Poem

ನಾನು ನಾನಾಗಿ ಉಳಿದಿಲ್ಲ..

ಮರೆಯಬೇಕೆಂದಾಗೆಲ್ಲ ಕಾಡುವಿಯಲ್ಲ
ಹೀಗೆಕೆಂದು ಕನವರಿಸಿದಾಗೆಲ್ಲ
ತುಟಿಪಿಟಕ್ಕೆನ್ನದೆ ಮೌನವಾಗುವಿಯಲ್ಲ
ಮನಸ್ಸಿನ ಮೂಲೆಯಲ್ಲೆಲ್ಲ ಅವಿತು
ನಿನ್ನ ಸಿಹಿ ನೆನಪುಗಳೆಲ್ಲ‌ ಹರವಿ
ಕಹಿ ಕನಸಿನಲಿ ನರಳಿಸಿದೆಯಲ್ಲ

ತಂಪಾದ ತಂಗಾಳಿ ನಿನಾಗಲಿಲ್ಲ
ನಾನೆಂದು ನಿನ್ನನ್ನು ಕಾಡಿಲ್ಲ,ಬೇಡಿಲ್ಲ
ನಿನ್ನ ಪ್ರೀತಿಗೆಂದು ಒರೆ ಹಚ್ಚಲಿಲ್ಲ
ನಿನ್ನೆದೆಗೆ ಒರಗಿ ಅಳುವಾಗೆಲ್ಲ
ನಾನು ನಾನಾಗಿ ಉಳಿದಿಲ್ಲ
ನನಗಾಗಿ ನಿನ್ನ ಹೃದಯ ಮಿಡಿಯಲಿಲ್ಲ

ನನ್ನ ಸೊತ್ತಲ್ಲ,ನಾ ನಿನ್ನ ಆಸ್ತಿಯಲ್ಲ
ಭ್ರಮೆಯ ಆಳದಿ ಸಿಲುಕಿದಾಗೆಲ್ಲ
ಹತ್ತಿರ ಸುಳಿದು ನಗುವಿಯಲ್ಲ
ಚಿತ್ತ ಕೆರಳಿಸುವ ನಿನ್ನ ಇಲ್ಲೆ
ಗುಂಡಿಟ್ಟು ಕೊಂದು ಬಿಡಲೇ
ಅಂದೆನಿಸುವ ಮನಸು ನನಗಿಲ್ಲ

ಪ್ರೀತಿಯೆಂಬ ಮಾಯೆಯಲ್ಲಿ
ಅಪರಾಧಿ ಯಾರೆಂದು ಗೊತ್ತಿಲ್ಲ
ದೂರಾದ ನಿನ್ನ ನೆನೆದಾಗೆಲ್ಲ
ಮರಗುವ ಮನಸು ಕೇಳಬೇಕಲ್ಲ
ಕಸಿದು ಸುಖ ಪಡೆವ ಹಂಗಿಲ್ಲ
ನುಸುಳಿ ಮರಗುವ,ನುಗ್ಗುವ ಕನಸಿಲ್ಲ
ಕಳವಳದ ಕವಡೆಯಾಟದಲಿ
ಕಳೆದು ಹೋಗಿಹೆನಲ್ಲ

- ಶಿವಲೀಲಾ ಹುಣಸಗಿ ಯಲ್ಲಾಪುರ

ಶಿವಲೀಲಾ ಹುಣಸಗಿ

ಕವಯತ್ರಿ ಶಿವಲೀಲಾ ಹುಣಸಗಿ ಅವರು ಎಂ.ಎ, ಬಿ.ಎಡ್ ಪದವೀಧರರು. ಉತ್ತರ ಕನ್ನಡ ಜಿಲ್ಲೆಯ ಅರಬೈಲ್ ಗ್ರಾನಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ದ್ದಾರೆ. ಕಥೆ,ಕವನ,ಲಹರಿ,ಲೇಖನ, ಟಂಕಾ, ಹಾಯ್ಕುಗಳು, ರುಬಾಯಿ,ಗಝಲ್, ಪುಸ್ತಕ ವಿಮರ್ಶೆ, ಅಂಕಣ ರಹಗಳು, ಹಾಡುವುದು, ಓದುವುದು, ಚಿತ್ರಬಿಡಿಸುವುದು, ಉಪನ್ಯಾಸ, ನೃತ್ಯ, ರೇಡಿಯೋದಲ್ಲಿ ಸ್ವರಚಿತ ಕವನ ವಾಚನ, ಹಿರಿಯ ಸಾಹಿತಿ-ಕಲಾವಿದರ ಸಂದರ್ಶನ ನಡೆಸುವುದು, ಶಾಲಾ ಮಕ್ಕಳಿಗೆ ಅನುಕೂಲವಾಗುವ ಕಿರು ನಾಟಕಗಳು, ರೂಪಕಗಳು. ನಿರೂಪಣೆ.ಇತ್ಯಾದಿ ಇವರ ಹವ್ಯಾಸಗಳು. ಬೆಂಗಳೂರು, ಕಾರವಾರ, ಧಾರವಾಡ ಕೇಂದ್ರದಿಂದ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ.  ಮಕ್ಕಳಿಗೆ ವಿಶೇಷವಾಗಿ ಬಾಂಧವ್ಯದ ಮೆರಗು ಅಂಕಣ ಪ್ರಕಟಗೊಳ್ಳುತ್ತಿದೆ. ಶಿಕ್ಷಕರ ಕಲ್ಯಾಣ ನಿಧಿಯಿಂದ ನಡೆಸುವ ರಾಜ್ಯ  ಮಟ್ಟದ ಭಾಷಣ ಸ್ಪರ್ಧೆಯಲ್ಲಿ ರಾಜ್ಯಕ್ಕೆ ದ್ವಿತೀಯ ಹಾಗೂ ಮೂರು ವಿಶ್ವವಿದ್ಯಾಲಯದ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದಿದ್ದಾರೆ.

ಕೃತಿಗಳು:  ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ (ಕವನ ಸಂಕಲನಗಳು), ಗೋರಿಯ ಸುತ್ತ ಸಪ್ತಪದಿ ತುಳಿದಾಗ (ಕಥಾ ಸಂಕಲನಗಳು), ಬೊಗಸೆಯೊಳಗಿನ ಆಕಾಶ (ಅಂಕಣ ಬರಹಗಳ ಸಂಗ್ರಹ ಕೃತಿ)

ಪ್ರಶಸ್ತಿ-ಪುರಸ್ಕಾರಗಳು:  ಅನುಪಮಾ ಸೇವಾ ಪುರಸ್ಕಾರ,  ಅಲ್ಲಮ ರಾಜ್ಯ ಪ್ರಶಸ್ತಿ, ಹೆಮ್ಮೆಯ ಕನ್ನಡಿಗ  ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ಪ್ರಶಸ್ತಿ, ಆದರ್ಶ ಶಿಕ್ಷಕಿ ಪ್ರಶಸ್ತಿ, ಕನ್ನಡ ರತ್ನ ರಾಜ್ಯ ಪ್ರಶಸ್ತಿ, ಯುಗದರ್ಶಿನಿ ರಾಜ್ಯ ಪ್ರಶಸ್ತಿ ಲಭಿಸಿವೆ. .

 

More About Author