ಸಪ್ತಪದಿಯನು ತುಳಿದು ಬಂದಿರೆ
ಆಪ್ತ ಕನ್ನಿಕೆ ಬಾಳಲಿ
ತಪ್ತಗೊಂಡಿಹ ಬದುಕಿದೆನ್ನದು
ತೃಪ್ತಗೊಂಡಿದೆ ನಲಿವಲಿ
ಪ್ರೇಮದರಮನೆ ಕಟ್ಟಿಕೊಂಡೆವು
ನೇಮಕಿಲ್ಲವೊ ಬಡತನ
ಸಾಮರಸ್ಯದ ಪಥವ ಹಿಡಿದೆವು
ಧೂಮವಿಲ್ಲದ ಜೀವನ
ಬಾಳ ಯಜ್ಞವು ಸಾಗುತಿಹುದು
ಒಲವ ಸಮಿಧೆಯ ಬೆರೆಸುತ
ಹೂವ ಚೆಲುನಗೆ ಅರಳುತಿಹುದು
ಉಸಿರೊಳುಸಿರದು ಸೇರುತ
ಪ್ರೀತಿಗಿಂತಲು ಸಿರಿಯದೇನಿದೆ
ಸ್ವಾತಿ ಮುತ್ತಿನ ಹನಿಯಿದು
ಭೀತಿ ಕಳೆಯುವ ಬೆಳಕದಾಗುತ
ಛಾತಿ ತುಂಬುವ ಸಿಹಿಯಿದು
ತಾಳಲಯಗಳು ತಪ್ಪದಂತೆಯೆ
ಬಾಳ ಶ್ರುತಿಯದು ಮಿಡಿದಿದೆ
ಜಾಲಿಯಿಲ್ಲದ ಹಸಿರ ಬಯಲಿದು
ಮೇಳಗಾನದೆ ಕುಣಿದಿದೆ
-ಅನ್ನಪೂರ್ಣಾ ಬೆಜಪ್ಪೆ
ಅನ್ನಪೂರ್ಣಾ ಬೆಜಪ್ಪೆ
ಕವಯತ್ರಿ ಅನ್ನಪೂರ್ಣಾ ಬೆಜಪ್ಪೆ ಅವರು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕಿದೂರು ಗ್ರಾಮದವರು. ತಂದೆ ಹಳೆಮನೆ ವಿ ಗಣಪತಿಭಟ್, ತಾಯಿ ಪಾರ್ವತಿ. ಕವನ, ಗಝಲ್, ರುಬಾಯಿ,ಚುಟುಕು, ಶಿಶುಗೀತೆ,ಭಾವಗೀತೆ ,ಮುಕ್ತಕ ಸಣ್ಣ ಕಥೆ ಹೀಗೆ ಹಲವಾರು ಪ್ರಕಾರಗಳ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕೃತಿಗಳು: ಅಕ್ಷರದೀಪ (ಕವನ ಸಂಕಲನ)
More About Author