ,  ' ಒಂದು ಹಿಡಿ ಮಣ್ಣು ' ಸಂಕಲನಕ್ಕೆ 2005 ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ,  ' ಒಕ್ಕಲ ಒನಪು ' ಸಂಕಲನಕ್ಕೆ 2006 ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,  ' ಮರೆತ ಭಾರತ ' ಸಂಕಲನಕ್ಕೆ 2015 ರ ವೀಚಿ ಸಾಹಿತ್ಯ ಪ್ರಶಸ್ತಿ , 2019 ರ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ , 2020  ಮಾಸ್ತಿ ಕಥಾ ಪುರಸ್ಕಾರ.

 

 

 

       

ಕೇಶವರೆಡ್ಡಿ ಹಂದ್ರಾಳ

(22 Jul 1957)