Poem

ದುಶ್ಯಂತನ ಸಖ

ಅರೆ! ಏನಿದು !!
ಅಷ್ಟೊಂದು ಸುರುಳಿ ಸುತ್ತಿಸಿ ಕುತೂಹಲವೆ ಇಲ್ಲದ
ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸುವುದೇಕೆ?
ಉಂಗುರ ಸಿಕ್ಕಿದೆಯಲ್ಲವೇ ? ಅದೇ ರತ್ನ ಕಚಿತವಾದ
ಶುದ್ಧವಾಗಿ ಮೈ ತೊಳೆದುಕೊಂಡ ಉಂಗುರ

ಸ್ವಲ್ಪ ಪ್ರಯತ್ನಿಸಿ ರಾಜ...
ಆ ಕಾಡು, ಬೇಟೆ, ದಣಿವು, ಬಾಯಾರಿಕೆ, ಆಶ್ರಮ....
ನೆನಪಿಗೆ ಸುಳಿದವೆ ರಾಜ...
ಅಗೋ,
ಸ್ವಚ್ಛಂದ ಗಾಳಿ, ಗಿಳಿ ಮರಿಗಳ ಕೂಗು,
ಸುಗಂಧ ಹವಿಸ್ಸು ಕೇದಿಗೆ ಸಂಪಿಗೆ
ಸುರಗಿ ಸುರಹೊನ್ನೆ ಹೂಗಳ ಪರಿಮಳ
ಮದ್ಯದಲ್ಲಿ ಸ್ಪುರದ್ರುಪಿ ಕನ್ಯೆ

ಅಯ್ಯೋ ... ರಾಜನೇ, ನೀವೇ ಅಲ್ಲವೇ
ಎಲ್ಲಿಯೂ ಯಾರು ಕಾಣದ ಮುತ್ತನ್ನು ಕಂಡವರಂತೆ ಹೊಗಳಿದ್ದು
ಕೋಲ್ ಮಿಂಚಿನ ಕಣ್ಣು
ಬಲೆ ಬೀಸುವ ಗಾಳಿಯ ಕೊರಳು
ಚಂದ್ರನನ್ನೇ ತೇದು ಹಚ್ಚಿದಂತೆ ಅವಳ ಮೈ ಹೊಳಪು
ಇದೇನು ದುಶ್ಯಂತ ಮಹಾರಾಜ... ಹಾಂ...
ಇವೂ ಯಾವೂ ನಿಮಗೆ ನೆನಪಿಗೆ ಸುಳಿತ್ತಿಲ್ಲವೇ?

ಆಯಿತು, ನಿಮ್ಮ ಪಂಚೇಂದ್ರಿಯಕ್ಕೆ
ಸ್ವಲ್ಪ ಕೆಲಸ ಕೊಡಿ
ಬುಟ್ಟಿಯಲ್ಲಿ ಗಿಳಿ ಕಚ್ಚದ ಸೇಬಿಡಿದು
ಮೆಲು ಮಾತು, ಮೃದು ನಡಿಗೆ
ಹುಲ್ಲು ಹಾಸಿಗೆಯ ಮೇಲೆ
ತೆಳು ಗಾಳಿಯಂತೆ ಹತ್ತಿರ ಸುಳಿದಾಗ
ನಿಮ್ಮ ಸಮಾಗಮಕ್ಕೆ ಬಾಧೆ ಬರಬಾರದೆಂದು
ನಾಚಿ ನೀರಾಗಿ ಹಾರಿದ ಕೊಳದ ಹಂಸಗಳು
ವಿನೋದದ ಹಾಡು ನಿಲ್ಲಿಸಿದ ಕೋಗಿಲೆಗಳು

