ಲೇಖಕರು, ಸಂಶೋಧಕರು ಆದ ಸಿ.ಪಿ.ಕೃಷ್ಣಕುಮಾರ್ ಅವರು 08-04-1939ರಂದು ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲೂಕಿನ ಚಿಕ್ಕನಾಯಕನ ಹಳ್ಳಿಯಲ್ಲಿ ಜನಿಸಿದರು. ತಂದೆ ಪುಟ್ಟೇಗೌಡರು ಮೋಜಿಣಿದಾರರಾಗಿ ಸರಕಾರಿ ಕೆಲಸದಲ್ಲಿದ್ದರು. ಕೃಷ್ಣಕುಮಾರ್ ಅವರು 9 ತಿಂಗಳ ಮಗುವಾಗಿದ್ದಾಗಲೇ ತಾಯಿ ತೀರಿಕೊಂಡರು.
ಸಿಪಿಕೆ ಎಂದೇ ಪ್ರಸಿದ್ಧರಾದ ಅವರು ಜೆ.ಎಸ್.ಎಸ್. ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್) ಪದವಿಯನ್ನು ಪಡೆದರು. 1961 ರಲ್ಲಿ ಮಾನಸಗಂಗೋತ್ರಿಯಲ್ಲಿ ಎಂ.ಎ. ಪದವಿ ಪಡೆದರು.
1962ರಲ್ಲಿ ಸಿ.ಪಿ.ಕೆ. ಅವರ ಮದುವೆ ಶಾರದಾ ಅವರ ಜೊತೆಗೆ ಜರುಗಿತು. 1964ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾದರು.1967ರಲ್ಲಿ ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾದರು. 1969ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾದರು. 1974ರಲ್ಲಿ ಪಿ.ಎಚ್.ಡಿ. ಪಡೆದ ಬಳಿಕ 1980ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿಯೇ ಪ್ರಾಧ್ಯಾಪಕರಾದರು. ಆನಂತರ ಆ ಸಂಸ್ಥೆಯ ನಿರ್ದೇಶಕರೂ ಆದರು.
ಶಿವಮೊಗ್ಗೆಯ ಅಖಿಲ ಭಾರತ 49ನೆಯ ಕನ್ನಡ ಸಮ್ಮೇಳನದ ಭಾಷಾಂತರ ಗೋಷ್ಠಿಯ ಅಧ್ಯಕ್ಷತೆ, 1971ರಲ್ಲಿ ನಾಗಮಂಡಲದಲ್ಲಿ ನಡೆದ ಜಾನಪದ ಸಮ್ಮೇಳನದ ಸಾಹಿತ್ಯಗೋಷ್ಠಿಯ ಅಧ್ಯಕ್ಷತೆ, ಟಿ. ನರಸೀಪುರ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1994ರಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, 1994ರಲ್ಲಿ ಲಕ್ನೋದಲ್ಲಿ ನಡೆದ ಗಣರಾಜ್ಯೋತ್ಸವ ಕವಿಗೋಷ್ಠಿಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಕೆ, 2011ರಲ್ಲಿ ಗಂಗಾವತಿಯಲ್ಲಿ ನಡೆದ 78ನೆಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ಹಾಗೂ ಮುಂತಾದ ಗೌರವಗಳು ಕೃಷ್ಣಕುಮಾರ್ ಅವರನ್ನರಸಿವೆ.
ಅಂತರತಮ (ವಚನಗಳು), ಅನಂತ-ಪೃಥ್ವೀ, ಒಳದನಿ, ತಾರಾಸಖ, ನೀವೆ ನಮಗೆ ದಿಕ್ಕು, ನೂರೊಂದು (ವಚನ, ಕವನ), ಪ್ರಕೃತಿ, ಬೊಗಸೆ, ವರ್ತಮಾನ, ಹನಿಮಿನಿ ಅವರ ಕಾವ್ಯಗಳಾದರೆ, ಪ್ರಬಂಧಗಳು- ಚಿಂತನಬಿಂದು, ಮೆಲುಕು. ವಿಮರ್ಶೆ ವಿಚಾರ ಸಂಶೋಧನಾ ಕೃತಿಗಳು - ಅಧ್ಯಯನ, ಅಲೋಚನ, ಉಪಚಯ, ಎರಡು ಜೈನ ಪುರಾಣಗಳು, ಐವರು ವಚನಕಾರರು, ಕನ್ನಡ ಕಾವ್ಯ : ಹತ್ತು ವರ್ಷ, ಕನ್ನಡ ಚತುರ್ಮುಖ ಸೇರದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ‘ವಚನ ವಿಲೋಕನ’ ಕೃತಿಗೆ ಬಸವ ವೇದಿಕೆಯು ‘ಬಸವ ಸಾಹಿತ್ಯಶ್ರೀ’ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಚಿತ್ರದುರ್ಗದ ಬೃಹನ್ಮಠದ ‘ವಿದ್ವತ್ ಶಿರೋಮಣಿ’ ಪ್ರಶಸ್ತಿ, ಮುಕ್ತಕ ಅಕಾಡಮಿಯಿಂದ ‘ಹನಿಗವನ ಹರಿಕಾರ’, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡಮಿಯಿಂದ ‘ಜಾನಪದ ತಜ್ಞ’ ಪ್ರಶಸ್ತಿ, ಎಚ್.ಎಲ್. ನಾಗೇಗೌಡ ‘ಜಾನಪದ ತಜ್ಞ’ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿ, ಎಸ್.ವಿ.ಪಿ. ಪ್ರಶಸ್ತಿ, ಚುಟುಕು ರತ್ನ ಪ್ರಶಸ್ತಿ, ಮುಂತಾದ ಪ್ರಶಸ್ತಿಗಳು ಸಂದಿವೆ. ಅವರ ಅಭಿಮಾನಿಗಳು, ಒಡನಾಡಿಗಳು ಅರ್ಪಿಸಿರುವ ಗೌರವ ಗ್ರಂಥ ‘ಸಾರ್ಥಕ’.