Poem

ಮಾರ್ನಾಮಿಯ ಕನಸು

ಮಲಗಿದ್ದೆ
ಹರಿದ ಕನಸುಗಳ ಕಂಬಳಿ ಹೊಲಿಯುತ್ತ
ಏನೆನೋ ಹಂಬಲಿಕೆ ಬಳಲಿಕೆ
ಹಳೆ ಮುಖ ಹೊಸ ಮುಖವಾಗಿ
ಕೋಣನ ತಲೆಯ ಅಸಾದಿ
ಎಮ್ಮೆಯ ತಲೆಯ ಮಹಿಷ
ಸಂಬಂಧದ ಮಾಲೆ ಕೊರಳ ಸುತ್ತಿಕೊಂಡಿರಲು
ಅವ್ವ ಹಚ್ಚಿದ ಬುಡ್ಡಿಯ ಬೆಳಕಲಿ
ಆಜ್ಜನ ಹೆಜ್ಜೆಗಳು
ಕಣ್ಣ ಪರದೆಯ ಮೇಲೆ ಜೋಕಾಲಿ ತೂಗುತ

ಹರಕು ಸೀರೆ ಸುಟಿಗೆ ತಗುಲಿದ ಪಂಚೆ
ಹಸಿದ ಹೊಟ್ಟೆಯ ತುಂಬಾ ಕರುಳ ಬಿಕ್ಕಳಿಕೆ
ಮೂಲೆ ಕಚ್ಚಿದ ಕೋಲು ಚಿಗುರುವ ಕನಸು
ಹೊಲದ ತುಂಬಾ ಬೆವರ ಗವುಲು
ತೆನೆಗಟ್ಟಿ ಕಾಳು ಹಿಡಿ ಹಬ್ಬಿ ಉಡಿ ತುಂಬಿ

ಆರಿದ ಒಲೆಯ ಕೆಂಡದಲಿ ಕಿಡಿ ಹಾರಿ
ಹೊತ್ತಿ ಕೊಳ್ಳುವ ತವಕ
ಮನೆ ತುಂಬಿದ ತುಪ್ಪದ ಗಾಳಿಯ ವಾಸನೆ
ನಸುಕಿನಲೇ ಹಟ್ಟಿಯು ಬಗ್ಗಡ ಹೊದ್ದು
ರಂಗೋಲಿಗೆ ಅವ್ವನ ತುದಿ ಬೆರಳ ಸ್ಪರ್ಶ
ಪುಟ್ಟ ಪಾದದ ಹೆಜ್ಜೆ ಗುರುತು
ಬಗ್ಗಡ ಬಳಿದ ಹಟ್ಟಿಯ ಮೇಲೆ...

ಹೊತ್ತುಟ್ಟಿ ಬರುವಾಗ
ಅಜ್ಜನ ಕೈ ಬೆರಳು ಕುಡುಗೋಲಿನ ಹಿಡಿಕೆ ಹಿಡಿದು
ಹೊಲವ ತುಂಬಿದ ಕಾಮನ ಬಿಲ್ಲುಗಳು
ಅವ್ವ ಹೊತ್ತು ಬರುವ ಹಿಟ್ಟಿನ ಹೊತ್ತು
ಅಜ್ಜನ ರಟ್ಟೆಯ ಬಿಗಿ ಸತುವು

ಕಣವ ಸಾರಿಸಿ
ಹುಲ್ಲನು ತುಳಿಸಿ ರಾಗಿಯ ಮಾಗಣಿಗೆ
ಚೆಲುವಿನ ಗಾಳಿ ಬೀಸಿ
ವರುಷದ ಕನಸು ಅವ್ವನ ಮೊರತುಂಬಿ
ಕಣದಲಿ ಹುಲುಸು...

ಸರಿ ಹೊತ್ತಿಗೆ ಎಚ್ಚರವಾದ ಮನಸು
ಕಣ್ಣ ಮುಂದೆ ಅವ್ವ ಅಜ್ಜನ ಪಟ
ಮುಂದೆ ಸುರಿದ ಪುರಿ ಮೇಲೆ ಚಕ್ಕುಲಿ ನಿಪ್ಪಟ್ಟು
ಮೈಸೂರು ಪಾಕು ಕೋಡುಬಳೆ
ಸಣ್ಣ ಲೋಟದಲಿ ಅವಿತಿದ್ದ ಶಾಂಭವಿ
ಮೂಗಿನ ಹೊಳ್ಳೆಗೆ ತಾಕುತಿದ್ದ ಧೂಪದ ಹೊಗೆ

ಒಲೆಯ ಮೇಲಿನ ಪಾತ್ರೆಯಲಿ
ಕೊತ ಕೊತ ಕುದ್ದು ತಟ್ಟೆ ತುಂಬಿದ್ದ
ತುಕ್ಕಡ ಸವೆದು ಬರಿದಾದ ಮೂಳೆಗಳು

ಸುತ್ತಲೂ ನೋಡಿದೆ
ಮೌನ ಬಡಿದ ಗೊರಕೆ ಸದ್ದು
ನಗುತ್ತಿದ್ದ ಅವ್ವ ಅಜ್ಜನ ಪಟಕೆ
ಅಡ್ಡ ಬಿದ್ದೆ
ಎರಡೂ ಪಟದಿಂದ ಚಾಚಿದ ಬಲಗೈಗಳು
ನನ್ನ ತಲೆ ಮೇಲಿಟ್ಟಿರಲು
ಮೈ ಕೊಡವಿ ಎದ್ದೆ
ಅಯ್ಯೋ ! ಮಾರ್ನಾಮಿಯ ಕನಸು

- ಬಿದಲೋಟಿ ರಂಗನಾಥ್

ಬಿದಲೋಟಿ ರಂಗನಾಥ್

ಕವಿ ರಂಗನಾಥ ಬಿ.ಎಂ ಅವರು 1980 ಜುಲೈ 15 ರಂದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬಿದಲೋಟಿಯಲ್ಲಿ ಜನಿಸಿದರು. ವೃತ್ತಿಯಲ್ಲಿ ವಕೀಲರು. ‘ಮಣ್ಣಿಗೆ ಬಿದ್ದ ಹೂಗಳು’ ‘ಬದುಕು ಸೂಜಿ ಮತ್ತು ನೂಲು’, ಉರಿವ ಕರುಳದೀಪ ಹಾಗೂ 'ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ' ಎಂಬ ನಾಲ್ಕು ಕವನ ಸಂಕಲನಗಳು ಪ್ರಕಟವಾಗಿವೆ. ಅವರ ಕಾವ್ಯಕ್ಕೆ ‘ಸಂಕ್ರಮಣ’ ಬಹುಮಾನ ಹಾಗೂ ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ ಹಸ್ತಪ್ರತಿಗೆ 2020ನೇ ಸಾಲಿನ ರಾಜ್ಯ ಮಟ್ಟದ 'ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ' ಹಾಗೂ 'ಶಾಲೀನಿ ಪುರಸ್ಕಾರ' ಲಭಿಸಿವೆ.

 

More About Author