ಅಲ್ಲೇ ಪಕ್ಕದಲ್ಲಿ
ಅಲ್ಲೇ ಹಸಿರ ಹಾಸಿಗೆಯ ಪಕ್ಕ ನಿಂತ
ನಿಮ್ಮ ಜವ್ವನದ ಕುದುರೆಯ ಬಿಸಿ ಉಸಿರು

ಹೋಗಲಿ.... ಬಿಡಿ
ಅವೆಲ್ಲ ಮಹಾರಾಜರಿಗೆಲ್ಲ ಏನೂ ಅಲ್ಲವೇ ಅಲ್ಲ ಅಲ್ಲವೇ..
ನೋಡಿ...
ಜೀವ ಚೈತನ್ಯ ತುಂಬಿದ ನೋಟ
ಕಣ್ಣಿನ ಸ್ವಾಗತ, ಒಪ್ಪಿಗೆಯ ನಗು
ಹಾದು ಹೊಗುವ ಗಾಳಿಯು
ಉಸಿರುಗಟ್ಟುವಷ್ಟು ಹತ್ತಿರ ನಿಂತು....
ನಿನ್ನ ಕಣ್ಣಲ್ಲಿ ಅವಳ ರೂಪ
ಅವಳ ಕಣ್ಣಲ್ಲಿ ಕಾರುಣ್ಯ ದೀಪ
ಈಗ ಕಾಡೆಲ್ಲ ಹೊತ್ತಿ ಉರಿಯಬಹುದೇನೋ ಎಂಬ ಛಾಯೆ
ಛೇ.. ಹೋಗಿ ಮಹಾರಾಜ
ಮುಂದಿನದೆಲ್ಲವ ನಾ ನೆನಪಿಸಲಾರೆ ರಾಜ,

ಸ್ವಲ್ಪ ಆ ಉಂಗುರ ಹಾಗೇ..
ಬೆಳಕಿನ ಕಡೆ ತಿರುಗಿಸಿ ನೋಡಿ
ನೀ ಹೊದ್ದ ರಾಜ ಗಾಂಭಿರ್ಯದ
ಸೆರಗು ತೆಗೆದು ಹೊರೆಸಿ ನೆನಪಿಸಿಕೊಳ್ಳಿ
ಏತಕ್ಕಾಗಿ ಬಂದವನು
ಏನನ್ನು ಅರಸಿ ಹೋದವನು
ಏನು ಪಡೆದವನು
ಏನು ಮಾಡಿ ಬಂದವನೆಂದು

ಇದ್ದಷ್ಟು ದಿನದಲ್ಲಿ
ಒಂದಿನಿತು ರಾಜ್ಯ, ಪಟ್ಟದರಸಿ, ಮಂತ್ರಿಮಂಡಲ, ಯುದ್ಧ, ಬೇಟೆ
ಇವುಗಳ ಯಾವ ಜಂಜಾಟವು
ನೆನಪಿಗೂ ಸುಳಿಯದ ಹಾಗೆ ಬಂದಿಸಿದವಳು

ನಿಮ್ಮ ಕುಡಿ ನೋಟದಲ್ಲಿ ಮಿಂಚಿ ಹೋದ
ಬಯಕೆಯ ಸೆಳಕುಗಳನ್ನು ಅರ್ಥೈಸಿಕೊಂಡು
ಸಲ್ಲಿಸಿದ ಸೇವೆಗೆ ಕೃತಜ್ಞನಾಗಿ
ಮೊದಲ ಬೇಟಿಯ ದಿವ್ಯ ನಗೆಯೊಂದಿಗೆ
ಕೊನೆಗೆ ಬರುವಾಗ ಹೇಳಿ ಬಂದ ಜನ್ಮಾಂತರದ ಮಾತು

ಇವು ಯಾವುದು ನಿಮಗೆ ನೆನಪಿಲ್ಲವೇ ರಾಜ...
ಛೇ! ನಿನ್ನ ಜಾಗದಲ್ಲಿ ಆ ದೇವರೇ ಇದ್ದಿದ್ದರೆ
ಸಾವಿರ ಜನ್ಮಕ್ಕೂ ಮರೆಯಲಾರ
ಜೀವ ಚಿಲುಮೆಯ ಪ್ರತಿಮೆಯದು
ಗುಣ ಸ್ವಭಾವ ಚೆಲುವದು, ನೆನಪಿಸಿಕೊ ಮಹಾರಾಜ

