Poem

ವಿಳಾಸ ಮರೆತ ಪತ್ರ....

"ಗೆ"

ಮೈ
ಡಿಯರ್
ಮರೆತು ಬಿಟ್ಟ ಒಲವೇ

ಸ್ಥಳ ಮತ್ತು ದಿನಾಂಕ : ವಿಳಾಸ ಮರೆತ ಪತ್ರ

ವಿಷಯ : ಈ ಕೆಳಗಿನಂತೆ

ಈ ಮೇಲ್ಕಾಣಿಸಿದ ನಾನು ಅಂದರೆ
ತುಸು ಪೋಲಿ ಅತಿ ಪ್ರೇಮಿಯ ಬಿನ್ನಹಗಳು

ಈಗ

*ನಿನ್ನ ಹೆಸರು ಗೀಚದ ಶಹರದ ಗೋಡೆಗಳು ಬಿದ್ದು ಬಿಡಲಿ
*ನಿನ್ನ ಮುಂಗುರುಳು ಸೋಕದ ಗಾಳಿ ಇನ್ನು ಮುಂದೆ ಬೀಸದಿರಲಿ
*ಇಳಿ ಸಂಜೆ ನಾವಿಬ್ಬರೂ ಕದ್ದಾಡಿದ ಪಿಸು ಮಾತುಗಳ ಕಾಯದ ಸಂಜೆ ಸಾಯಲಿ
*ನೀನಿರದ ಕನಸುಗಳು ಎಂದು ರಾತ್ರಿಗೆ ಬಾರದಿರಲಿ

ಮುಂದೆ

* ಹಿಡಿದಿಡಲಾರದಷ್ಟು ಒಲವಿದೆ ಬೊಗಸೆ ಹೃದಯದಲಿ
*ಬಟ್ಟಲು ಕಣ್ಣುಗಳಲ್ಲಿ ಬೆಳದಿಂಗಳ ತುಂಬಿರುವೆ
*ನನ್ನ ಸೋಲಿಸುವ ನಿನ್ನ ನಗುವಿಗೆ ನಿತ್ಯವೂ ಮೌನದ ಸುಂಕ ಕಟ್ಟುತಿರುವೆ
*ಅಕ್ಕಿ ಬೆಲ್ಲ ತುಂಬಿಟ್ಟ ಸೇರು ಹೊಸ್ತಿಲ ಮೇಲಿದೆ

ಮತ್ತೆ

*ಜಿಂದಗಿಯಲ್ಲಿ "ನಾನು" ಗರೀಬ
ಪ್ರೇಮವನ್ನಷ್ಟೆ ಕೊಡಬಲ್ಲೆ
ಕಾವ್ಯವನ್ನಷ್ಟೆ ಕಟ್ಟಬಲ್ಲೆ

ಸದ್ಯಕ್ಕೆ

ನಿನ್ನ ನಶೆಯಲ್ಲಿರುವೆ
ಜಗದ ಯಾವ ನೋವು
ನನ್ನನ್ನು ಬಾಧಿಸುವುದಿಲ್ಲ

"ಇಂದ"

ತುಸು ಪೋಲಿ ಅತಿ ಪ್ರೇಮಿ
ಒಂಟಿ ರೂಮು
ನೀನು ಎಂದು ಬರದ
ಬೀದಿ ಕೊನೆ ತಿರುವು

- ಅಭಿಷೇಕ ಬಳೆ ಮಸರಕಲ್

ಅಭಿಷೇಕ್‌ ಬಳೆ ಮಸರಕಲ್‌

ಯುವ ಬರಹಗಾರ ಕವಿ ಅಭಿಷೇಕ್‌ ಬಳೆ ಮಸರಕಲ್‌ ಜನಿಸಿದ್ದು 1994 ನ. 30ರಂದು. ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಮಸರಕಲ್‌ ಗ್ರಾಮದವರು. ವಿಜ್ಞಾನ ಪದವೀಧರರು. ಹೈಸ್ಕೂಲ್ ನಲ್ಲಿರುವಾಗಲೇ ’ಕರ್ನಾಟಕ ಮಾತ” ಕವನ ಸಂಕಲನ ಪ್ರಕಟಿಸಿದ್ದರು. ಅಮ್ಮ ಮತ್ತು ಇತರೆ ಕವಿತೆಗಳು, ಗೋರಿ ಮೇಲಿನ ಹೂ ಇವರ ಪ್ರಮುಖ ಕೃತಿಗಳು. ಸಿರಿಗನ್ನಡ ವಚನ ಕಲ್ಯಾಣ ಪ್ರಶಸ್ತಿ, ಸಾಹಿತ್ಯ ಸಿರಿ ಪ್ರಶಸ್ತಿ, ಕವನ ಕುಸುರಿ ಪ್ರಶಸ್ತಿ, ಯುವ ಬರಹಗಾರ ಪ್ರಶಂಸತಾ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಒಲಿದು ಬಂದಿವೆ.

More About Author