ಸಾಹಿತ್ಯ, ಪತ್ರಿಕೋದ್ಯಮ ಎರಡು ಕ್ಷೇತ್ರಗಳಲ್ಲೂ ಚಿರಪರಿಚಿತರಾದ ಬಾಬು ಕೃಷ್ಣಮೂರ್ತಿ ಹುಟ್ಟಿದ್ದು ಬೆಂಗಳೂರು. ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಅತೀವ ಆಸಕ್ತಿ. ಅವರ ಸಂಪಾದಕತ್ವದಲ್ಲಿ ಬಾಲಮಂಗಳ (ಪಾಕ್ಷಿಕ), ಬಾಲಮಂಗಳ ಚಿತ್ರಕಥಾ (ಮಕ್ಕಳ ವ್ಯಂಗ್ಯ ಚಿತ್ರ ಪಾಕ್ಷಿಕ), ಗಿಳಿವಿಂಡು (ಶಿಶು ಪಾಕ್ಷಿಕ ಪತ್ರಿಕೆ) ಪ್ರಕಟವಾಗಿವೆ. ಇವರು ರಚಿಸಿದ ಸ್ವಾತಂತ್ರ್ಯವೀರ ಚಂದ್ರಶೇಖರ ಆಜಾದ್ ಕುರಿತು ಆರು ವರ್ಷ ಕಾಲ ಸಂಶೋಧನೆ, ಸ್ಥಳವೀಕ್ಷಣೆ ನಡೆಸಿ ರಚಿಸಿದ ಕೃತಿ ‘ಅಜೇಯ’. ಅವರ ಪ್ರಮುಖ ಕೃತಿಗಳು - ಅಜೇಯ (1974), ಸಿಡಿಮದ್ದು ನೆತ್ತರು ನೇಣುಗಂಬ (1984), ಅದಮ್ಯ (1984), ರುಧಿರಾಭಿಷೇಕ (2005), ಡಾ. ಸಿ.ಜಿ. ಶಾಸ್ತಿಒಂದು ಯಶೋಗಾಥೆ (2007), 1857-ಭಾರತದ ಸ್ವಾತಂತ್ರ್ಯ ಸಂಗ್ರಾಮ (2007), ಕ್ರೈಮ್ ಫೈಲ್ (2007), ಯಾವುದು ಚರಿತ್ರೆ? (2008), ಯುಗದೃಷ್ಟ ಭಗತ್ಸಿಂಗ್ (2012), ಕ್ರಾಂತಿಪರ್ವ (2015), ಮಹಾಸಾಧಕ (2016), ಸ್ವಾತಂತ್ರ್ಯ ಹೋರಾಟದ ಹೀರೋಗಳು (2016), ಭಾಗ-2 (2017).
‘ಮಿಲ್ಟ್ರಿ ತಾತ ಕಥೆ ಹೇಳ್ತಾರೆ’ ಕೃತಿಗೆ ರಾಜ್ಯ ಸರಕಾರದ ಪ್ರಶಸ್ತಿ, ‘ಅಜೇಯ’ ಮತ್ತು ‘ಅದಮ್ಯ’ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವಿಶ್ವೇಶ್ವರಯ್ಯ ಎಂಜನಿಯರಿಂಗ್ ಪ್ರತಿಷ್ಠಾನ ಪ್ರಶಸ್ತಿ, ಪತ್ರಿಕೋದ್ಯಮದ ಸೇವೆಗಾಗಿ ಕರ್ನಾಟಕ ಜ್ಯೋತಿ ಪ್ರಶಸ್ತಿ, ಶಿವಮೊಗ್ಗದ ‘ನಾವಿಕ’ ದಿನಪತ್ರಿಕೆಯ ರಜತ ಮಹೋತ್ಸವ ಪ್ರಶಸ್ತಿ, ರಂಗಭೂಮಿ ಕೊಡುಗೆಗಾಗಿ ಉದಯ ಕಲಾನಿಕೇತನದಿಂದ ಸನ್ಮಾನ ದೊರೆತಿದೆ.