ಉಂಗುರ ನುಂಗಿ ಸತ್ತಿದ್ದು ಕೇವಲ ಮೀನು ಅಷ್ಟೇ ಅಲ್ಲ
ಉಂಗುರ ತೊಟ್ಟ ಬೆರಳು
ಬೆರಳಿನ ಕೊರಳು
ಕೊರಳಿನ ಕರುಳು
ಕರುಳಿನ ಕುಡಿ
ಅವಳ ಆತ್ಮದ
ಅಸ್ಮಿತೆಗಳು ನಂಬಿಕೆಗಳು
ಸ್ತ್ರೀತನದ ಭರವಸೆಗಳು-ಕನಸುಗಳು
ಇವೆಲ್ಲವೂ ಉಂಗುರುದ
ಚಿತೆಯಲ್ಲಿ ಬೆಂದಿವೆ ಮಹಾರಾಜ

.....ಒಂದು ದೀರ್ಘ ಮೌನ...

ಅರೇ !! ಏನಿದು ನಿಮ್ಮ ಮುಖದ ಕಳೆ
ಜಾತ್ರೆಯಲ್ಲಿ ಕಳೆದ ಮಗುವಂತೆ
ಮೇಷ್ಟ್ರು ಮುಂದೆ ಎರಡರ ಮಗ್ಗಿ
ಮರೆತ ಮಗುವಿನಂತೆ

ದುಃಖಿಸಬೇಡಿ ಮಹಾರಾಜಾ
ಹೊರೆಸಿಕೊಳ್ಳಿ ನಿಮಗೆ ಗೊತ್ತಿಲ್ಲದಂತೆ ಜಾರುವ ಕಣ್ಣೀರ
ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ ಉಂಗುರದ ಕತೆ ಈಗ ಸಾಕು
ಆಯಿತೇ..
ಮತ್ತೇ ನೀವು ಬಿಡುವಿದ್ದಾಗ
ಯಾರಲ್ಲಿ ಕನ್ನಡಿ ಹಿಂದೆ
ಎಂದು ಒಂದೆ ಒಂದು ಸಲ ಸಣ್ಣ ಚಪ್ಪಾಳೆ ತಟ್ಟಿ
ಅಲ್ಲಾದೀನನ ಜಿನಿಯಂತೆ
ನಿಮ್ಮ ಮುಂದೆ ಹಾಜರಾಗಿ
ಬೇಸರಿಸಿಕೊಳ್ಳದೆ ಉಂಗುರ ಕಳೆದುಕೊಂಡ ಬೆರಳಿನ ಕರುಳ ಕತೆಯನ್ನ ನೆನಪಿಸುವೆ.

- ಬಸಯ್ಯಸ್ವಾಮಿ ಕಮಲದಿನ್ನಿ

ಬಸಯ್ಯ ಸ್ವಾಮಿ ಕಮಲದಿನ್ನಿ

ಬಸಯ್ಯಸ್ವಾಮಿ ಕಮಲದಿನ್ನಿ ಅವರು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಆಮದಿಹಾಳ ಗ್ರಾಮದವರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಎಂ.ಎ ಕನ್ನಡ ಪದವಿ ಪಡೆದಿದ್ದಾರೆ. ಅದೇ ವಿಶ್ವವಿದ್ಯಾಲಯದಲ್ಲೇ ‘ಕನ್ನಡ ಕಾದಂಬರಿಗಳಲ್ಲಿ ವಲಸೆ ಪ್ರಜ್ಞೆ’ ಎಂಬ ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಇವರ ಕವಿತೆಗಳು ಕ್ರೈಸ್ಟ್ ಯ್ಯೂನಿವರ್ಸಿಟಿ, ಬೇಂದ್ರೆ ಅಂತರ ಕಾಲೇಜು ಸ್ಪರ್ದೆ ಒಳಗೊಂಡು ವಿವಿಧೆಡೆ ಪ್ರಶಸ್ತಿ ಗೌರವ ಪಡೆದಿವೆ. ಹೊಸತಲೆಮಾರಿನ ಕವಿಯಾಗಿರುವ ಬಸಯ್ಯ ಸ್ವಾಮಿ ಕಮಲದಿನ್ನಿಯವರು ‘ಅವಳೆದೆಯ ಡೈರಿಯೊಳಗೆ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ.   

More About Author