ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಸ್ಕೃತ ಸಾಹಿತ್ಯದಲ್ಲಿ ಮೂರು ಚಿನ್ನದ ಪದಕಗಳೊಂದಿಗೆ ಸ್ನಾತಕೋತ್ತರ ಎಂ.ಎ. ಪಡೆದಿದ್ದು, ಪಿಎಚ್ ಡಿ ಪದವೀಧರರು- ಅರವಿಂದ ಚಂದ್ರಕಾಂತ ಶ್ಯಾನಭಾಗ, ಗಾಂಧಿ ಅಧ್ಯಯನ ಮತ್ತು ಜೈನಶಾಸ್ತ್ರ ಅಧ್ಯಯನ ಸ್ನಾತಕೋತ್ತರ ಡಿಪ್ಲೊಮಾ ಪದವೀಧರರು. ಇವರು ಹವ್ಯಾಸಿ ಬರಹಗಾರರು. ಈವರೆಗೆ ಕನ್ನಡ ಮತ್ತು ಕೊಂಕಣಿಯಲ್ಲಿ 9 ಪುಸ್ತಕಗಳನ್ನು ಪ್ರಕಟಿಸಿದ್ದು, 300 ಕ್ಕೂ ಹೆಚ್ಚು ಲೇಖನಗಳನ್ನು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ವಿಜಯಪುರ, ಧಾರವಾಡ, ಮಂಗಳೂರು ಮತ್ತು ಕಾರವಾರ ಆಕಾಶವಾಣಿ ಕೇಂದ್ರಗಳಿಂದ ಇವರ ಚಿಂತನ, ಭಾಷಣ ಮತ್ತು ಸಂಸ್ಕ್ರತ ಪಾಠ ಮುಂತಾದ ಕಾರ್ಯಕ್ರಮಗಳು ಪ್ರಸಾರಗೊಂಡಿವೆ. ಕರಾವಳಿ ಮುಂಜಾವು ಮತ್ತು ಕನ್ನಡ ಜನಾಂತರಂಗ ದಿನಪತ್ರಿಕೆಗಳಲ್ಲಿ ಕೆಲವು ಕಾಲ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಸಂಶೋಧನೆ, ಬೋಧನೆ, ಅನುವಾದ ಆಸಕ್ತಿಯ ಕ್ಷೇತ್ರಗಳು. ಮಹಾಕವಿ ಕಾಳಿದಾಸನ ಮೇಘದೂತವನ್ನು ಕೊಂಕಣಿಗೆ ಅನುವಾದಿಸಿದ್ದು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದು, ಕೊಂಕಣಿ ಸಾಹಿತ್ಯ ಅಕಾಡೆಮಿಯ 25 ನೇ ವರ್ಷಾಚರಣೆಯ ಪ್ರಯುಕ್ತ "ಕೊಂಕಣಿ ಮಾನ್ಯತಾ ರುಪ್ಯೋತ್ಸವ ಲೇಖನಮಾಳಾ" ಯೋಜನೆಯ ಸಂಯೋಜಕರಾಗಿ, ವಿವಿಧ ಲೇಖಕರ 104 ಪುಸ್ತಕಗಳನ್ನು ಹೊರತಂದಿದ್ದಾರೆ. ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ಪ್ರಬಂಧಗಳನ್ನು ಮಂಡಿಸಿದ್ದಾರೆ.
ಜಿ.ಎಸ್.ಬಿ. ಯುವಸೇವಾ ವಾಹಿನಿ ಪ್ರತಿಭಾ ಪುರಸ್ಕಾರ, ಸರ್.ಎಂ.ವಿಶ್ವೇಶ್ವರಯ್ಯ ಸ್ಟೇಟ್ ಬ್ಯಾಂಕ್ ಪುರಸ್ಕಾರ, ಕೊಂಕಣಿ ಮಾನ್ಯತಾ ಶಿಕ್ಷಣ ಪುರಸ್ಕಾರ ಮತ್ತು ಹಲವಾರು ಸನ್ಮಾನಗಳು ಸಂದಿವೆ.